ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾದರೆ ಕುಡಿಯಲು ಕೆಸರು ನೀರೇ ಗತಿ!

ದುಡ್ಡು ಕೊಟ್ಟು ರಾಡಿ ನೀರು ಕುಡಿಯುವ ಸ್ಥಿತಿ ಬಂದೊದಗಿದೆ– ಜನರ ಅಳಲು
Last Updated 25 ಜುಲೈ 2022, 2:40 IST
ಅಕ್ಷರ ಗಾತ್ರ

ಮಂಗಳೂರು/ಬೆಳಗಾವಿ/ಮೈಸೂರು/ಕಲಬುರಗಿ: ಮಳೆಗಾಲದ ಆರಂಭವಾದರೆ ಸಾಕು ರಾಜ್ಯದ ಹಲವೆಡೆ ಶುದ್ಧ ಕುಡಿಯುವ ನೀರಿಗಾಗಿ ಜನರ ಪರದಾಟವೂ ಶುರುವಾಗುತ್ತದೆ.

ಮಳೆಗಾಲದಲ್ಲಿ ಕಲುಷಿತ ನೀರು ಕುಡಿದು ಜನರು ಕಾಯಿಲೆ ಬೀಳುವುದು ಪ್ರತಿವರ್ಷದ ಸಾಮಾನ್ಯ ಸಂಗತಿ. ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಾರಿಯೂ ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳ ಜನರಿಗೆ ಕುಡಿಯಲು ಕೆಸರುಮಿಶ್ರಿತ ರಾಡಿ ನೀರೇ ಗತಿ!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತಗ್ಗು ಪ್ರದೇಶಗಳಿಗೆ ಪೂರೈಕೆಯಾಗುವ ಕೆಂಪು ಬಣ್ಣದ ರಾಡಿ ನೀರು ಕುಡಿಯಲು ಯೋಗ್ಯವಾಗಿಲ್ಲ.‘ದುಡ್ಡು ಕೊಟ್ಟು ರಾಡಿ ನೀರು ಕುಡಿಯುವ ಸ್ಥಿತಿ ಬಂದಿದೆ’ ಎನ್ನುವುದು ಇಲ್ಲಿಯ ಜನರ ಅಳಲು.

ತುಂಬೆ ಅಣೆಕಟ್ಟೆಯ ಮಂಗಳೂರು ನಗರಕ್ಕೆ ಪೂರೈಕೆಯಾಗುವ ನೀರು ತಗ್ಗುಪ್ರದೇಶಗಳಲ್ಲಿ ಕೆಸರು ಮಿಶ್ರಿತವಾಗಿರುತ್ತದೆ. ಉಪ್ಪಿನಂಗಡಿ, ಬಿ.ಸಿ. ರೋಡ್ ಮತ್ತಿತರ ಕಡೆ ಚರಂಡಿ ನೀರು, ಮಾಂಸಾಹಾರದ ತ್ಯಾಜ್ಯ ನೇತ್ರಾವತಿ ನದಿ ಒಡಲು ಸೇರುತ್ತಿದೆ. ಈ ನೀರನ್ನೇ ಜನರು ಕುಡಿಯಲು ಬಳಸುತ್ತಾರೆ. ಅದನ್ನು ಬಿಟ್ಟರೆ ಬೇರೆ
ಮಾರ್ಗ ಇಲ್ಲ.

ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಹಾಲಾಡಿ ಭಾಗದ ಮನೆಗಳಿಗೆ ಶುದ್ಧೀಕರಣವಾಗದನೇತ್ರಾವತಿಯ ನೀರು ನೇರವಾಗಿ ಸರಬರಾಜಾಗುತ್ತಿದೆ. ಈ ನೀರನ್ನು ಮನುಷ್ಯರು ಕುಡಿಯಲು ಸಾಧ್ಯವಿಲ್ಲ.

ಮೂರು ನದಿ ಇದ್ದರೂ ಕುಡಿಯಲು ನೀರಿಲ್ಲ: ಬೆಳಗಾವಿ ಜಿಲ್ಲೆಯಲ್ಲಿಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾದಂತಹ ಮೂರು ಪ್ರಮುಖ ನದಿ ಹರಿದರೂ ಕೆಲವೆಡೆ ಶುದ್ಧ ಕುಡಿಯುವ
ನೀರು ಮರೀಚಿಕೆಯಾಗಿದೆ. ಮಳೆಯಾದ ನಂತರ ನದಿ ತೀರದ ಗ್ರಾಮಗಳಿಗೆ ಕುಡಿಯಲು ಕೆಮ್ಮಣ್ಣು ರಾಡಿ ನೀರೇ ಅನಿವಾರ್ಯ. ಬೆಳಗಾವಿ, ಸವದತ್ತಿ, ಕಾಗವಾಡ ತಾಲ್ಲೂಕಿನ ಜುಗೂಳ, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ, ಬೈಲಹೊಂಗಲ ತಾಲ್ಲೂಕಿನ ನಯಾನಗರ, ಗೋಕಾಕ ತಾಲ್ಲೂಕಿನ ಲೋಳಸೂರ ಸೇರಿದಂತೆ140ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಾಡಿ ನೀರು ಪೂರೈಕೆಯಾಗುತ್ತಿದೆ.

ಹಾವೇರಿ ಜಿಲ್ಲೆಯ 772 ಗ್ರಾಮಗಳ ಶುದ್ಧ ನೀರಿನ ಘಟಕಗಳ ಪೈಕಿ 30 ಹಳ್ಳಿಗಳಲ್ಲಿ ಕೆಟ್ಟುನಿಂತಿವೆ. ಜನರು ನಲ್ಲಿ ನೀರನ್ನು ಸೋಸಿ ಕುಡಿಯುತ್ತಾರೆ. ಗದಗ ಜಿಲ್ಲೆಯಲ್ಲಿ ಅಸಮರ್ಪಕ ನೀರು ಪೂರೈಕೆಯಿಂದ ಜನರು ಪರದಾಡುವಂತಾಗಿದೆ.

ಮಳೆಯಾದರೆ ರಾಡಿ ನೀರು: ಭೀಮಾ ನದಿ ಕಲಬುರಗಿ ನಗರಕ್ಕೆ ಪ್ರಮುಖ ನೀರಿನ ಮೂಲ. ಜಿಲ್ಲೆಯ ಕೆಲವು ಗ್ರಾಮಗಳಿಗೆ ಕೃಷ್ಣಾ ನದಿ ನೀರು ಜೀವಜಲ. ಕಲಬುರಗಿ ನಗರದ ಕೆಲವು ಭಾಗಗಳಲ್ಲಿ ಚರಂಡಿ ಕಲುಷಿತ ನೀರು ಮತ್ತುಕೆಸರು ಮಿಶ್ರಿತ ನೀರು ಸರಬರಾಜು ಆಗುತ್ತಿದೆ.

ಚಿತ್ತಾಪುರ ತಾಲ್ಲೂಕಿನ ವಾಡಿ, ರಾವೂರ, ಯಾದಗಿರಿ ಜಿಲ್ಲೆಯ ಶಹಾ ‍ಪುರ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿಯೂ ಮಳೆಗಾಲದಲ್ಲಿ ಕೃಷ್ಣಾ ನದಿಯ ಕಾಲುವೆಗಳಿಂದ ಪೂರೈಕೆಯಾಗುವ ನೀರು ಕಲುಷಿತವಾಗಿರುತ್ತದೆ.

‘ಫಿಲ್ಟರ್ ಬೆಡ್‌ನಲ್ಲಿ ಸೂಕ್ತ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್‌ ಹಾಕುತ್ತಿಲ್ಲ. ನಗರಕ್ಕೆ ನೀರು ಪೂರೈಸುವ ಬಹುತೇಕ ಪೈಪ್‌ಲೈನ್‌ ಹಳತಾಗಿದ್ದು ಒಡೆದು ಹೋಗಿವೆ. ಅಲ್ಲಿ ಕೊಳಚೆ ನೀರು ಸೇರಿಕೊಳ್ಳುತ್ತದೆ. ಪೂರ್ಣಪ್ರಮಾಣದಲ್ಲಿ ಹೊಸ ಪೈಪ್‌ಲೈನ್ ಅಳವಡಿಸಬೇಕಿದೆ’ ಎನ್ನುತ್ತಾರೆ
ಅಧಿಕಾರಿಗಳು.

‘ಸಂಸದ ಡಾ.ಉಮೇಶ ಜಾಧವ ಸ್ವಗ್ರಾಮ ಬೆಡಸೂರು ತಾಂಡಾ ಇರುವ ಕಾಳಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕೆಳದಂಡೆ ಮುಲ್ಲಾಮಾರಿ ಯೋಜನೆಯನೀರು ಶುದ್ಧೀಕರಣವಾಗದೆ ಸರಬರಾಜು ಆಗುತ್ತಿದೆ’ ಎಂದು ಚಂದನಕೇರಾದ ಹಣಮಂತ ಪೂಜಾರಿ ಆರೋಪಿಸುತ್ತಾರೆ.

ದಾಹ ನೀಗಿಸಿದ ಮಳೆ: ಮೈಸೂರು, ಹಾಸನ, ಮಂಡ್ಯ,ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆ ಜನರ ಕುಡಿಯುವ ನೀರಿನ ದಾಹ ನೀಗಿಸಿದೆ. ತೆರೆದಬಾವಿಗಳಲ್ಲಿ ಕೈಗೆಟಕುವ ಅಂತರದಲ್ಲಿ ನೀರು ಲಭ್ಯವಾಗತೊಡಗಿದೆ.

ಮಳೆ ಕಥೆ– ವ್ಯಥೆ

ಮೈಸೂರಿನ ಗ್ರಾಮಾಂತರ ಭಾಗದಲ್ಲಿ ಕಳೆದೆರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದೂರು ಬಂದಿಲ್ಲ. ಮೈಸೂರು ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌ 1ನೇ ಹಂತ ಪೂರ್ಣಗೊಂಡಿದ್ದು, 2ನೇ ಹಂತದ ಯೋಜನೆ ಜಾರಿಗೆ ವಾರದ ಒಳಗಾಗಿ ಕಾರ್ಯಾದೇಶ ನೀಡಲಾಗುತ್ತದೆ. ಮಳೆಯಿಂದ ಅಂತರ್ಜಲ ಹೆಚ್ಚಾಗಿದ್ದು ತೆರೆದಬಾವಿ, ಕೊಳವೆಬಾವಿಗಳಲ್ಲಿ ಒರತೆ ಹೆಚ್ಚಾಗಿದೆ

-ಬಿ.ಆರ್‌. ಪೂರ್ಣಿಮಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ, ಮೈಸೂರು

****

ಗ್ರಾಮೀಣ ಭಾಗದಲ್ಲಿ ಕೆಲವೆಡೆ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದ್ದು, ತೊಂದರೆ ಎದುರಾಗಿಲ್ಲ. ಸಂಸ್ಕರಣೆ ಮಾಡಿ, ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ

-ಕಾಂತರಾಜು, ಸಿಇಒ, ಜಿಲ್ಲಾ ಪಂಚಾಯಿತಿ, ಹಾಸನ

****

ಬೆಳಗಾವಿ ನಗರಕ್ಕೆ ಪೂರೈಕೆಯಾಗುವ ನೀರು ಶುದ್ಧೀಕರಣ ಆಗುತ್ತಿಲ್ಲ ಎಂದು ಹಲವು ದೂರುಗಳು ಬಂದಿವೆ. ಈ ಬಗ್ಗೆ ಎಲ್‌ ಆ್ಯಂಡ್‌ ಟಿ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ

-ಉಮೇಶ ಶೀಗಿಹಳ್ಳಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌, ಜಲಮಂಡಳಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT