ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ

Last Updated 22 ಏಪ್ರಿಲ್ 2022, 6:41 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯದಾದ್ಯಂತ ಇಂದಿನಿಂದ (ಶುಕ್ರವಾರ) ಆರಂಭವಾವೆ.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಪಡೆದ ವರದಿ ಕಡ್ಡಾಯವಲ್ಲ. ಆದರೆ, ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕಡ್ಡಾಯ ಎಂದು ‌ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪರೀಕ್ಷೆಗೆ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಸಲಹಾ ಸಮಿತಿ ಎಸ್ಒಪಿ ಜಾರಿ ಮಾಡಿದೆ. ‌ಅದರಲ್ಲಿ ಪ್ರಮುಖವಾಗಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ.‌ ಲಸಿಕೆ ಪಡೆದ ಪ್ರಮಾಣಪತ್ರವನ್ನೂ ಪರಿಶೀಲಿಸುವಂತೆ ಸಲಹೆ ನೀಡಿದೆ.‌ ಆದರೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಲಸಿಕೆ ಪಡೆದ ವರದಿ ಕಡ್ಡಾಯ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಅದರ ಹೊರತಾಗಿ, ಯಾವುದಾದರೂ ವಿದ್ಯಾರ್ಥಿಗೆ ಕೋವಿಡ್‌ ಸೋಂಕು ದೃಢಪಟ್ಟರೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ‌ ಕೇಂದ್ರಗಳತ್ತ ವಿದ್ಯಾರ್ಥಿಗಳು
ತುಮಕೂರು:
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿದರು.

ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಗಳಿಗೆ ತೆರಳಿದರು. ಜಿಲ್ಲೆಯಲ್ಲಿ 28,090 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಮೊದಲ ದಿನ ವ್ಯವಹಾರ ಅಧ್ಯಯನದ ವಿಷಯದ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪರೀಕ್ಷಾ ಕೇಂದ್ರದ ಹತ್ತಿರ ವಿದ್ಯಾರ್ಥಿಗಳು
ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪರೀಕ್ಷಾ ಕೇಂದ್ರದ ಹತ್ತಿರ ವಿದ್ಯಾರ್ಥಿಗಳು

ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆಗೆ ಹಾಜರಾದ ಆರೋಪಿ
ಹುಬ್ಬಳ್ಳಿ
: ಆಕ್ಷೇಪಾರ್ಹ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ ಆರೋಪದ ಮೇಲೆ ಬಂಧಿತನಾಗಿರುವ ಆರೋಪಿ ಅಭಿಷೇಕ ಹಿರೇಮಠನನ್ನು ಪೊಲೀಸರು ಇಲ್ಲಿನ ಉಪ ಕಾರಾಗೃಹದಿಂದ ಶುಕ್ರವಾರ ನಗರದ ಪ್ರಿಯದರ್ಶಿನಿ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಭದ್ರತೆಯಲ್ಲಿ ಕರೆತಂದರು.

ಪರೀಕ್ಷೆ ಬರೆಯಲು ಆರೋಪಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 10.30ರಿಂದ ಪರೀಕ್ಷೆ ಆರಂಭವಾಗಲಿದ್ದು, ಭಾರಿ ಭದ್ರತೆ ನಡುವೆ ಅಭಿಷೇಕ ಪರೀಕ್ಷೆ ಬರೆಯಲಿದ್ದಾನೆ. ಏ. 30ರ ವರೆಗೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿತ್ತು.

ಕೊನೆ ಕ್ಷಣದಲ್ಲಿ ಪ್ರವೇಶಪತ್ರ ಪಡೆದ ಮುಸ್ಲಿಂ ವಿದ್ಯಾರ್ಥಿನಿ
ಉಡುಪಿ:
ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರ ಪೈಕಿ ಅಲಿಯಾ ಅಸಾದಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಪಡೆದುಕೊಂಡಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ತಿಳಿಸಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಆರಂಭವಾಗಲಿದ್ದು, ಉಳಿದ ವಿದ್ಯಾರ್ಥಿನಿಯರೂ ಪ್ರವೇಶಪತ್ರ ಪಡೆಯಬಹುದು ಎಂದು ಪ್ರಾಂಶುಪಾಲರು ಮಾಹಿತಿ ನೀಡಿದರು.

ಹಿಜಾಬ್ ಗೊಂದಲ ಆರಂಭವಾದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಇಬ್ಭರು ಮುಸ್ಲಿಂ ವಿದ್ಯಾರ್ಥಿನಿಯರು ಶುಕ್ರವಾರ ವಾಣಿಜ್ಯ ವಿಭಾಗದ ಬುಸಿನೆಸ್ ಸ್ಟಡೀಸ್ ಪರೀಕ್ಷೆ ಬರೆಯಬೇಕಾಗಿದೆ. ನಾಲ್ವರು ವಿಜ್ಞಾನ ಪರೀಕ್ಷೆಗಳು ಬರೆಯಬೇಕಿದೆ.

ಪರೀಕ್ಷಾ ಕೇಂದ್ರಕ್ಕೆಸಚಿವ ಬಿ.ಸಿ. ನಾಗೇಶ್ಭೇಟಿ
ಚಿಕ್ಕಮಗಳೂರು: ಪ್ರಾಥಮಿಕ ಮತ್ತು‌ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ನಗರದ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು. ಪರೀಕ್ಷಾ ಕೊಠಡಿಗಳನ್ನು ಪರಿಶೀಲಿಸಿದರು.

ಕಾಲೇಜು ಆವರಣದಲ್ಲಿ ಪರೀಕ್ಷಾರ್ಥಿಗಳೊಂದಿಗೆ ಮಾತನಾಡಿದರು.

ಯಾದಗಿರಿ: ಜಿಲ್ಲೆಯ 17 ಕೇಂದ್ರಗಳಲ್ಲಿ ದ್ವಿತೀಯ ಪಿಯು‌ ಪರೀಕ್ಷೆ
ಯಾದಗಿರಿ:
ನಗರ ಸೇರಿದಂತೆ ಜಿಲ್ಲೆಯಾದ್ಯಂತ 17 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದು, ಕೋಣೆ ಸಂಖ್ಯೆ ಪರಿಶೀಲಿಸಿಕೊಂಡು ತೆರಳುತ್ತಿದ್ದಾರೆ.

ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಸ್ಯಾನಿಟೈಸ್ ಕೈಗಳಿಗೆ ಸಿಂಪಡಿಸಿದರು.

ಸರ್ಕಾರಿ, ಅನುದಾನ ಸಹಿತ, ಅನುದಾನ ರಹಿತ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ 95 ಪದವಿ ಪೂರ್ವ ಕಾಲೇಜುಗಳಿವೆ. ಕೇಂದ್ರಗಳಿಗೆ ಇಬ್ಬರಂತೆ ಒಟ್ಟು 34 ವಿಶೇಷ ಜಾಗೃತ ಸದಸ್ಯರನ್ನು ನೇಮಿಸಲಾಗಿದೆ.

6,004 ವಿದ್ಯಾರ್ಥಿಗಳು, 4,424 ವಿದ್ಯಾರ್ಥಿನಿಯರು ಸೇರಿದಂತೆ 10,428 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮೊದಲ ದಿನ ಲಾಜಿಕ್ ಮತ್ತು ಬ್ಯುಸಿನೆಸ್ ಸ್ಟಡಿ ಪರೀಕ್ಷೆ ಇದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳು ಹಾಜರು
ಬೀದರ್
: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದಾರೆ.

ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳ ಹಾಲ್‌ಟಿಕೆಟ್‌ ಹಾಗೂ ದೇಹದ ಉಷ್ಣಾಂಶ ಪರಿಶೀಲಿಸಲಾಯಿತು. ನಂತರ ಕೊಠಡಿಗಳಿಗೆ ಕಳುಹಿಸಿಕೊಡಲಾಯಿತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಪರೀಕ್ಷಾ ಕೇಂದ್ರಗಳಿಗೆ ಹಾಜರಾದರು.

ಜಿಲ್ಲೆಯಲ್ಲಿ ಒಟ್ಟು 32 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೀದರ್‌ನಲ್ಲಿ 12, ಹುಮನಾಬಾದ್‌ನಲ್ಲಿ 7, ಔರಾದ್‌ನಲ್ಲಿ 3, ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ತಲಾ 5 ಕೇಂದ್ರಗಳು ಇವೆ. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರಿಗೆ ಕ್ಯಾಮೆರಾ ಹೊಂದಿರದ ಸಾಮಾನ್ಯ ಮೊಬೈಲ್ ಇರಿಸಿಕೊಳ್ಳಲು ಅನುಮತಿಸಲಾಗಿದೆ. ಉಳಿದ ಪರೀಕ್ಷಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ.

ಹೆಸರು ನೋಂದಾಯಿಸಿಕೊಂಡವರು
*16,476 ರೆಗ್ಯುಲರ್ ವಿದ್ಯಾರ್ಥಿಗಳು
*2,794 ಪುನಮರಾವರ್ತಿತ ವಿದ್ಯಾರ್ಥಿಗಳು
*586 ಖಾಸಗಿ ವಿದ್ಯಾರ್ಥಿಗಳು

ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ
ಚಾಮರಾಜನಗರ: 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಜಿಲ್ಲೆಯಲ್ಲೂ ಆರಂಭವಾಗಿದ್ದು, 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

4040 ವಿದ್ಯಾರ್ಥಿಗಳು, 3,925 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 7965 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಪರೀಕ್ಷಾ ಕೊಠಡಿಯೊಳಗೆ ಧಾರ್ಮಿಕ ಉಡುಪು ನಿಷೇಧಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಫಲಕದಲ್ಲಿ ಆದೇಶವನ್ನು ಪ್ರಕಟಿಸಲಾಗಿದೆ.

ಹಿಜಾಬ್ ತೆಗೆದ ವಿದ್ಯಾರ್ಥಿನಿಯರು: ಚಾಮರಾಜನಗರ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷಾ ಕೊಠಡಿಯೊಳಗೆ ತೆರಳಿದರು.

ಕಾಲೇಜು ಪ್ರಾಂಶುಪಾಲ ಎಂ.ಸೋಮಣ್ಣ ಅವರು ಧ್ವನಿವರ್ಧಕದ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶವನ್ನು ವಿವರಿಸಿದರು.

ರಾಮನಗರ: ದ್ವಿತೀಯ ಪಿ.ಯು. ಪರೀಕ್ಷೆ ಆರಂಭ
ರಾಮನಗರ:
ಇಲ್ಲಿನ 13 ಪರೀಕ್ಷಾ‌ ಕೇಂದ್ರಗಳಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆಯು ಆರಂಭ ಆಯಿತು.

ಜಿಲ್ಲೆಯಲ್ಲಿ ಈ ವರ್ಷ 9,912 ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವರಲ್ಲಿ8,483 ಹೊಸ ಅಭ್ಯರ್ಥಿಗಳು ಹಾಗೂ 1,091 ಪುನರಾವರ್ತಿತ ಅಭ್ಯರ್ಥಿಗಳು ಸೇರಿದ್ದಾರೆ. ಪ್ರತಿ ಕೇಂದ್ರದಲ್ಲೂ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರಗಳ ಒಳಗೆ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕಲಬುರಗಿ: ದ್ವಿತೀಯ ಪಿಯು ಪರೀಕ್ಷೆ ಆರಂಭ
ಕಲಬುರಗಿ:
ನಗರ ಸೇರಿದಂತೆ ಜಿಲ್ಲೆಯ 47 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದೆ.

ಅರ್ಧ ಗಂಟೆ ಮುಂಚಿತವಾಗಿಯೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು.

ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಯಿತು.

ಶುಕ್ರವಾರ ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನ ವಿಷಯದ ಪರೀಕ್ಷೆ ಬರೆಯುತ್ತಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ‌ ಶಿವಶರಣಪ್ಪ ಮುಳೆಗಾಂವ ಅವರು ನಗರದ ವಿ.ಜಿ.ಮಹಿಳಾ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯಲ್ಲಿ 29,445 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಸನ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ಹೀಗೆ ಮೂಲಸೌಕರ್ಯ ಕಲ್ಪಿಸಲಾಗಿದೆ.

ಬೆಳಗಾವಿ: ದ್ವಿತೀಯ ಪಿಯು ಪರೀಕ್ಷೆ ಆರಂಭ
ಬೆಳಗಾವಿ:
ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಶುಕ್ರವಾರ ಸುಗಮವಾಗಿ ಆರಂಭವಾಗಿದೆ.

ಜಿಲ್ಲೆಯಲ್ಲಿ 51,853 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. 90 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 24,046 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 27,807 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಜಿಲ್ಲಾ ಖಾಜಾನೆಯಿಂದ ಪ್ರಶ್ನೆ ‌ಪತ್ರಿಕೆ ಪೂರೈಕೆ ಮಾಡಲು 26 ವಾಹನಗಳನ್ನು ಬಳಸಲಾಯಿತು. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ.

ಎಲ್ಲ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಮೊದಲ ದಿನದ ಪರೀಕ್ಷೆಗೆ ವಿದ್ಯಾರ್ಥಿಗಳು ಅರ್ಧ ಗಂಟೆ ಮುಂಚಿತವಾಗಿ ಕೇಂದ್ರದಲ್ಲಿ ಹಾಜರಿದ್ದರು.

31,308 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ.

ಅವರಲ್ಲಿ ಕಲಾ ವಿಭಾಗದಲ್ಲಿ 4,329, ವಾಣಿಜ್ಯ ವಿಭಾಗದಲ್ಲಿ 14,987 ಹಾಗೂ ವಿಜ್ಞಾನ ವಿಭಾಗದಲ್ಲಿ 11,992 ವಿದ್ಯಾರ್ಥಿಗಳು ಪರೀಕ್ಷೆಗೆ‌ ನೋಂದಾಯಿತರಾಗಿದ್ದಾರೆ.

ಜಿಲ್ಲೆಯ 12 ಸರ್ಕಾರಿ, 23 ಅನುದಾನಿತ ಮತ್ತು 16 ಅನುದಾನ ರಹಿತ ಕಾಲೇಜುಗಳು ಸೇರಿ ಒಟ್ಟು 51 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಪರೀಕ್ಷಾ ಕೇಂದ್ರಕ್ಕೆ ಬುರ್ಕಾ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ಬಳಿ ಅದನ್ನು ತೆಗೆದು ಒಳಬರುವಂತೆ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT