ಸೋಮವಾರ, ಸೆಪ್ಟೆಂಬರ್ 27, 2021
29 °C

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಅಮಿತ್ ಶಾ ಹೇಳಿಕೆಗೆ ಬೆಂಬಲ–ತಕರಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲಾಗುವುದು ಎಂದು ಕೇಂದ್ರಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ರಾಜ್ಯದ ಬಿಜೆಪಿ ನಾಯಕರ ಪೈಕಿ ಕೆಲವರು ತಕರಾರು ಎತ್ತಿದ್ದರೆ, ಇನ್ನು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಂದಾಯ ಸಚಿವ ಆರ್‌.ಅಶೋಕ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶಾ ಹೇಳಿಕೆಯನ್ನು ಸ್ವಾಗತಿಸಿದ್ದರೆ, ಶಾಸಕ ಜಗದೀಶ ಶೆಟ್ಟರ್‌ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸಕ್ಕೆ ಅಣಿಯಾಗಿರುವ ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಅವರ ನಡೆಗೆ ತಡೆ ಹಾಕಲು, ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎಂಬ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ಅಮಿತ್ ಶಾ ಮಾಡಿದ್ದಾರೆ ಎಂಬ ವಿಶ್ಲೇಷಣೆಯೂ ಆ ಪಕ್ಷದಲ್ಲಿ ಶುರುವಾಗಿದೆ.

‘ಬೊಮ್ಮಾಯಿ ಅವರು ಆಡಳಿತದಲ್ಲಿ ಪಾರದರ್ಶಕತೆ ತರಲು ಮಹತ್ವಪೂರ್ಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿದ್ದು ಕರ್ನಾಟಕ ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುವವರು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರಿಂದ ಬಿಜೆಪಿ ಬಲವರ್ಧನೆಯಾಗಿದೆ ಎಂದು ಮಾತನಾಡುತ್ತಿದ್ದಾರೆ’ ಎಂದು ಶಾ, ಮೆಚ್ಚುಗೆಯ ಮಾತುಗಳನ್ನಾಡಿದ್ದರು. ‘ಬೊಮ್ಮಾಯಿ ನೇತೃತ್ವದಲ್ಲೇ ಮುಂದೆ ಬಿಜೆಪಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದ್ದರು. ಈ ವಿಷಯದ ಕುರಿತು ಬಿಜೆಪಿ ವಲಯದಲ್ಲಿ ಚರ್ಚೆಯೂ ಆರಂಭವಾಗಿದೆ.

‘ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ತಿಂಗಳಷ್ಟೇ ಪೂರ್ಣಗೊಳಿಸಿದೆ. ಈ ಹಂತದಲ್ಲಿ ಅವರು ಪಾಸೋ ಫೇಲೋ ಎಂದು ನಿರ್ಧರಿಸಲಾಗದು’ ಎಂದು ಶೆಟ್ಟರ್ ಹೇಳಿರುವುದು, ಶಾ ಹೇಳಿಕೆಗೆ ಪ್ರತಿಕ್ರಿಯೆ ಇದ್ದಂತಿದೆ ಎಂಬ ವ್ಯಾಖ್ಯಾನವೂ ನಡೆದಿದೆ.

ಅಶೋಕ ಬೆಂಬಲ: ‘ಅಮಿತ್ ಶಾ ಹೇಳಿಕೆಗೆ ನನ್ನ ಬೆಂಬಲವಿದೆ. ಮುಖ್ಯಮಂತ್ರಿ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಸಹಜವಾದ ಪ್ರಕ್ರಿಯೆ. ಶಾ ಹೇಳಿಕೆ ಸರಿಯಾಗಿಯೇ ಇದೆ. ಅದಕ್ಕೆ ತಮ್ಮ ಸಮರ್ಥನೆ ಇದೆ’ ಎಂದು ಆರ್. ಅಶೋಕ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಒಂದು ತಿಂಗಳಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಯಾರು ಇರುತ್ತಾರೊ‌ ಅವರ ನೇತೃತ್ವದಲ್ಲಿಯೇ ಮುಂದಿನ‌ ಚುನಾವಣೆ ಎದುರಿಸುವುದು ಸಾಮಾನ್ಯ. ಅಮಿತ್ ಶಾ ಅವರು ಇದೇ ಮಾತು ಹೇಳಿದ್ದಾರೆ. ಇದರಲ್ಲಿ ‌ವಿಶೇಷವೇನೂ ಇಲ್ಲ’ ಎಂದರು.

‘ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಅವರ ರಾಜಕೀಯ ಅನುಭವವನ್ನು‌ ಮುಂಬರುವ ದಿನಗಳಲ್ಲಿ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳಲಿದೆ. ಪಕ್ಷದಲ್ಲಿ ಯಾವ ಹಿರಿಯರನ್ನೂ ಕಡೆಗಣಿಸಿಲ್ಲ’ ಎಂದೂ ಜೋಶಿ ಹೇಳಿದರು.

ಸಾಮೂಹಿಕ ನಾಯಕತ್ವ: ಈಶ್ವರಪ್ಪ ಒಲವು
ಶಿವಮೊಗ್ಗ:
‘ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಬೇಕು ಎನ್ನುವುದು ಪಕ್ಷದ ಬಹುತೇಕ ಮುಖಂಡರ ಒಲವು. ಇನ್ನೂ ಸಮಯವಿದೆ. ಎಲ್ಲರೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದು ಅಮಿತ್ ಶಾ ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಬೊಮ್ಮಾಯಿ ಅವರು ಸರ್ಕಾರ ನಡೆಸುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್‌ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಯುತ್ತಿದೆ. ಎಲ್ಲ ಹಿರಿಯ ನಾಯಕರ ನೇತೃತ್ವ ಇರಬೇಕು ಎನ್ನುವುದು ನಮ್ಮ ಅಭಿಲಾಷೆ’ ಎಂದರು.

ಚುನಾವಣೆ ಇನ್ನೂ ದೂರ ಇದೆ: ಶೆಟ್ಟರ್‌
ಹುಬ್ಬಳ್ಳಿ:
‘ಚುನಾವಣೆ ಇನ್ನೂ ದೂರವಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ‌’ ಎಂದು ಜಗದೀಶ ಶೆಟ್ಟರ್ ಹೇಳಿದರು.

ಮುಂದಿನ ಚುನಾವಣೆಯ ನಾಯಕತ್ವ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಡಿಯೂರಪ್ಪ ಅವರು ಸ್ವಯಂ ಆಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ. ಇನ್ನು ಈ‌ ವಿಷಯದಲ್ಲಿ ‌ನಾನು ಹೇಳುವುದು ಏನೂ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು