ಮತ್ತೆ ನಿಯಮ ಮೀರುತ್ತಿರುವ ಕೆಎಸ್‌ಒಯು: ಆರೋಪ

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2012–13ನೇ ಸಾಲಿನ ಹೊರರಾಜ್ಯದ ಶೈಕ್ಷಣಿಕ ಸಹಯೋಗ ಕೇಂದ್ರಗಳ (ಅಕಾಡೆಮಿಕ್ ಕೊಲಾಬರೇಟಿವ್ ಇನ್‌ಸ್ಟಿಟ್ಯೂಟ್) ಮೂಲಕ ನೋಂದಾಯಿತರಾದ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ನಿರ್ಧರಿಸಿರುವುದು ವಿವಾದಕ್ಕೆಡೆ ಮಾಡಿದೆ.
‘ಮಾನ್ಯತೆ ಕಳೆದುಕೊಳ್ಳಲು ಕಾರಣವಾದ ಶೈಕ್ಷಣಿಕ ಸಹಯೋಗ ಕೇಂದ್ರಗಳ ಮೂಲಕವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಏಪ್ರಿಲ್ 8ರಂದು ಸುತ್ತೋಲೆ ಹೊರಡಿಸಿದ್ದಾರೆ. ಆದರೆ, ಯುಜಿಸಿ ಮರು ಮಾನ್ಯತೆ ನೀಡುವಾಗ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಬಾರದು ಎಂದು ಹೇಳಿದೆ. ಇದು ಯುಜಿಸಿ ನಿಯಮಗಳ ಸ್ಪಷ್ಟ ಉಲ್ಲಂಘನೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಮಾಜಿ ಸದಸ್ಯ ಕೆ.ಎಸ್.ಶಿವರಾಮು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
’ವಿಪರ್ಯಾಸ ಎಂದರೆ, ಇದೇ ಶೈಕ್ಷಣಿಕ ಸಹಯೋಗ ಕೇಂದ್ರಗಳ ವಿರುದ್ಧ ನಿಯಮ ಮೀರಿ ಚಟುವಟಿಕೆ ನಡೆಸುತ್ತಿರುವ ಕುರಿತು ವಿಶ್ವವಿದ್ಯಾಲಯವು 2019ರಲ್ಲಿ ಇಲ್ಲಿನ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದೆ. ಈ ಕುರಿತು ನ್ಯಾಯಾಲಯಗಳಲ್ಲೂ ಪ್ರಕರಣಗಳಿವೆ. ಒಂದು ವೇಳೆ ಪದವಿ ಪ್ರಮಾಣಪತ್ರ ನೀಡಿದರೆ ಯುಜಿಸಿಯಿಂದ ಕೆಎಸ್‌ಒಯು ಮತ್ತೆ ಮಾನ್ಯತೆ ಕಳೆದುಕೊಳ್ಳುವ ಅಪಾಯ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ವಿಶ್ವವಿದ್ಯಾಲಯ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನವದೆಹಲಿಯ ಯುಜಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದರು.
‘ಅನುಮತಿ ದೊರಕಿದೆ’
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ‘ಆರೋಪ ಸತ್ಯಕ್ಕೆ ದೂರ’ ಎಂದರು. ‘2012 ಹಾಗೂ ಅದಕ್ಕೂ ಹಿಂದೆ ದಾಖಲಾಗಿರುವ ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮಾಣಪತ್ರ ನೀಡಲಾಗುವುದು. ಅವರಿಗೆ ಪದವಿ ಪ್ರಮಾಣ ಪತ್ರ ನೀಡ ಬೇಕು ಎಂದು ಯುಜಿಸಿಯೇ ಅನುಮತಿ ನೀಡಿ, ಪತ್ರವನ್ನೂ ಬರೆದಿದೆ. ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.