ಕೋರ್ಟ್ ಕಲಾಪ ನೇರ ಪ್ರಸಾರ: ಗೆಜೆಟ್ ಪ್ರಕಟಣೆಗೆ ಗಡುವು

ಬೆಂಗಳೂರು: ಹೈಕೋರ್ಟ್ ನ್ಯಾಯಪೀಠದ ಕಲಾಪಗಳನ್ನು ಯೂಟ್ಯೂಬ್ನಲ್ಲಿ ನೇರಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ ಲೈವ್ ಸ್ಟ್ರೀಮಿಂಗ್ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ. ಇದನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವುದಕ್ಕೆ ಹೈಕೋರ್ಟ್ ಒಂದು ವಾರದ ಗಡುವು ನೀಡಿದೆ.
ಇ-ಫೈಲಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ಗೆ ಸಂಬಂಧಿಸಿದಂತೆ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ‘ನಿಯಮಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಅಧಿಸೂಚನೆ ಹೊರಡಿಸಿ ಒಂದು ವಾರದಲ್ಲಿ ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಪೀಠವು ನಿರ್ದೇಶಿಸಿದೆ.
‘ಲೈವ್ ಸ್ಟ್ರೀಮಿಂಗ್ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ಯಾವುದೇ ತಿದ್ದುಪಡಿ ಮಾಡದೇ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ನಿಯಮಗಳು ಜಾರಿಗೆ ಬರುವ ದಿನಾಂಕವನ್ನು ಉಲ್ಲೇಖಿಸಿ ರಿಜಿಸ್ಟ್ರಾರ್ ಜನರಲ್ ಅಧಿಸೂಚನೆ ಹೊರಡಿಸಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಾಲಯದ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್ನ ಪೂರ್ಣಪೀಠವು ಸೆಪ್ಟೆಂಬರ್ 17ರಂದು ಒಪ್ಪಿಗೆ ನೀಡಿತ್ತು. ಈ ನಿಟ್ಟಿನಲ್ಲಿ ಪೂರ್ವ ತಯಾರಿಯ ಭಾಗವಾಗಿ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದಿಂದ ಆಯ್ದ ಪ್ರಕರಣಗಳನ್ನು ಲೈವ್ ಸ್ಟ್ರೀಮ್ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.