ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರೈತ ಹೋರಾಟದೊಂದಿಗೆ ಕರ್ನಾಟಕ' ಟ್ವಿಟರ್‌ ಟ್ರೆಂಡ್‌ ಮಾಡಲು ಸಿದ್ಧತೆ

Last Updated 5 ಫೆಬ್ರುವರಿ 2021, 13:26 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ. ಆ ಮೂಲಕ ಟ್ವಿಟರ್‌ ಅಭಿಯಾನಕ್ಕೆ ಕರವೇ ಸಿದ್ಧತೆ ನಡೆಸಿದೆ.

ಶನಿವಾರ(ಫೆ.06) ಸಂಜೆ ಐದು ಗಂಟೆಯಿಂದ #ರೈತಹೋರಾಟದೊಂದಿಗೆಕರ್ನಾಟಕ ಮತ್ತು #KarnatakaWithFarmersProtest ಎಂಬ ಟ್ವಿಟರ್ ಅಭಿಯಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, 'ಇದೊಂದು ಐತಿಹಾಸಿಕ ಸಂದರ್ಭವಾಗಿದೆ. ನಮ್ಮ ನಾಡು ರೈತರ ಜತೆ ಇದೆ ಎಂಬುದನ್ನು ಸಾರಿಸಾರಿ ಹೇಳಬೇಕಿದೆ. ಒಕ್ಕೂಟ ಸರ್ಕಾರ ರೈತರ ಹೋರಾಟವನ್ನು ದಮನ ಮಾಡಲು, ಪ್ರತಿಭಟನಾ ಸ್ಥಳಕ್ಕೆ ವಿದ್ಯುತ್, ನೀರು ಸರಬರಾಜು ನಿಲ್ಲಿಸಿದೆ. ಹಲವು ಹಂತಗಳ ಬ್ಯಾರಿಕೇಡು, ಮುಳ್ಳುಬೇಲಿಗಳ ಕೋಟೆಯನ್ನೇ ಕಟ್ಟಿ ರೈತರನ್ನು ಉಸಿರುಗಟ್ಟಿಸುವ ಕಾರ್ಯ ಮಾಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರೈತ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬಂಧಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಿ, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ನಾವು ಪ್ರತಿಭಟಿಸಬೇಕಿದೆ. ದೆಹಲಿಯಲ್ಲಿ ನಡೆಯುತ್ತಿರುವ ದೇಶದ ರೈತರ ಐತಿಹಾಸಿಕ ಹೋರಾಟಕ್ಕೆ ಈಗ ಜಗತ್ತಿನಾದ್ಯಂತ ಬೆಂಬಲ ಲಭ್ಯವಾಗಿದೆ' ಎಂದು ನಾರಾಯಣಗೌಡ ತಿಳಿಸಿದ್ದಾರೆ.

'ಈ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ರೈತರ ಹೋರಾಟವನ್ನು ಬೆಂಬಲಿಸಬೇಕಿದೆ. ಕರ್ನಾಟಕ ರಾಜ್ಯವು ಈ ದೊಡ್ಡ ಆಂದೋಲನದ ಜತೆ ಇದೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿದೆ. ದೆಹಲಿಯಲ್ಲಿ ಕೊರೆಯುವ ಚಳಿಯಲ್ಲಿ ತಿಂಗಳುಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವ ಅನ್ನದಾತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಬೇಕಿದೆ' ಎಂದು ಅವರು ಹೇಳಿದ್ದಾರೆ.

ಎಲ್ಲ ಕನ್ನಡದ ಮನಸುಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ನಾರಾಯಣಗೌಡ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT