ಮಂಗಳವಾರ, ನವೆಂಬರ್ 29, 2022
21 °C

ಅ.28ರಂದು ‘ಕೋಟಿ ಕಂಠ’ದಲ್ಲಿ ಗಾಯನ- ವಿಶ್ವದೆಲ್ಲೆಡೆ ಮೊಳಗಲಿವೆ ಐದು ಕನ್ನಡ ಗೀತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ವರ್ಷ ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷ ವಾಕ್ಯದೊಂದಿಗೆ ಏರ್ಪಡಿಸಿದ್ದ ‘ಲಕ್ಷ ಕಂಠ’ ಗಾಯನ ಯಶಸ್ವಿಯಾಗಿದ್ದ ಹಿನ್ನೆಲೆಯಲ್ಲಿ ಇದೇ 28 ರಂದು ಏಕಕಾಲದಲ್ಲಿ ರಾಜ್ಯದಾದ್ಯಂತ ಕನ್ನಡದ ಕವಿಗಳ ಜನಪ್ರಿಯ ಗೀತೆಗಳ ಕೋಟಿ ಕಂಠ ಗಾಯನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ.

ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕವಲ್ಲದೇ, ಅನಿವಾಸಿ ಕನ್ನಡಿಗರು, ಹೊರನಾಡ ಮತ್ತು ಗಡಿನಾಡ ಕನ್ನಡಿಗರೂ ಭಾಗವಹಿಸಲಿದ್ದಾರೆ. ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಬಾರಿ ಒಟ್ಟು ಐದು ಗೀತೆಗಳನ್ನು ಗಾಯನಕ್ಕಾಗಿ ಆಯ್ಕೆ ಮಾಡಲಾಗಿದೆ. ಕುವೆಂಪು ವಿರಚಿತ ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’ ಹಾಗೂ ‘ಬಾರಿಸು ಕನ್ನಡ ಡಿಂಡಿಮವ’, ಡಾ. ಚೆನ್ನವೀರ ಕಣವಿ ಅವರ ‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ’,
ಡಾ.ಡಿ.ಎಸ್‌.ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’, ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಗುವುದು. ಈ ಐದು ಗೀತೆಗಳಲ್ಲದೇ, ಆಸಕ್ತರು ಬೇರೆ ಕನ್ನಡ ಗೀತೆಗಳನ್ನು ಸಮಯದ ಮಿತಿ ಆಧರಿಸಿ ಪ್ರಸ್ತುತಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ತಾಲ್ಲೂಕು ಕೇಂದ್ರಗಳು, ದೆಹಲಿ ಕನ್ನಡ ಸಂಘ, ಹೊರನಾಡು, ಗಡಿನಾಡ ಕನ್ನಡ ಸಂಘಗಳ ಕಚೇರಿ, ವಿಧಾನಸೌಧದ ಮೆಟ್ಟಿಲು ಹಾಗೂ ವಿಧಾನಸೌಧ– ವಿಕಾಸ ಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಮೂಹ ಗಾಯನ ನಡೆಸುವರು ಎಂದು ತಿಳಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಜೆಸ್ಟಿಕ್‌ ರೈಲು ನಿಲ್ದಾಣ, ಮೆಟ್ರೊ ನಿಲ್ದಾಣದಲ್ಲೂ ಈ ಐದು ಕನ್ನಡ ಗೀತೆಗಳನ್ನು ಹಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ, ನಾಡಿನ ಪ್ರಮುಖ ಪ್ರವಾಸಿ ಸ್ಥಳಗಳು, ಕೋಟೆಗಳು, ಕಡಲತೀರ, ಐಟಿ ಕಂಪನಿಗಳು, ಆಸ್ಪತ್ರೆ ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಅಭಿಯಾನ ನಡೆಯಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.