ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಾತಿನಿಧ್ಯ ಕಾನೂನಾಗಲಿ: ಮೀನಾಕ್ಷಿ ಬಾಳಿ

Last Updated 25 ಮಾರ್ಚ್ 2023, 10:53 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕೀಯ ಪಕ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವ ದಿಸೆಯಲ್ಲಿ ಮಹಿಳಾ ಮೀಸಲಾತಿ ಕಾನೂನಾಗಿ ರೂಪುಗೊಳ್ಳಬೇಕು’ ಎಂದು ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಆಗ್ರಹಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಆಶ್ರಯದಲ್ಲಿ ಶನಿವಾರ ಇಲ್ಲಿ ನಡೆದ, ‘16ನೇ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರ–ಪ್ರಾತಿನಿಧ್ಯ’ ಕುರಿತಂತೆ ನಡೆದ ಮುಕ್ತ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಈಗಾಗಲೇ ಹಲವು ರಾಜಕೀಯ ಪಕ್ಷಗಳು ಮತದಾರರಿಗೆ ಅದರಲ್ಲೂ ಪ್ರಮುಖವಾಗಿ ಮಹಿಳೆಯರಿಗೆ ಸೀರೆ, ಕುಕ್ಕರ್‌, ಗಡಿಯಾರ, ಸೈಟುಗಳ ನೀಡಿಕೆಯಂತಹ ಆಮಿಷವೊಡ್ಡುವ ಮೂಲಕ ಅವರ ಮತ ಖರೀದಿಗೆ ತೊಡಗಿವೆ. ಮಹಿಳೆಯರು ಈ ಬಗ್ಗೆ ಎಚ್ಚರ ವಹಿಸಿ ಮಹಿಳೆಯರ ಮತಗಳು ಮಾರಾಟಕ್ಕಿಲ್ಲ ಎಂಬುದನ್ನು ಮನದಟ್ಟು ಮಾಡಿಸಬೇಕು’ ಎಂದರು.

‘ರಾಜಕಾರಣಿಗಳು ಶೇ 40ರ ಕಮಿಷನ್‌ ಹಣದಲ್ಲಿಯೇ ಇಂತಹ ಆಮಿಷಗಳನ್ನು ಮತದಾರರಿಗೆ ಒಡ್ಡುತ್ತಿದ್ದಾರೆ. ಇದು ಮತದಾರರ ಬಡತನಕ್ಕೆ ಮಾಡುತ್ತಿರುವ ಅಪಮಾನ. ಅವರ ಸ್ವಾಭಿಮಾನವನ್ನು ಧ್ವಂಸ ಮಾಡುತ್ತಿರುವ ಕೆಲಸ. ಶರಣರು, ದಾರ್ಶನಿಕರು ಹುಟ್ಟಿ ಬಾಳಿದ ಈ ನಾಡಿನಲ್ಲಿ ಮತದಾರರು ಇಂತಹ ಆಮಿಷವೊಡ್ಡುವ ರಾಜಕಾರಣಿಗಳಿಗೆ ನಡುಕ ಹುಟ್ಟಿಸುವಂತಹ ಪ್ರಜ್ಞೆ ಮೆರೆಯಬೇಕಿದೆ’ ಎಂದರು.

‘ರಾಜಕಾರಣಿಗಳು ಮಹಿಳೆಯರ ಭಾವನೆಗಳನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದು ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕಗಳಲ್ಲಿ ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಮಹಿಳೆಯರ ಅಸಹಾಯಕತೆಯ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು’ ಎಂದರು.

ನಿರ್ಣಯಗಳ ಕುರಿತಂತೆ ಮಾತನಾಡಿದ ಸಿಪಿಐ (ಎಂ) ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮಿ, ‘ಇತ್ತೀಚಿಗೆ ನಾನು ಗಂಗಾವತಿಯ ಬೀದಿಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಒಂದೆಡೆ ಸೇರಿ ಗುಂಪುಗೂಡಿಕೊಂಡು ಅಭ್ಯರ್ಥಿ ಪರವಾಗಿ ಜೈಕಾರ ಹಾಕುತ್ತಾ ಹಳ್ಳಿ, ಪಟ್ಟಣ, ನಗರಗಳ ಬೀದಿಗಳಲ್ಲಿ ಸುತ್ತುವುದನ್ನು ನೋಡಿದೆ. ಈ ಜನರಿಗೆಲ್ಲಾ ದಿನವೊಂದಕ್ಕೆ ₹ 300ರಿಂದ ₹ 2 ಸಾವಿರದವರೆಗೂ ಹಣ ನೀಡಿ ಕರೆದುಕೊಂಡು ಬರಲಾಗುತ್ತಿದೆ ಎಂದು ಗೊತ್ತಾಯಿತು. ಜನಾರ್ದನ ರೆಡ್ಡಿ ಅವರ ಪರವಾಗಿ ಘೋಷಣೆ ಕೂಗುತ್ತಿದ್ದ ಈ ಹೊಸ ಟ್ರೆಂಡ್‌ ಆಘಾತಕಾರಿಯಾದದ್ದು’ ಎಂದರು.

‘ಇದು ಬಡವರ, ವೃದ್ಧರ, ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಅಸಹಾಯಕತೆಯ ಪ್ರತೀಕ. ಇಂತಹುದನ್ನು ತಡೆಯಲು ನಾವೆಲ್ಲಾ ಮುಂದಾಗಬೇಕು. ಪಕ್ಷಗಳ ಪ್ರಣಾಳಿಕೆಗಳಲ್ಲಿ ಈ ಕುರಿತು ಚರ್ಚೆ ಆಗಬೇಕು‘ ಎಂದು ಅಭಿಪ್ರಾಯಪ್ಟಟರು.

ಸಂವಾದಲ್ಲಿ ಜೆಡಿಎಸ್‌ನ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್, ಬಿಎಸ್‌ಪಿಯ ಅವನಿಕಾ, ಸಿಪಿಐಎಂಎಲ್‌ನ ಗಾಂಧಿಮತಿ, ಮಹಿಳಾ ಸಂಘಟನೆಯ ಕಮಲಾ, ಶಕುನ್‌ ಜನವಾದಿ ಸಂಘಟನೆಯ ಕೆ.ಎಸ್.ಲಕ್ಷ್ಮಿ, ಪತ್ರಕರ್ತೆ ಸಿ.ಜಿ.ಮಂಜುಳಾ, ಸಿಐಟಿಯು ಸಂಘಟನೆಯ ಮಾಲಿನಿ ಮಸ್ತಿ, ವಕೀಲೆ ಮಹಿಮಾ ಮಾತನಾಡಿ, ಸಾರ್ವಜನಿಕ ಕ್ಷೇತ್ರ, ದುಡಿಯವ ಸ್ಥಳ, ಕುಟುಂಬ ಸೇರಿದಂತೆ ಎಲ್ಲೆಡೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗಳ ಬಗ್ಗೆ ಬೆಳಕು ಚೆಲ್ಲಿದರು. ‘ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸ್ಪರ್ಧಾ ಕಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅವರನ್ನು ಶಾಸನಸಭೆಗೆ ಆರಿಸಿ ಕಳುಹಿಸಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ವಿವಿಧ ಪ್ರಗತಿಪರ ಸಂಘಟನೆ ಮತ್ತು ರಾಜಕೀಯ ಪಕ್ಷಗಳ 70ಕ್ಕೂ ಹೆಚ್ಚು ಪ್ರಮುಖ ಮಹಿಳಾ ಪ್ರತಿನಿಧಿಗಳು ಸುದೀರ್ಘ ಚರ್ಚೆ ನಡೆಸಿದರು. ಈ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಹಕ್ಕೊತ್ತಾಯ ಮಾಡಲು ನಿರ್ಣಯ ಅಂಗೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT