ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ದಿನವಷ್ಟೇ ಭೌತಿಕ ತರಗತಿ, ಕಠಿಣ ಮಾರ್ಗಸೂಚಿ

ಇದೇ 23 ರಿಂದ 9–10 ನೇ ತರಗತಿ ಆರಂಭ
Last Updated 16 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಇದೇ 23 ರಿಂದ 9 ಮತ್ತು 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಬೋಧನಾ ತರಗತಿಗಳು ಆರಂಭವಾಗಲಿದ್ದು, ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಕೋವಿಡ್‌ ಸೋಂಕಿನ ಪ್ರಮಾಣ ಶೇ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10 ನೇ ತರಗತಿಗಳನ್ನು (ಆ. 23 ರಿಂದ) ಪ್ರಾರಂಭದಲ್ಲಿ ಬೆಳಗಿನ ಅವಧಿಯಲ್ಲಿ ಅರ್ಧ ದಿನ ತೆರೆಯಲು ತೀರ್ಮಾನಿಸಲಾಗಿದೆ.

ದೈಹಿಕ ಅಂತರ ಕಾಪಾಡಿಕೊಂಡು ಭೌತಿಕ ತರಗತಿಗಳನ್ನು ನಡೆಸಲು ಶಾಲಾ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯಲ್ಲಿ ತಂಡಗಳಾಗಿ ಮಾಡಿ ತರಗತಿ ನಡೆಸಲಾಗುತ್ತದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ, ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ತರಗತಿಗಳು ನಡೆಯುತ್ತವೆ. ಪ್ರತಿ ಶಾಲೆಯಲ್ಲಿ 1 ರಿಂದ 8 ತಂಡಗಳನ್ನು ರಚಿಸಲು ಅವಕಾಶ ಇರುತ್ತದೆ.

ಎಸ್‌ಒಪಿ ಪ್ರಮುಖ ಅಂಶಗಳು:

*ಮಕ್ಕಳು ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ಮಗುವಿಗೆ ಕೋವಿಡ್‌–19 ರ ಸೋಂಕಿನ ಲಕ್ಷಣಗಳು ಇಲ್ಲ ಎಂಬುದನ್ನು ದೃಢೀಕರಿಸಬೇಕು

*ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಮತ್ತು ಉಪಹಾರವನ್ನು ತರುವಂತೆ ಸೂಚಿಸಬೇಕು

*ಅವಶ್ಯಕತೆ ಅನುಸಾರ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು

*ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್‌ಲೈನ್‌ ಅಥವಾ ಪರ್ಯಾಯ ವಿಧಾನದ ಮೂಲಕವೂ ಹಾಜರಾಗಬಹುದು

* ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶಿಕ್ಷಕರ ಸಂಖ್ಯೆ ಆಧರಿಸಿ ವೇಳಾ ಪಟ್ಟಿಯನ್ನು ಅಗತ್ಯಕ್ಕೆ ಅನುಗುಣವಾಗಿ ಪರಿಷ್ಕರಿಸಿ 9 ಮತ್ತು 10 ನೇ ತರಗತಿಗಳನ್ನು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳಾಗಿ ಮಾಡಿಕೊಂಡು ಭೌತಿಕ ತರಗತಿಗಳನ್ನು ನಡೆಸಬೇಕು

* ಊಟದ ವಿರಾಮದ ನಂತರ ಪ್ರೌಢ ಶಾಲೆಗಳ ಶಿಕ್ಷಕರು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪರ್ಯಾಯ ವಿಧಾನದಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳನ್ನು ನಡೆಸಬೇಕು

‘ಶುಲ್ಕ ಕಟ್ಟಲು ಬಲವಂತ ಸಲ್ಲ’

‘ಶುಲ್ಕ ಕಟ್ಟುವಂತೆ ಖಾಸಗಿ ಶಾಲೆಗಳು ಬಲವಂತ ಮಾಡುವಂತೆ ಇಲ್ಲ. ಕೋವಿಡ್‌ನಿಂದ ಪೋಷಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಶುಲ್ಕ ಸಂಬಂಧ ಹೆಚ್ಚು ಬಲವಂತ ಮಾಡಬೇಡಿ ಎಂದು ಖಾಸಗಿ ಶಾಲಾ ಸಂಘಟನೆಗಳ ಜೊತೆ ಮಾತನಾಡಿದ್ದೇನೆ. ಸಂಘಟನೆಗಳು ಒಪ್ಪಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು. ‘ಸಂಪೂರ್ಣ ಶುಲ್ಕ ಕಟ್ಟಿ ಎನ್ನುವುದೂ ಸರಿಯಲ್ಲ. ಪೋಷಕರನ್ನು ಗ್ರಾಹಕರ ರೀತಿ ನೋಡಬೇಡಿ ಎಂದಿದ್ದೇನೆ. ಪೋಷಕರ ಹಿತವನ್ನೂ ಗಮನಿಸಿ, ಶಾಲೆಯವರು ಇತಿಮಿತಿಯಲ್ಲಿ ಶುಲ್ಕ ತೆಗೆದುಕೊಳ್ಳಬೇಕು. ಶುಲ್ಕ ವಿಚಾರ ನ್ಯಾಯಾಲಯದಲ್ಲಿದೆ. ಹೀಗಾಗಿ, ನೇರವಾಗಿ ಹಿಡಿತ ಸಾಧಿಸುವುದೂ ಕಷ್ಟ’ ಎಂದೂ ಅಸಹಾಯಕತೆ ವ್ಯಕ್ತಪಡಿಸಿದರು.

ಆರಂಭಕ್ಕೆ ಮುನ್ನ ಒಂದು ವಾರ ಸ್ವಚ್ಛತೆ:

ಸುಮಾರು ಒಂದೂವರೆ ವರ್ಷಗಳಿಂದ ಶಾಲೆಗಳನ್ನು ತೆರೆಯದಿರುವ ಕಾರಣ ಇಡೀ ಶಾಲೆಯನ್ನು ಆರಂಭದ ಒಂದು ವಾರ ಪ್ರತಿದಿನ ಸಮಗ್ರವಾಗಿ ಸ್ವಚ್ಛಗೊಳಿಸಿ ಸೋಂಕು ಮುಕ್ತಗೊಳಿಸಬೇಕು ಎಂದು ಸರ್ಕಾರ ಆದೇಶಿಸಿದೆ.

* ಶಾಲೆಯ ಇಡೀ ಆವರಣ, ಶಾಲಾ ಕಾಂಪೌಂಡ್‌, ಮುಖ್ಯದ್ವಾರ, ಗೇಟ್‌, ಮೆಟ್ಟಿಲು, ಲಿಫ್ಟ್‌, ಕಟ್ಟಡದ ಮೇಲ್ಛಾವಣಿಯಲ್ಲಿನ ಧೂಳು ಒರೆಸಿ, ಸೋಂಕು ನಿವಾರಣ ದ್ರಾವಣದಿಂದ ತೊಳೆದು ಸ್ವಚ್ಛಗೊಳಿಸಬೇಕು

*ತರಗತಿ ಕೋಣೆಗಳು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌, ಕ್ರೀಡಾ ಕೊಠಡಿ, ಸಭಾಂಗಣ, ಪೀಠೋಪಕರಣಗಳು, ಅಕ್ಷರ ದಾಸೋಹ ಅಡುಗೆ ಮನೆ, ಧಾನ್ಯಗಳ ದಾಸ್ತಾನು ಕೋಣೆಗಳು, ಶೌಚಾಲಯ ಮತ್ತು ಮೂತ್ರಾಲಯಗಳನ್ನು ಎಸ್‌ಒಪಿಯಲ್ಲಿ ನಿಗದಿ ಮಾಡಿರುವ ರಾಸಾಯಿಕ ದ್ರಾವಣ ಬಳಸಿಯೇ ಸ್ವಚ್ಛಗೊಳಿಸಬೇಕು

*ವಿದ್ಯಾರ್ಥಿಗಳು ಶಾಲೆಗೆ ಬರುವ ಸಮಯದಿಂದ ಮನೆಗೆ ತೆರಳುವವರೆಗೆ ಪ್ರತಿ ಹಂತದಲ್ಲೂ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

*ವಿದ್ಯಾರ್ಥಿಗಳು ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಹ್ಯಾಂಡ್‌ ಸ್ಯಾನಿಟೈಸರ್‌ನಿಂದ ಅಥವಾ ಸಾಬೂನಿನಿಂದ ಕೈ ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಬೇಕು ಮತ್ತು ಥರ್ಮಲ್‌ ಸ್ಕ್ಯಾನರ್‌ ಮೂಲಕ ದೇಹದ ಉಷ್ಣತೆಯನ್ನು ಪರೀಕ್ಷಿಸಬೇಕು

* ವಿದ್ಯಾರ್ಥಿಗೆ ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವುದು ಇತ್ಯಾದಿ ಲಕ್ಷಣಗಳಿದ್ದಲ್ಲಿ, ಐಸೋಲೇಷನ್ ಕೊಠಡಿಯಲ್ಲಿ ತಾತ್ಕಲಿಕವಾಗಿ ಇರಿಸಿ ಪಾಲಕರ ಮೂಲಕ ಮನೆಗೆ ಕಳಿಸಬೇಕು

******

ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯ ಅಲ್ಲ. ಆನ್‌ಲೈನ್ ಮೂಲಕ ಬೇಕಾದರೂ ಶಿಕ್ಷಣ ಪಡೆಯಬಹುದು. ಈ ಆಯ್ಕೆಯನ್ನು ಪೋಷಕರಿಗೆ ಬಿಟ್ಟಿದ್ದೇನೆ.

- ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT