ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: ಜಲಾಶಯಗಳಿಗೆ ಒಳಹರಿವು ಹೆಚ್ಚಳ

Last Updated 7 ಜುಲೈ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆ ಸುರಿದಿದ್ದು, ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಹಲವೆಡೆ ಮನೆಗಳು ಬಿದ್ದಿವೆ. ಗ್ರಾಮಗಳಿಗೆ ನೀರು ನುಗ್ಗಿ ಸಂತ್ರಸ್ತರಾದವರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

ಉತ್ತರ ಕನ್ನಡದ ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ಆಗಾಗ ಗುಡ್ಡ ಕುಸಿಯುತ್ತಿದೆ. ಹಾಗಾಗಿ ರಾಜ್ಯ ಹೆದ್ದಾರಿ 34ರಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರ ಅವಧಿಯಲ್ಲಿ ಭಾರಿ ವಾಹನಗಳು, ಸಂಜೆ 7ರಿಂದ ಬೆಳಿಗ್ಗೆ 7ರ ಅವಧಿಯಲ್ಲಿ ಇತರ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ನಿರಂತರ ಮಳೆಯಿಂದಾಗಿ ಜಿಲ್ಲೆ ಯಲ್ಲಿ ಸಾಕಷ್ಟು ಹಾನಿಯಾಗಿದೆ. ನಗರ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಹೊನ್ನಾವರ, ಕುಮಟಾ ಮತ್ತು ಕಾರವಾರದಲ್ಲಿ ತಲಾ ಒಂದು ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಒಟ್ಟು 33 ಮಂದಿ ಆಶ್ರಯ ಪಡೆದಿದ್ದಾರೆ. ಜೂನ್ 1ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 91 ಮನೆಗಳಿಗೆ ಹಾನಿಯಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ದಿನವಿಡೀ ವರ್ಷಧಾರೆಯಾದ ಪರಿಣಾಮ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಹೊನ್ನಾವರ ತಾಲ್ಲೂಕಿನ ಗುಂಡಬಾಳ, ಬಡಗಣಿ ಮತ್ತು ಭಾಸ್ಕೇರಿ ಹಳ್ಳಗಳು ಉಕ್ಕೇರಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಗುಡ್ಡೇಬಾಳ ಕ್ರಾಸ್, ವರ್ಣಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 69ರ ಮೇಲೆ ಗುಡ್ಡ ಕುಸಿದಿದ್ದು, ತಾಲ್ಲೂ ಕು ಆಡಳಿತವು ಮಣ್ಣು ತೆರವು ಮಾಡಿದೆ.

ಭಟ್ಕಳದಲ್ಲಿ ಮನೆಯೊಂದು ಕುಸಿದಿದ್ದು, ಮಹಿಳೆ ಗಾಯಗೊಂ ಡಿದ್ದಾರೆ. ಸಿದ್ದಾಪುರ ತಾಲ್ಲೂಕಿನ ಹರಿ ಗಾರದಲ್ಲಿ, ಮಾವಿನಕೋಡ ಗ್ರಾಮದ ಕಾರೆಸಾಲದಲ್ಲಿ ಹಾಗೂ ಬಿಳಗಿ ಗ್ರಾಮ ದ‌ಲ್ಲಿ ಒಟ್ಟು ಮೂರು ಮನೆಗಳ ಮೇಲೆ ಮರಗಳು ಬಿದ್ದಿವೆ. ಯಾರಿಗೂ ಪ್ರಾಣಾಪಾಯವಾಗಿಲ್ಲ.

ಮುಂಡಗೋಡ ತಾಲ್ಲೂಕಿನ ಕಾತೂರು ಸಮೀಪ ಶಿಂಗನಹಳ್ಳಿಯಲ್ಲಿ ರಾಜ್ಯ ಹೆದ್ದಾರಿಯ ಮೇಲೆ ಮರ ಬಿದ್ದು ಸ್ವಲ್ಪ ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ತಾಲ್ಲೂಕಿನ ವಿವಿಧೆಡೆ ಮರ ಬಿದ್ದು ಮೂರು ಮನೆ ಗಳು, ಶಾಲಾ ಅಡುಗೆ ಕೊಠಡಿಗೆ ಹಾನಿ ಯಾಗಿದೆ.

ಉಳಿದಂತೆ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಜೊಯಿಡಾ ಹಾಗೂ ಕರಾವಳಿ ತಾಲ್ಲೂಕುಗಳಲ್ಲಿ ಮಧ್ಯಾಹ್ನದ ನಂತರ ಮಳೆ ಮತ್ತಷ್ಟು ವೇಗ ಪಡೆದಿದೆ. ಜಲಾಶಯಗಳಿಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವಿವಿಧೆಡೆ ಗುರುವಾರ ತುಂತುರು ಮಳೆಯಾಗಿದೆ. ಜೇವರ್ಗಿ, ಯಡ್ರಾಮಿ ಮತ್ತು ಚಿಂಚೋಳಿ ತಾಲ್ಲೂಕಿನಲ್ಲಿ ಕೊಪ್ಪಳ ನಗರ ಸೇರಿ ಯಲಬುರ್ಗಾ, ಕುಕನೂರು, ಅಳವಂಡಿ, ಮುನಿರಾಬಾದ್‌ ಮತ್ತು ತಾವರಗೇರಾದಲ್ಲಿ ಮಳೆಯಾಗಿದೆ.

ರೇಣುಕಾ ಜಲಾಶಯ: ಒಳಹರಿವು ಹೆಚ್ಚಳ

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಜಿಲ್ಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.

ಸವದತ್ತಿ ತಾಲ್ಲೂಕಿನ ನವಿಲುತೀರ್ಥದ ರೇಣುಕಾಸಾಗರ ಜಲಾಶಯದಲ್ಲಿ ಬುಧವಾರ 2,053.50 ಅಡಿ ನೀರು ಸಂಗ್ರಹವಿತ್ತು. ಗುರುವಾರ ಅದು 2,054.50 ಅಡಿಗೆ ಮುಟ್ಟಿದ್ದು, ಒಂದು ಅಡಿ ನೀರು ಏರಿಕೆಯಾಗಿದೆ. ಒಳಹರಿವಿನ ಪ್ರಮಾಣವೂ 1,664 ಕ್ಯುಸೆಕ್‌ನಿಂದ 7,729 ಕ್ಯುಸೆಕ್‌ಗೆ ಏರಿಕೆಯಾಗಿದೆ.

ಚಿಕ್ಕೋಡಿ ತಾಲ್ಲೂಕಿನ ದೂಧಗಂಗಾ ನದಿಯ ಎರಡು ಕಿರುಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 8.24 ಸೆ.ಮೀ ಮಳೆಯಾಗಿದೆ.

ಕೊಡಗು: ರಸ್ತೆಗೆ ಮಣ್ಣು ಕುಸಿದು ಸಂಚಾರ ವ್ಯತ್ಯಯ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮಡಿಕೇರಿ– ಚೆಟ್ಟಳ್ಳಿ ರಸ್ತೆಯಲ್ಲಿ ಗುರುವಾರ ಮಣ್ಣು ಕುಸಿದು ಸಂಚಾರ ಬಂದ್‌ ಆಗಿತ್ತು. ಮಡಿಕೇರಿ– ಮಂಗಳೂರು ರಸ್ತೆಯ ಕರ್ತೋಜಿ ಹಾಗೂ ಮದೆನಾಡು ಸಮೀಪ ಕುಸಿದ ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರಸ್ತೆಯ ಒಂದು ಬದಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಾವೇರಿ ಕೊಲ್ಲಿಯಲ್ಲಿ ಹೊಲ ಗಳಿಗೆ ನೀರು ನುಗ್ಗಿದೆ. ಭಾಗ ಮಂಡಲದ ಕೊಟ್ಟೂರು ಗ್ರಾಮ ದಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು 15 ಸೆಂ.ಮೀ.ನಷ್ಟು ಮಳೆ ಮಡಿಕೇರಿ ಸಮೀಪದ ಗಾಳಿ ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT