ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ್ಯ ತರಬೇತಿ ಬದಲು 'ಕೇಸರಿ ಶಲ್ಯ'ದ ತರಬೇತಿ: ಪ್ರಿಯಾಂಕ್‌ ಖರ್ಗೆ ಆಕ್ರೋಶ

Last Updated 9 ಫೆಬ್ರುವರಿ 2022, 11:13 IST
ಅಕ್ಷರ ಗಾತ್ರ

ಬೆಂಗಳೂರು: ಶಾಲು ಹಂಚುವವರನ್ನು, ಪ್ರತಿಭಟನೆ ಸಂಘಟಿಸುವವರನ್ನು ನಿಯಂತ್ರಿಸದೇ ಬಿಟ್ಟಿದ್ದೇಕೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಹಿಜಾಬ್‌ ವಿವಾದದ ಕುರಿತು ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯದ ಯುವಜನತೆಗೆ 'ಜಾಬ್' ದೊರಕಿಸಿಕೊಡಬೇಕಾದ ಸರ್ಕಾರ, ಶಿಕ್ಷಣದಿಂದ ವಂಚಿಸುತ್ತಿದೆ. 'ಕೌಶಲ್ಯ ತರಬೇತಿ' ನೀಡಬೇಕಾದ ಸರ್ಕಾರ 'ಕೇಸರಿ ಶಲ್ಯ'ದ ತರಬೇತಿ ನೀಡುತ್ತಿದೆ. ಪುಸ್ತಕ ಕೊಡಬೇಕಾದ ಸರ್ಕಾರ ಕೈಯಲ್ಲಿಕಲ್ಲು, ಕೋಲು ಕೊಟ್ಟು ಕಳಿಸುತ್ತಿದೆ. ವಿದ್ಯಾದೀಕ್ಷೆ ಬದಲು ತ್ರಿಶೂಲ ದೀಕ್ಷೆಗೆ ಪ್ರೇರೇಪಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದ ಮಕ್ಕಳು ತಮ್ಮ ಭವಿಷ್ಯದ ಚಿಂತನೆಯ ಏಕೈಕ ಗುರಿಯೊಂದಿಗೆ ಓದುತ್ತಿದ್ದರು. ಬೇಧಭಾವ ಅರಿಯದೆ ಆಟಪಾಠಗಳಲ್ಲಿ ಒಂದಾಗುತ್ತಿದ್ದರು. ರಾಜಕೀಯ ಹಾಗೂ ಧಾರ್ಮಿಕ ಪ್ರಲೋಭನೆಗೆ ಸಿಲುಕದೆ ನಿಷ್ಕಲ್ಮಶ ಮನಸ್ಸು ಹೊಂದಿದ್ದರು. ಇಂತಹ ಮನಸುಗಳಲ್ಲಿ ಈಗ ಏಕಾಏಕಿ ದ್ವೇಷದ ಕಿಚ್ಚು ಹಚ್ಚಲು ಬಿಜೆಪಿ ಮುಂದಾಗಿದೆ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಹಾರಬೇಕಾದ ಸ್ಥಳದಲ್ಲಿ ಕೇಸರಿ ಧ್ವಜವನ್ನು ಹಾರಿಸಲಾಯ್ತು. ಸಾಗರದಲ್ಲಿ ಶಾಸಕರ ಎದುರೇ ಹಲ್ಲೆ, ಘರ್ಷಣೆ ನಡೆಯಿತು. ಕುಶಾಲನಗರದಲ್ಲಿ ಕೇಸರಿ ಶಾಲು ಧರಿಸಲೊಪ್ಪದ ವಿದ್ಯಾರ್ಥಿಗೆ ಚೂರಿ ಇರಿಯಲಾಯ್ತು. ಪ್ರಾಧ್ಯಾಪಕರು, ಪೊಲೀಸರ ಮೇಲೆಯೇ ಹಲ್ಲೆಗಳು ನಡೆದವು. ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಲಾಯ್ತು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಬಿಜೆಪಿ ಸರ್ಕಾರವೇ ಈ ವಿವಾದ ಹಾಗೂ ಗಲಭೆಗೆ ಕಾರಣ. ಹಲವು ದಿನಗಳಿಂದ ವಿವಾದವಿದ್ದರೂ, ಬಗೆಹರಿಸಲು ಅವಕಾಶವಿದ್ದರೂ ಸರ್ಕಾರ ಇದನ್ನು ಬೆಳೆಯಲು ಬಿಟ್ಟಿತು. ರಾಜ್ಯದಾದ್ಯಂತ ಗಲಭೆಯಾಗುತ್ತದೆ ಎಂದು ಇಂಟಲಿಜೆನ್ಸ್‌ ಹಾಗೂ ಪೊಲೀಸರಿಗೆ ತಿಳಿದಿರಲಿಲ್ಲವೇ? ಶಾಲು ಹಂಚುವವರನ್ನು, ಪ್ರತಿಭಟನೆ ಸಂಘಟಿಸುವವರನ್ನು ನಿಯಂತ್ರಿಸದೆ ಬಿಟ್ಟಿದ್ದೇಕೆ?’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

‘ಗೃಹಸಚಿವರೇ, ಸಮಾಜವಾದದ ನೆಲವಾದ ನಿಮ್ಮದೇ ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆಗಳು ನಡೆದಿವೆ. ನಿಮ್ಮದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದಿರುವುದು ನಿಮ್ಮ ಅಸಾಮರ್ಥ್ಯವೇ ಅಥವಾ ಗಲಭೆಗೆ ನಿಮ್ಮ ಕುಮ್ಮಕ್ಕು ಇದೆಯೇ? ನೀವು ಜಪಿಸುವ 'ಯುಪಿ ಮಾಡೆಲ್'ನ್ನು ಜಾರಿಗೊಳಿಸಿ ಕರ್ನಾಟಕವನ್ನು ಬೆಂಕಿಯಲ್ಲಿ ಬೇಯಿಸುವ ಇರಾದೆ ಇದೆಯೇ? ಎಂದು ಪ್ರಿಯಾಂಕ್‌ ಖರ್ಗೆ ಕೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT