ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ: ನಿಯಮ ತಿದ್ದುಪಡಿಗೆ ಕೆಎಟಿ ನಿರ್ದೇಶನ

Last Updated 18 ಸೆಪ್ಟೆಂಬರ್ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ಹೈದರಾಬಾದ್ ಕರ್ನಾಟಕ ವೃಂದ ಪಡೆಯಲು 45 ದಿನಗಳ ಒಳಗೆ ಅರ್ಹತಾ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮಕ್ಕೆ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನಿರ್ದೇಶನ ನೀಡಿದೆ.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ (ಎಸಿಸಿಟಿ) ಸವಿತಾ ಆರ್. ಇನಾಂದಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಬಿ. ಬೂದಿಹಾಳ್ ಮತ್ತು ಆಡಳಿತ ಸದಸ್ಯ ಎನ್. ಶಿವಶೈಲಂ ಅವರಿದ್ದ ಪೀಠ, ಈ ಮಹತ್ವದ ಆದೇಶ ನೀಡಿದೆ.

2012 ಜುಲೈ 27ರಂದು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ (ಸಿಟಿಒ) ನೇಮಕಗೊಂಡಿದ್ದ ಸವಿತಾ ಅವರು, 2013ರಲ್ಲಿ ಬಿರಾದರ್ ಎಂಬುವರನ್ನು ವಿವಾಹವಾದ ನಂತರ ಹೈದರಾಬಾದ್ ಕರ್ನಾಟಕ ವೃಂದದ ಅಡಿ ಮೀಸಲಾತಿಗಾಗಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, 2019ರಲ್ಲಿ ಪ್ರಮಾಣ ಪತ್ರ ಲಭ್ಯವಾಗಿದ್ದು, ಅದನ್ನು ಅವರು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.

ಆದರೆ, ನೇಮಕಗೊಂಡ 45 ದಿನಗಳ ಒಳಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮ ಇರುವ ಕಾರಣ ಸವಿತಾ ಪ್ರಮಾಣ ಪತ್ರವನ್ನು ಸರ್ಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸವಿತಾ ಅವರು ಕೆಎಟಿ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ನ್ಯಾಯಪೀಠ, ‘‌ಇಂತಹ ಕಾನೂನುಬಾಹಿರ ನಿಯಮದಿಂದಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಪದೇಪದೇ ನ್ಯಾಯಾಲಯಗಳ ಕದತಟ್ಟುವ ಸ್ಥಿತಿ ಇದೆ. ಹಾಗಾಗಿ, ಕೂಡಲೇ ಈ ನಿಯಮಕ್ಕೆ ತಿದ್ದುಪಡಿ ಮಾಡಿ’ ಎಂದು ತಿಳಿಸಿದೆ.

ಸ್ಥಳೀಯ ವೃಂದ (ಹೈ-ಕ ವೃಂದ) ಪಡೆಯಲು ಸವಿತಾ ಅವರು ಸಲ್ಲಿಸಿದ್ದ ಮನವಿಯನ್ನು 2019ರಲ್ಲಿ ತಿರಸ್ಕರಿಸಿದ್ದ ಸರ್ಕಾರದ ಆದೇಶವನ್ನೂ ರದ್ದುಗೊಳಿಸಿರುವ ನ್ಯಾಯಮಂಡಳಿ, ಮೂರು ತಿಂಗಳಲ್ಲಿ ಅವರಿಗೆ ಸ್ಥಳೀಯ ವೃಂದದ ಮೀಸಲು ಒದಗಿಸುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT