ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಲಿತ ವಹಿವಾಟಿನಲ್ಲಿ ರಾಜ್ಯ ಮುಂಚೂಣಿಯಲ್ಲಿ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌

Last Updated 23 ಫೆಬ್ರುವರಿ 2021, 16:11 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮಾಣಪತ್ರ ಆಧಾರಿತ ಪರವಾನಗಿ (ಎಬಿಸಿ) ಯೋಜನೆ ಅನುಷ್ಠಾನ, ಕೈಗಾರಿಕಾ ಸೌಲಭ್ಯ ಕಾಯ್ದೆ ತಿದ್ದುಪಡಿ ಮತ್ತು ಹೊಸ ಕೈಗಾರಿಕಾ ನೀತಿಯ ಘೋಷಣೆಯ ಪರಿಣಾಮವಾಗಿ ಸುಲಲಿತ ವಹಿವಾಟಿನಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಅಸೋಚಾಮ್‌ ಮಂಗಳವಾರ ಆಯೋಜಿಸಿದ್ದ ‘ನವ ಕರ್ನಾಟಕದಲ್ಲಿ ಸುಲಲಿತ ವಹಿವಾಟು’ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಸುಲಲಿತ ವಹಿವಾಟಿನಲ್ಲಿ 2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ ಈಗ 63ನೇ ಸ್ಥಾನಕ್ಕೆ ಏರಿದೆ. ಕೈಗಾರಿಕಾ ಸ್ನೇಹಿ ವಾತಾವರಣ, ನಿಯಮಗಳ ಸರಣೀಕರಣ ಮತ್ತು ಪಾರದರ್ಶಕ ಆಡಳಿತದಿಂದಾಗಿ ಕರ್ನಾಟಕ ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ’ ಎಂದರು.

ರಾಜ್ಯದಲ್ಲಿ ಉದ್ದಿಮೆಗಳ ಆರಂಭ ಮತ್ತು ವಹಿವಾಟು ನಡೆಸುವುದಕ್ಕೆ ಸಂಬಂಧಿಸಿದಂತೆ ಇದ್ದ ಜಟಿಲ ನಿಯಮಗಳನ್ನು ಸರಳೀಕರಣ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸುಲಲಿತ ವಹಿವಾಟಿಗೆ ಅವಕಾಶ ಕಲ್ಪಿಸಿದಲ್ಲಿ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಬಹುದು. ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವುದಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಶೆಟ್ಟರ್‌ ಹೇಳಿದರು.

ಪ್ರಮಾಣಪತ್ರ ಆಧಾರಿತ ಪರವಾನಗಿ ವ್ಯವಸ್ಥೆ, ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆಯ ಜಾರಿ ಮತ್ತು ಹೊಸ ಕೈಗಾರಿಕಾ ನೀತಿಗಳು ಕೈಗಾರಿಕೆಗಳ ಸ್ಥಾಪನೆಗೆ ಇದ್ದ ಹಲವು ತೊಡಕುಗಳಿಗೆ ಪರಿಹಾರ ನೀಡಿವೆ. ಈ ಎಲ್ಲ ಕ್ರಮಗಳ ಪರಿಣಾಮವಾಗಿ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ಮುನ್ನಡೆ ಸಾಧಿಸುವುದು ಖಚಿತ ಎಂದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಡಿಪಿಐಟಿ ನಿರ್ದೇಶಕಿ ಕೈಗಾರಿಕೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಉತ್ತೇಜ ಇಲಾಖೆ ನಿರ್ದೇಶಕಿ ಸುಪ್ರಿಯಾ ಎಸ್‌. ದೇವಸ್ಥಲ್ಲಿ, ರಾಜ್ಯದ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎನ್‌. ಶಿವಶಂಕರ್‌, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT