ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಕಾರ್ಯಕಾರಿ ಸಮಿತಿ ಸಭೆಯಲ್ಲಿ ಏರುಧ್ವನಿಯಲ್ಲಿ ಮಾತನಾಡಿದರೆ ಕ್ರಮ

ಕಾರ್ಯಕಾರಿ ಸಮಿತಿ ಸದಸ್ಯರಿಗೆ ಮಹೇಶ ಜೋಶಿ ಎಚ್ಚರಿಕೆ
Last Updated 20 ಮಾರ್ಚ್ 2023, 20:29 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಕೂಡದು, ಸಭೆಯ ನಿರ್ಣಯಗಳ ಬಗ್ಗೆ ಮಾಧ್ಯಮ ಹೇಳಿಕೆ ನೀಡಬಾರದು ಸೇರಿ ಹಲವು ನಿರ್ಬಂಧಗಳನ್ನು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ವಿಧಿಸಿದ್ದಾರೆ.

ಈ ಬಗ್ಗೆ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮಾರ್ಗಸೂಚಿಯನ್ನು ಸೋಮವಾರ ಹೊರಡಿಸಿದ್ದಾರೆ. ಈ ನಿರ್ಬಂಧಗಳು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

'ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆಲವು ಜಿಲ್ಲಾ ಘಟಕಗಳ ಅಧ್ಯಕ್ಷರು ತಮ್ಮ ಅಸ್ತಿತ್ವ ತೋರಿಸಲು ಪದೇ ಪದೇ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಉಳಿದ ಜಿಲ್ಲಾಧ್ಯಕ್ಷರಿಗೆ ಸಭೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಎಲ್ಲರಿಗೂ ಮಾತನಾಡಲು ಅವಕಾಶ ನೀಡುವಂತೆ ಸೂಕ್ತ ರೀತಿಯಲ್ಲಿ ಸಭೆ ಜರುಗಿಸಬೇಕೆಂದು ಕೋರಿರುತ್ತಾರೆ. ಆದ್ದರಿಂದ ಮಾರ್ಗಸೂಚಿ ಹೊರಡಿಸಲಾಗಿದೆ' ಎಂದು ಮಹೇಶ ಜೋಶಿ ತಿಳಿಸಿದ್ದಾರೆ.

ಮಾರ್ಗಸೂಚಿಯಲ್ಲಿ ಏನಿದೆ?:

l ಕಾರ್ಯಕಾರಿ ಸಮಿತಿ ಸಭೆಯು ಸರಿಯಾದ ಸಮಯಕ್ಕೆ ಪ್ರಾರಂಭವಾಗುವುದರಿಂದ ಸಭಾಸೂಚನಾ ಪತ್ರದಲ್ಲಿ ಸೂಚಿಸಿದ ಸಮಯಕ್ಕೆ ಸರಿಯಾಗಿ ಹಾಜರಾಗುವುದು. ತಡವಾಗಿ ಬಂದಲ್ಲಿ 15 ನಿಮಿಷ ನೋಡಿ, ಗೈರುಹಾಜರಿ ಎಂದು ಪರಿಗಣಿಸಲಾಗುವುದು. 15 ನಿಮಿಷಗಳ ನಂತರ ಸಭಾ ಕೊಠಡಿಯ ಬಾಗಿಲನ್ನು ಮುಚ್ಚಲಾಗುವುದು.

l ಕಾರ್ಯಸೂಚಿಯಲ್ಲಿ ತಿಳಿಸಿರುವ ವಿಷಯಗಳ ಹೊರತಾಗಿ ಸದಸ್ಯರು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಏನಾದರೂ ಚರ್ಚಿಸಬೇಕಿದ್ದಲ್ಲಿ, ಆ ವಿಷಯಗಳ ಕುರಿತು ಸಭೆ ನಡೆಯುವ ಮೂರು ದಿನಗಳ ಮುಂಚಿತವಾಗಿ ಅಧ್ಯಕ್ಷರಿಗೆ ಲಿಖಿತ ರೂಪದಲ್ಲಿ ನೀಡತಕ್ಕದ್ದು. ಅಂತಹ ವಿಷಯಗಳ ಚರ್ಚೆಗೆ ಅಧ್ಯಕ್ಷರ ಅನುಮತಿ ಪಡೆದುಕೊಂಡ ನಂತರ ಸಭೆಯಲ್ಲಿ ಚರ್ಚಿಸುವುದು.

l ಸಭೆಯಲ್ಲಿ ಮಾತನಾಡಲು ಹಾಗೂ ಪ್ರಶ್ನೆಗಳನ್ನು ಕೇಳುವಾಗ ಕೈ ಎತ್ತುವುದರ ಮೂಲಕ ಸಭಾಧ್ಯಕ್ಷರ ಅನುಮತಿಯನ್ನು ಪಡೆದುಕೊಳ್ಳುವುದು. ಬೇರೆ ಸದಸ್ಯರು ತಮ್ಮ ಮಾತುಗಳನ್ನು ಪೂರ್ಣಗೊಳಿಸುವವರೆಗೂ ಮಧ್ಯೆ ಮಾತನಾಡುವುದು ಸಮಂಜಸವಾದುದ್ದಲ್ಲ. ಆದ್ದರಿಂದ ಎಲ್ಲರಿಗೂ ಸಭೆಯಲ್ಲಿ ಮಾತನಾಡಲು ಅವಕಾಶವಾಗುವಂತೆ ನಡೆದುಕೊಳ್ಳುವುದು.

l ಬೇರೆಯವರಿಗೆ ಮಾತನಾಡಲು ಅವಕಾಶವಾಗದಂತೆ ಸಭಾಧ್ಯಕ್ಷರ ಅನುಮತಿ ಪಡೆಯದೇ ಪದೇ ಏರುಧ್ವನಿಯಲ್ಲಿ ಮಾತನಾಡಿದ್ದಲ್ಲಿ, ಅಂತಹ ಸದಸ್ಯರ ಮೇಲೆ ಸಭಾ ಅಧ್ಯಕ್ಷರ ಕಾರ್ಯನಿರ್ವಹಣೆಯಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.

l ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಅಧ್ಯಕ್ಷರ ಹೊರತುಪಡಿಸಿ, ಬೇರೆಯವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಬಾರದು. ತಮ್ಮ ಜಿಲ್ಲಾ, ಗಡಿನಾಡು ಘಟಕಗಳ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ತಾವು ಮಾಧ್ಯಮಗಳಲ್ಲಿ ಹೇಳಿಕೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT