ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಉದ್ಯಮಿಗಳ ಮೇಲಿನ ದಂಡ ಪ್ರಮಾಣ ₹3,350 ಕೋಟಿ ಇಳಿಕೆ: ಮುರುಗೇಶ ನಿರಾಣಿ

ಏಕಕಂತಿನ ತೀರುವಳಿ ಯೋಜನೆ ಜಾರಿ
Last Updated 17 ಮಾರ್ಚ್ 2021, 14:21 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲ ಮಾದರಿಯ ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ದಂಡರೂಪದಲ್ಲಿ ವಿಧಿಸಲಾದ ₹6,700 ಕೋಟಿ ಸರ್ಕಾರಕ್ಕೆ ಬರಬೇಕಾಗಿದ್ದು, ಇದರಲ್ಲಿ ಅರ್ಧದಷ್ಟನ್ನು ಕಡಿಮೆ ಮಾಡಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ಸ್ ಉದ್ಯಮಿಗಳಿಗೆ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಸುರಕ್ಷತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿಗಳಿಗೆ ಸದ್ಯ ಐದು ಪಟ್ಟು ದಂಡ ವಿಧಿಸುವ ನಿಯಮ ಚಾಲ್ತಿಯಲ್ಲಿದ್ದು, ಈ ಲೆಕ್ಕಾಚಾರದಲ್ಲಿ ಬೃಹತ್ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿದೆ. ಈ ಮೊತ್ತವನ್ನು ಅರ್ಧದಷ್ಟು ಕಡಿಮೆ ಮಾಡುವ ಜತೆಗೆ, ದಂಡದ ಬಾಕಿ ಪಾವತಿಗಾಗಿ ಏಕಕಂತು ತೀರುವಳಿ ಯೋಜನೆ ಜಾರಿ ಮಾಡಲಾಗುವುದು. ತೀರುವಳಿ ಯೋಜನೆಗಾಗಿ ರಚಿಸುವ ಸಮಿತಿಯಲ್ಲಿ ಕ್ವಾರಿ ಮಾಲೀಕರಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಗಣಿ ನಿಧಿಗೆ (ಡಿಎಂಎಫ್) ಪಾವತಿಸುವ ಪ್ರಮಾಣ ಶೇ 30ರಷ್ಟಿದೆ. ಇದನ್ನು ಶೇ 10ಕ್ಕೆ ಇಳಿಕೆ ಮಾಡಬೇಕೆಂಬ ಕ್ವಾರಿ ಮಾಲೀಕರ ಬೇಡಿಕೆಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸುವುದಾಗಿ ಅವರು ಭರವಸೆ ಕೊಟ್ಟರು.

90 ದಿನಗಳಲ್ಲಿ ಎನ್‌ಒಸಿ: ಕಲ್ಲು ಕ್ವಾರಿ ಮತ್ತು ಗಣಿಗಾರಿಕೆ ಪರವಾನಗಿ ಪಡೆಯುವ ತೊಂದರೆಗಳನ್ನು ನಿವಾರಿಸಲು ಕಂದಾಯ, ಸಾರಿಗೆ, ಅರಣ್ಯ ಮತ್ತು ಪರಿಸರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುವ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗುವುದು. ಅರ್ಜಿ ಸಲ್ಲಿಸಿದ 90 ದಿನಗಳ ಒಳಗೆ ನಿರಾಕ್ಷೇಪಣಾ ಪತ್ರವನ್ನು ಅರ್ಜಿದಾರರ ಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ನಿರಾಣಿ ಹೇಳಿದರು.

‘ದೇಶಕ್ಕೆ ಮಾದರಿಯಾದ ಗಣಿ ನೀತಿಯನ್ನು ಜಾರಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೂತನ ಗಣಿ ನೀತಿ ಜಾರಿಗೆ ತರುತ್ತೇವೆ’ ಆಶ್ವಾಸನೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.‌ ದತ್ತಾತ್ರಿ,
ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಶನ್ಸ್ ಅಧ್ಯಕ್ಷ ಎಸ್‌ ಸಂಜೀವ ಹಟ್ಟಿಹೊಳಿ, ಗಣಿ ಸುರಕ್ಷತಾ ಮಹಾನಿರ್ದೇಶಕರಾದ ಮುರಳೀಧರ್, ಶ್ಯಾಮ್ ಸುಂದರ್ ಸೋನಿ, ಉಮೇಶ್ ಎಂ.ಸಾವರ್ಕರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT