ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣ: ನಳಿನ್‌ಗೆ ಮುಂದಿವೆ ಸವಾಲು

Last Updated 26 ಆಗಸ್ಟ್ 2020, 21:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನಳಿನ್ ಕುಮಾರ್‌ ಕಟೀಲ್ ಅವರು ಅಧಿಕಾರ ಗ್ರಹಣ ಮಾಡಿ ಇದೇ 27 ಕ್ಕೆ ಒಂದು ವರ್ಷ ತುಂಬಲಿದೆ.

ಮೈತ್ರಿ ಸರ್ಕಾರ ಪತನಗೊಂಡ ಬಳಿಕ, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಳಿನ್‌ ಕುಮಾರ್‌ ಅವರನ್ನು ನೇಮಕ ಮಾಡಲಾಯಿತು. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರೇ ಈ ನೇಮಕದ‌ ಹಿಂದಿನ ಪಾತ್ರಧಾರಿ.

ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಎದುರಾದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆದ್ದುಕೊಂಡಿತು. ಈ ಗೆಲುವಿನಲ್ಲಿ ನಳಿನ್‌ ಪಾತ್ರಕ್ಕಿಂತ ಬಿಜೆಪಿಗೆ ವಲಸೆ ಬಂದ ಶಾಸಕರ ವೈಯಕ್ತಿಕ ವರ್ಚಸ್ಸು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವರ್ಚಸ್ಸು ಕೆಲಸ ಮಾಡಿತ್ತು. ಆದರೆ, ಪಕ್ಷದ ‘ಸಾರಥ್ಯ’ ನಳಿನ್‌ ಅವರದ್ದೇ ಆದ್ದರಿಂದ ಗೆಲುವಿನ ತುರಾಯಿ ಕೂಡಾ ನಳಿನ್‌ಗೆ ಅಯಾಚಿತವಾಗಿ ಸಿಕ್ಕಿತು.

ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ದೆಹಲಿಯಲ್ಲಿ ವರಿಷ್ಠರು ಇರುವುದರಿಂದ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಸಮಸ್ಯೆ ಇವರನ್ನು ಕಾಡುವುದಿಲ್ಲ. ಆದರೆ, ನಿಗಮ– ಮಂಡಳಿ ನೇಮಕದಲ್ಲಿ ತಮ್ಮನ್ನು ಕೇಳಿಲ್ಲ ಎಂಬ ಕಾರಣಕ್ಕೆ, ಪದಾಧಿಕಾರಿಗಳ ನೇಮಕದಲ್ಲಿ ಬಿಎಸ್‌ವೈ ಗಮನಕ್ಕೆ ತಾರದೇ ಪಟ್ಟಿ ಪ್ರಕಟಿಸಿ ನಳಿನ್‌, ಜಾಣ ನಡೆ ತೋರಿದ್ದರು.

‘ನಳಿನ್ ಅವರು ಈ ಹಿಂದೆ ತಾವೊಬ್ಬ ಪಕ್ಷದ ‘ಸಾಮಾನ್ಯ ಕಾರ್ಯಕರ್ತ’ ಎಂದು ಹೇಳಿಕೊಂಡಿದ್ದರು. ಅಧ್ಯಕ್ಷರಾದ ಬಳಿಕವೂ ಬಹುತೇಕ ಹಾಗೆಯೇ ನಡೆದುಕೊಂಡಿದ್ದಾರೆ. ಆದರೆ, ಪ್ರಬಲ ನಾಯಕರಾಗಿ ಹೊರಹೊಮ್ಮುವ ಯಾವುದೇ ಲಕ್ಷಣ ಈವರೆಗೆ ತೋರಿಸಿಲ್ಲ. ಪಕ್ಷದ ಸಂಘಟನೆ ಅಥವಾ ಸದೃಢವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಯಾವುದೇ ರಚನಾತ್ಮಕ ಕ್ರಮಗಳನ್ನು ಹಮ್ಮಿಕೊಂಡಿಲ್ಲ’ ಎಂಬುದು ಪಕ್ಷದೊಳಗಿನ ಕೆಲವು ನಾಯಕರ ದೂರು.

ಜಿಲ್ಲಾಪಂಚಾಯಿತಿ, ಬಿಬಿಎಂಪಿ ಚುನಾವಣೆಗಳು ಎದುರಾಗಲಿವೆ. ರಾಜ್ಯ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಿದ್ದರೂ ಪ್ರದೇಶವಾರು ಅಥವಾ ಜಿಲ್ಲಾವಾರು ಸಂಘಟನೆಯ ಉಸ್ತುವಾರಿ ಹಂಚಿಕೆ ಮಾಡಿಲ್ಲ. ಏಕಾಏಕಿ ಚುನಾವಣೆ ಘೋಷಣೆಯಾದರೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗದೇ ತೊಂದರೆಗೆ ಸಿಲುಕಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಕ್ಷರು ಯೋಚನೆಯನ್ನೇ ಮಾಡಿಲ್ಲ ಎಂಬ ಟೀಕೆಗಳೂ ಇವೆ.

ಸಾಧ್ಯವಾಗದ ಸಮನ್ವಯ: ಸರ್ಕಾರ ಮತ್ತು ಪಕ್ಷದ ಜತೆ ಸಮನ್ವಯಕ್ಕೆ ನಳಿನ್‌ ಅವರು ಮುಖ್ಯಮಂತ್ರಿ ಜತೆ ನಿರಂತರ ಚರ್ಚೆ ಮತ್ತು ಸಮಾಲೋಚನೆಯಲ್ಲಿ ತೊಡಗಬೇಕು. ಅದು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಯವರ ವಯಸ್ಸಿನ ಕಾರಣಕ್ಕೆ ಅವರ ಜತೆ ಸಮನ್ವಯ ಕಷ್ಟವಾಗಿರಬಹುದು. ಆದರೆ, ಉಪಮುಖ್ಯಮಂತ್ರಿಗಳು ಮತ್ತು ಇತರ ಸಚಿವರ ಜತೆ ಆ ಬಾಂಧವ್ಯ ಬೆಳೆಸಲು ಇರುವ ಅಡ್ಡಿ ಏನು ಎಂಬ ಚರ್ಚೆಯೂ‍ಪಕ್ಷದ ವಲಯದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT