ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಕಾನೂನು ಸುವ್ಯವಸ್ಥೆ: ನಿಲುವಳಿ ಸೂಚನೆ ತಿರಸ್ಕಾರ

Last Updated 16 ಮಾರ್ಚ್ 2022, 22:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಕಾಂಗ್ರೆಸ್‌ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿರಸ್ಕರಿಸಿದರು.

ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಅಭಿವೃದ್ಧಿಗೆ ಹೊಡೆತ ಬಿದ್ದಿದೆ. ಜನರು ಭಯದ ವಾತಾವರಣದಲ್ಲಿ ಇದ್ದಾರೆ’ ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ‘ಈ ವಿಚಾರದ ಬಗ್ಗೆ ಖಾದರ್ ಅವರು ಬಜೆಟ್‌ ಮೇಲಿನ ಚರ್ಚೆಯಲ್ಲೇ ಪ್ರಸ್ತಾಪಿಸಿದ್ದಾರೆ. ಇದು ನಿಲುವಳಿ ಸೂಚನೆ ವ್ಯಾಪ್ತಿಗೇ ಬರುವುದಿಲ್ಲ. ಸಭಾಧ್ಯಕ್ಷರು ಈ ಅರ್ಜಿಯನ್ನು ತಿರಸ್ಕರಿಸಬೇಕಿತ್ತು’ ಎಂದರು. ‘ಪ್ರತಿ ಸಲ ಬ್ರಹ್ಮಾಸ್ತ್ರವನ್ನೇ ಬಿಟ್ಟರೆ ಅದಕ್ಕೆ ಅರ್ಥ ಇರುತ್ತದೆಯೇ’ ಎಂದೂ ಅವರು ಪ್ರಶ್ನಿಸಿದರು.

ಇದು ಕಾನೂನು ಸುವ್ಯವಸ್ಥೆಯ ವಿಚಾರ ಎಂದು ಕಾಂಗ್ರೆಸ್‌ ಸದಸ್ಯರು ಪ್ರತಿಪಾದಿಸಿದರು. ವಿರೋಧ ಪಕ್ಷದ ಸದಸ್ಯರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಕಿಡಿಕಾರಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

‘ಸಂಸದೀಯ ವ್ಯವಹಾರಗಳ ಸಚಿವರು ಹೇಳಿದ್ದರಲ್ಲಿ ಸತ್ಯ ಇದೆ. ನಮಗೆ ಈಗ ಯಾವುದು ನಿಲುವಳಿ ಸೂಚನೆ, ಯಾವುದು ಪ್ರಶ್ನೋತ್ತರ, ಯಾವುದು ಶೂನ್ಯ ವೇಳೆ ವ್ಯಾಪ್ತಿಗೆ ಬರುತ್ತದೆ ಎಂಬುದೇ ಗೊತ್ತಿಲ್ಲ. ಈ ಬಗ್ಗೆ ತರಬೇತಿ ಕೊಟ್ಟರೆ ಸದಸ್ಯರೇ ಬರುವುದಿಲ್ಲ’ ಎಂದು ಬೇಸರದಿಂದ ಹೇಳಿದಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ನಿಲುವಳಿ ಸೂಚನೆ ಎಂಬುದು ಪ್ರಬಲ ಅಸ್ತ್ರ. ನಮಗೆ ನಿಯಮ 60 ಹಾಗೂ ನಿಯಮ 69ರ ವ್ಯತ್ಯಾಸವೇ ಗೊತ್ತಿಲ್ಲ’ ಎಂದರು.

ಖಾದರ್‌ ಅವರಿಗೆ ವಿಚಾರ ಮಂಡನೆಗೆ ಸಭಾಧ್ಯಕ್ಷರು ಎರಡು ನಿಮಿಷಗಳ ಕಾಲಾವಕಾಶ ನೀಡಿದರು. ‘ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ. ಭವಿಷ್ಯದಲ್ಲಿ ಅನಾಹುತ ಉಂಟಾಗಲಿದೆ. ಗಲಭೆ ನಡೆದ ಬಳಿಕಸೆಕ್ಷನ್‌ 144 ಹಾಕುವ ಬದಲು ಮೊದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು‘ ಎಂದು ಖಾದರ್‌ ಸಲಹೆ ನೀಡಿದರು.

‘ಈ ರೀತಿ ಮಾತನಾಡುತ್ತಾ ಹೋದರೆ ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡಬೇಕಾಗುತ್ತದೆ’ ಎಂದು ಮಾಧುಸ್ವಾಮಿ ಎಚ್ಚರಿಸಿದರು. ‘ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರುವುದಿಲ್ಲ. ಈ ಸೂಚನೆಯನ್ನು ತಿರಸ್ಕರಿಸಲಾಗಿದೆ‘ ಎಂದು ಸಭಾಧ್ಯಕ್ಷರು ರೂಲಿಂಗ್‌ ನೀಡಿದರು.

ರನೌಟ್‌ ಆಗಬಾರದಲ್ಲ: ಖಾದರ್ ಕಾಲೆಳೆದ ಮಾಧುಸ್ವಾಮಿ
‘ಮಾಧುಸ್ವಾಮಿ ಮೇಧಾವಿಗಳು. ಆದರೆ, ಅವರಿಗೆ ತಾಳ್ಮೆ ಕಡಿಮೆ. ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಾಕಷ್ಟು ತಾಳ್ಮೆ ಇದೆ. ತಾಳ್ಮೆಯನ್ನು ಮಾಧುಸ್ವಾಮಿ ಅಳವಡಿಸಿಕೊಳ್ಳಬೇಕು’ ಎಂದು ಯು.ಟಿ.ಖಾದರ್ ಹೇಳಿದರು.

ಆಗ ಮಾಧುಸ್ವಾಮಿ, ‘ಸಂಸದೀಯ ವ್ಯವಹಾರ ಸಚಿವನಾಗಿ ನಾನು ಇಲ್ಲಿದ್ದೇನೆ. ಮುಂದಿನ ಸಾಲಿನಲ್ಲಿದ್ದ ಕಾರಣ ಸಮರ್ಥಿಸಿಕೊಂಡಿದ್ದೇನೆ. ಹಿಂದಿನ ಸಾಲಿನಲ್ಲಿ ಇದ್ದಾಗ ಒಂದು ಮಾತನಾದರೂ ಆಡಿದ್ದೇನಾ’ ಎಂದು ನಗುತ್ತಲೇ ಹೇಳಿದರು. ‘ನನ್ನ ಸಹಾಯಕ್ಕೆ ಬನ್ನಿ ಎಂದಾಗಲೂ ನೀವು ಬರಲಿಲ್ಲ’ ಎಂದು ಕಾಗೇರಿ ಹೇಳಿದರು.

ಮಾಧುಸ್ವಾಮಿ, ‘ನಿರಂತರವಾಗಿ ರನ್‌ ಹೊಡೆಯಬೇಕು ಎಂದು ಪ್ರೇಕ್ಷಕರು ಬಯಸುತ್ತಾರೆ. ಅವರು ಬಯಸುತ್ತಾರೆ ಎಂಬ ಕಾರಣಕ್ಕೆ ನಾವು ರನ್‌ಗೆ ಓಡಲು ಆಗುವುದಿಲ್ಲ. ಖಾದರ್ ಅವರೇ, ರನ್‌ ಓಡುವ ಮೊದಲು ಎದುರಿನ ಆಟಗಾರನೊಂದಿಗೆ ಸಮಾಲೋಚಿಸಬೇಕು. ಇಲ್ಲದಿದ್ದರೆ ರನ್‌ ಔಟ್‌ ಆಗುತ್ತೀರಿ’ ಎಂದು ಕಾಲೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT