ಗುರುವಾರ , ಫೆಬ್ರವರಿ 25, 2021
28 °C

ಬಿಜೆಪಿಯ ಧೋರಣೆ ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈತರ ಬಗ್ಗೆ ಬಿಜೆಪಿ ಹೊಂದಿರುವ ಧೋರಣೆ ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ಚಳವಳಿಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೊರಟಿದ್ದರು. ಆದರೆ, ಪೊಲೀಸರು ಅವಕಾಶ ಕೊಟ್ಟಿಲ್ಲ. ಅವಕಾಶ ಕೊಟ್ಟಿದ್ದರೆ 20 ಸಾವಿರಕ್ಕೂ ಹೆಚ್ಚು ರೈತರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ಬಿಜೆಪಿಯವರ ಈ ಧೋರಣೆಗಳು ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿವೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಮೂರು ಹೊಸ ಕಾಯ್ದೆಗಳನ್ನು ವಾಪಸ್‌ ಪಡೆಯುವುದೊಂದೇ ಈಗಿನ ಬಿಕ್ಕಟ್ಟನ್ನು ಬಗೆಹರಿಸಲು ಇರುವ ಏಕೈಕ ಪರಿಹಾರ. ಹಾಗಾಗಿ ಅವುಗಳನ್ನು ವಾಪಾಸು ಪಡೆಯುವ ಜೊತೆಗೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದಾಗಿಯೂ ಕೇಂದ್ರ ಸರ್ಕಾರ ರೈತರಿಗೆ ಭರವಸೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ ಎಂದಾದರೆ ಕಾನೂನು ರೀತಿಯಲ್ಲಿ ಭರವಸೆ ನೀಡಿ ಎಂದು ಚಳವಳಿ ನಿರತ ರೈತರು ಕೇಳುತ್ತಿದ್ದಾರೆ. ಅದರಂತೆ ಕಾನೂನು ಪ್ರಕಾರ ಭರವಸೆ ನೀಡಲು ಕೇಂದ್ರ ಸರ್ಕಾರಕ್ಕಿರುವ ಅಡ್ಡಿಯಾದರೂ ಏನು? ಕೇಂದ್ರ ಸರ್ಕಾರ ನಿಜವಾಗಿ ರೈತರ ಪರವಾಗಿದ್ದರೆ ಅವರ ಬೇಡಿಕೆಯನ್ನು ಕೂಡಲೆ ಈಡೇರಿಸಿ’ ಎಂದು ಆಗ್ರಹಿಸಿದ್ದಾರೆ.

‘ಇಂದಿನ ರಾಜಭವನ ಚಲೋ ನಮ್ಮ ಹೋರಾಟದ ಆರಂಭವಷ್ಟೇ. ಮುಂಬರುವ ವಿಧಾನಸಭೆ ಚುನಾವಣೆಯವರೆಗೆ ಹೋರಾಟ ಮುಂದುವರೆಯಲಿದೆ. ರೈತರನ್ನು ಉಳಿಸಬೇಕಾದರೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕಾದರೆ ಈ ಕಾಯಿದೆಗಳನ್ನು ವಾಪಸ್ ಪಡೆಯಲೇಬೇಕು’ ಎಂದು ಆಗ್ರಹಿಸಿದ್ದಾರೆ.

‘ನೂತನ ಕೃಷಿ ಕಾನೂನುಗಳಿಂದ ಕನಿಷ್ಠ ಬೆಂಬಲ ಬೆಲೆ ನಿಂತು ಹೋಗಲಿದೆ, ಕೃಷಿ ಮಾರುಕಟ್ಟೆಗಳು ನಾಶವಾಗಲಿವೆ. ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಣಿದು, ಅವರಿಗೆ ಗುಲಾಮರಾಗಿ ಕೇಂದ್ರದ ಸರ್ಕಾರ ಈ ಕಾಯಿದೆಗಳನ್ನು ಜಾರಿಗೆ ತಂದಿದೆಯೇ ಹೊರತು ರೈತರ ಏಳಿಗೆಗಾಗಿ ಅಲ್ಲವೇ ಅಲ್ಲ ಎಂದು ಆರೋಪಿಸಿದ್ದಾರೆ.

ರೈತರು ದಂಗೆ ಏಳಲು ಅವಕಾಶ ಮಾಡಿಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಬಯಸುತ್ತೇನೆ. ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಈ ಹಿಂದೆ ದೇಶದ ಜನತೆ ದಂಗೆ ಎದ್ದಿದ್ದರು, ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ನಾಡಿನ ರೈತರು ದಂಗೆ ಏಳುತ್ತಾರೆ. ರೈತ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನತೆ ಮುಂಬರುವ ಚುನಾವಣೆಯಲ್ಲಿ ಮನೆಗೆ ಕಳುಹಿಸುವುದು ಕೂಡ ಖಚಿತ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು