ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನೇಮಕಾತಿ: ‘ಎ.ಸಿ’ ಹುದ್ದೆಗಾಗಿ ಸಿಎಂಗೆ ಮೈತ್ರಿ ಮನವಿ!

2011ನೇ ಸಾಲಿನ ಆಯ್ಕೆ: ಮನಬಂದಂತೆ ಕೆಎಎಸ್‌ ಹಂಚಿಕೆ ಅವಕಾಶ ಇಲ್ಲ– ಸಿಎಸ್‌
Last Updated 15 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯಲ್ಲಿ ಎಸ್‌ಟಿ–ಮಹಿಳೆ ಮೀಸಲಾತಿಯಡಿ ಸಹಾಯಕ ಆಯುಕ್ತ (ಎ.ಸಿ) ಹುದ್ದೆಯನ್ನು ನೀಡಬೇಕೆಂಬ ಡಾ. ಮೈತ್ರಿ ಎಚ್‌ಪಿಎಸ್‌ ಅವರ ಮನವಿ ಪರಿಗಣಿಸಲು ಸಾಧ್ಯವೇ ಇಲ್ಲ’ ಎಂದು ಮುಖ್ಯ ಕಾರ್ಯದರ್ಶಿ (ಸಿಎಸ್‌) ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರೂ, ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸಚಿವ ಸಂಪುಟ ಸಭೆಗೆ ವಿಷಯ ಮಂಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ!

‘ಈ ಸಾಲಿನ ಆಯ್ಕೆ ಪಟ್ಟಿಯಲ್ಲಿ 161 ಅಭ್ಯರ್ಥಿಗಳು ಮೈತ್ರಿ ಅವರಿಗಿಂತ ಮೇಲಿನ ಸ್ಥಾನಗಳಲ್ಲಿದ್ದಾರೆ. ಅವರೆಲ್ಲರಿಗೂ ಕೆಎಎಸ್‌ ಅಲ್ಲದೆ, ಬೇರೆ ಬೇರೆ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆಯ್ಕೆ ಪಟ್ಟಿಯಲ್ಲಿ ತುಂಬಾ ಕೆಳಗಿರುವ ಅಭ್ಯರ್ಥಿಯೊಬ್ಬರಿಗೆ (ಮೈತ್ರಿ) ಮನಬಂದಂತೆ ಕೆಎಎಸ್‌ ಹುದ್ದೆ ಹಂಚಿಕೆಗೆ ಅವಕಾಶವಿಲ್ಲ’ ಎಂದು ಸಿಎಸ್‌ ಅಭಿಪ್ರಾಯ ನೀಡಿದ್ದಾರೆ. ಈ ಕುರಿತ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಈ ಸಾಲಿನ ಆಯ್ಕೆ ಪಟ್ಟಿ ಪ್ರಕಾರ, ಎಸ್‌ಟಿ– ಮಹಿಳೆ ಮೀಸಲಾತಿಯಲ್ಲಿ ಎ.ಸಿ ಹುದ್ದೆಗೆ ಸುಪ್ರಿಯಾ ಬನಗರ್‌ ಎಂಬವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಕಾರ್ಯನಿರ್ವಾಹಕ ಅಧಿಕಾರಿ (ಗ್ರೂಪ್‌ ‘ಎ’) ಹುದ್ದೆಗೆ ಮೈತ್ರಿ ಆಯ್ಕೆಯಾಗಿ ಕರ್ತವ್ಯಕ್ಕೆ ಸೇರಿದ್ದಾರೆ.

ಈ ಸಾಲಿನ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಮೈತ್ರಿ, ಇಡೀ ಪ್ರಕರಣ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಕಾರಣರಾಗಿದ್ದರು. ಆದರೆ, ರಾಜ್ಯ ಸರ್ಕಾರ ಕೋರ್ಟ್‌ ತೀರ್ಪುಗಳನ್ನು ಬದಿಗಿಟ್ಟು, ಆಯ್ಕೆಯಾದವರಿಗಾಗಿ ‘ಕರ್ನಾಟಕ ಸಿವಿಲ್‌ ಸೇವಾ (2011ನೇ ಗೆಜೆಟೆಡ್‌ ಪ್ರೋಬೇಷನರ್ಸ್‌ ಆಯ್ಕೆ ಹಾಗೂ ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ– 2022’ ರೂಪಿಸಿ ಇತ್ತೀಚೆಗೆ ನೇಮಕಾತಿ ಆದೇಶ ನೀಡಿದೆ.

ಆ ಬೆನ್ನಲ್ಲೆ (ಜೂನ್‌ 29ರಂದು) ಮುಖ್ಯಮಂತ್ರಿಗೆ ಮೈತ್ರಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿ ಕ್ರಮವಹಿಸುವಂತೆ ಸಿಎಸ್‌ಗೆ ಮುಖ್ಯಮಂತ್ರಿ ಸೂಚಿಸಿದ್ದರು. ಮನವಿಗೆ ಸಂಬಂಧಿಸಿದಂತೆ ಅಭಿಪ್ರಾಯ ನೀಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿ ಪಿ. ಹೇಮಲತಾ, ‘ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅಂಥ ಸಂಸ್ಥೆ ಪ್ರಕಟಿಸಿದ ಆಯ್ಕೆ ಪಟ್ಟಿಯನ್ನು ಕೋರ್ಟ್‌ ಆದೇಶದ ಹೊರತಾಗಿ ಮಾರ್ಪಡಿಸಲು ಅವಕಾಶ ಇಲ್ಲ. ಒಂದೊಮ್ಮೆ ಬದಲಿಸಿದರೆ ಕಾನೂನುಬಾಹಿರವಾಗುತ್ತದೆ. ಈ ಸಾಲಿನ ನೇಮಕಾತಿಗೆ ಸರ್ಕಾರ ರೂಪಿಸಿದ ವಿಶೇಷ ಕಾಯ್ದೆಯಲ್ಲೂ ‌ಅದಕ್ಕೆ ಅವಕಾಶ ಇಲ್ಲ. ಗೆಜೆಟೆಡ್‌ ಪ್ರೊಬೇಷನರ್ಸ್‌ ನೇಮಕಾತಿ ನಿಯಮಗಳಲ್ಲೂ ಆಸ್ಪದವಿಲ್ಲ. ‘ಅರ್ಜಿದಾರಳನ್ನು (ಮೈತ್ರಿ) ಎ.ಸಿ ಹುದ್ದೆಗೆ ಪರಿಗಣಿಸಲು ಕಾನೂನು ಅವಕಾಶಗಳು ಇಲ್ಲದಿರುವುದರಿಂದ ಮತ್ತು ಒಂದೊಮ್ಮೆ ಹುದ್ದೆ ನೀಡಿದರೆ ಆಯ್ಕೆ ಪಟ್ಟಿಯಲ್ಲಿ ಆಕೆಗಿಂತ ಮೇಲಿರುವ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ’ ಎಂದು ಉಲ್ಲೇಖಿಸಿದ್ದರು.

ಆದರೆ, ಈ ಅಭಿಪ್ರಾಯದ ಬಗ್ಗೆ ಮತ್ತೊಮ್ಮೆ ಚರ್ಚಿಸುವಂತೆ ಮುಖ್ಯ ಕಾರ್ಯದರ್ಶಿಯವರು ಹೇಮಲತಾ ಅವರಿಗೆ ಸೂಚಿಸಿದ್ದರು. ಆದರೆ, ಈ ಬಗ್ಗೆ ಚರ್ಚಿಸಲಾಗಿದ್ದು, ಮೊದಲಿನ ಅಭಿಪ್ರಾಯದಂತೆ ಆದೇಶ ಹೊರಡಿಸಬಹುದು ಎಂದು ಮತ್ತೆ ಹೇಮಲತಾ ಮತ್ತೆ ತಿಳಿಸಿದ್ದರು. ಅದರಂತೆ, ಮುಖ್ಯಮಂತ್ರಿಗೆ ಮುಖ್ಯ ಕಾರ್ಯದರ್ಶಿ ಕಡತ ಮಂಡಿಸಿದ್ದರು.

‘ಮೌಖಿಕ ಸಂದರ್ಶನದಲ್ಲಿ ಮೋಸ’
ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ‘ಮುಖ್ಯ ಪರೀಕ್ಷೆಯಲ್ಲಿ 1,009 ಅಂಕ ಗಳಿಸಿದರೂ ಕೆಪಿಎಸ್‌ಸಿ ಸದಸ್ಯರು ದುರುದ್ದೇಶದಿಂದ ಮೌಖಿಕ ಸಂದರ್ಶನದಲ್ಲಿ 75 ಅಂಕ ನೀಡಿದ್ದರು. ನನ್ನದೇ ವರ್ಗಕ್ಕೆ ಸೇರಿದ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಮುಖ್ಯ ಪರೀಕ್ಷೆಯಲ್ಲಿ 937.5 ಅಂಕ ಗಳಿಸಿದ್ದು, ಅವರಿಗೆ ಮೌಖಿಕ ಸಂದರ್ಶನದಲ್ಲಿ 150 ಅಂಕ ನೀಡಲಾಗಿದೆ. ಇದರಿಂದಾಗಿ ನಾನು ಎ.ಸಿ ಹುದ್ದೆ ವಂಚಿತಳಾಗಿದ್ದೇನೆ. ಮುಖ್ಯ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿರುವುದರಿಂದ ನನಗೆ ಎ.ಸಿ. ಹುದ್ದೆ ನೀಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT