ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಆರಂಭ: ಮಕ್ಕಳ ಸಂಭ್ರಮ

ಮಕ್ಕಳಿಗೆ ಮತ್ತೆ ಸ್ವಾತಂತ್ರ್ಯ ಸಿಕ್ಕಂತಾಗಿದೆ– ಬೊಮ್ಮಾಯಿ
Last Updated 23 ಆಗಸ್ಟ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಕಾರಣಕ್ಕೆ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಪ್ರೌಢಶಾಲೆ–ಪದವಿಪೂರ್ವ ಕಾಲೇಜುಗಳ ಪುನರಾರಂಭಕ್ಕೆ ಸೋಮವಾರ ಗಳಿಗೆ ಕೂಡಿಬಂದಿದ್ದು, ಜ್ಞಾನ ದೇಗುಲಗಳಲ್ಲಿ ಹಬ್ಬದ ವಾತಾವರಣ ಮೂಡಿತ್ತು.

9ರಿಂದ 12ರವರೆಗಿನ ಭೌತಿಕ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು–ಶಿಕ್ಷಕರ ಜತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟದ ಸಚಿವರು, ಶಾಸಕರು ರಾಜ್ಯದ ವಿವಿಧೆಡೆ ಈ ಸಂಭ್ರಮಕ್ಕೆ ಸಾಕ್ಷಿಯಾದರು.

ರಾಜ್ಯದಾದ್ಯಂತ ಕೋವಿಡ್‌ ದೃಢ ಪ್ರಮಾಣ ಶೇ 2ಕ್ಕಿಂತ ಹೆಚ್ಚು ಇರುವ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಡೆ ತರಗತಿಗಳು ಆರಂಭಗೊಂಡಿವೆ. ತರಗತಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಹೀಗಾಗಿ, ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇತ್ತು.

ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ನಿರ್ಮಲರಾಣಿ ಪ್ರೌಢ
ಶಾಲೆಗೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿ, ಮಕ್ಕಳ ಜತೆಗೆ ಸಂಭ್ರಮಿಸಿದರು. ‘ಶಾಲೆ–ಕಾಲೇಜು ಮತ್ತೆ ಆರಂಭಗೊಂಡಿದ್ದರಿಂದ, ಕೋವಿಡ್‌ನಿಂದ ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ’ ಎಂದೂ ಅಭಿಪ್ರಾಯಪಟ್ಟರು.

ಕೋವಿಡ್ ಸೋಂಕು ಹರಡಲು ಅವಕಾಶ ಆಗಬಾರದೆಂಬ ಕಾರಣಕ್ಕೆ ಹೊರಡಿಸಿರುವ ಪ್ರಮಾಣಿತ ಕಾರ್ಯಾ
ಚರಣಾ ವಿಧಾನ (ಎಸ್‌ಒಪಿ) ಪಾಲನೆ ಮತ್ತು ಶಾಲಾರಂಭಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಮುಖ್ಯಮಂತ್ರಿ ಪರಿಶೀಲಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಜತೆಗಿದ್ದರು.

ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರತಿ ಬೆಳಗಿ, ಗುಲಾಬಿ ಹೂವು, ಪುಸ್ತಕ, ಪೆನ್ನು, ಮಾಸ್ಕ್‌ ನೀಡಿ ಸ್ವಾಗತಿಸಿದರು.

ಕೆಲವೆಡೆ ಬಿಸ್ಕತ್‌ ಹಂಚಲಾಗಿದೆ. ಹಲವೆಡೆ ಶಾಲೆಗಳ ಎದುರು ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿ ಸ್ವಾಗತಿಸಲಾಗಿದೆ. ಸಚಿವರುಗಳೂ ಶಾಲೆ– ಕಾಲೇಜುಗಳಿಗೆ ಭೇಟಿ ನೀಡಿ, ಕೋವಿಡ್‌ ಸುರಕ್ಷತಾ ಕ್ರಮಗಳು ಮತ್ತು ಬೋಧನಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು. ಉಚಿತವಾಗಿ ನೀರಿನ ಬಾಟಲಿ, ಸ್ಯಾನಿಟೈಸರ್‌, ಮಾಸ್ಕ್‌ ವಿತರಿಸಿದರು. ಸೋಂಕು ತಡೆಗಟ್ಟಲು ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಗಡಿ ಜಿಲ್ಲೆಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2ಕ್ಕಿಂತ ಕಡಿಮೆಯಾದ ತಕ್ಷಣ ಅಲ್ಲಿಯೂ ಶಾಲೆಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವಾರದಲ್ಲಿ ಅಲ್ಲಿಯೂ ಸೋಂಕು ಪ್ರಮಾಣ ಕಡಿಮೆ ಆಗುವ ನಿರೀಕ್ಷೆ ಇದೆ’ ಎಂದರು.

‘ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚಿದ್ದೆವು. ಈ ಅವಧಿಯಲ್ಲಿ ಆನ್‌ಲೈನ್‌ ತರಗತಿ, ಶಾಲೆಗಳ ಆವರಣದ ಹೊರಗಡೆ ಶಿಕ್ಷಣ ಕೊಡುವ ವ್ಯವಸ್ಥೆ–ಹೀಗೆ ಹಲವು ಪ್ರಯೋಗಗಳಾಗಿವೆ. ಮಕ್ಕಳ ಜೊತೆ ನಿರಂತರ ಸಂಪರ್ಕದಲ್ಲಿರುವ ಎಲ್ಲ
ಪ್ರಯತ್ನಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮಾಡಿದೆ’ ಎಂದರು.

‘ಕೋವಿಡ್‌ ಒಂದು ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಶಿಕ್ಷಣ ಮತ್ತು ಮಕ್ಕಳನ್ನು ನಿಭಾಯಿಸುವುದು ಸವಾಲಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉತ್ತಮ ಕೆಲಸ ಮಾಡಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಇಲಾಖೆಯ ಅಧಿಕಾರಿಗಳು ಕೂಡಾ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT