ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ: ಶೌಚಕ್ಕೂ ಸುಲಿಗೆ: ₹26 ಸಾವಿರ ದಂಡ

‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ಬಂದಿದ್ದ ದೂರು ಪರಿಹರಿಸಿದ ಕೆಎಸ್‌ಆರ್‌ಟಿಸಿ
Last Updated 5 ಡಿಸೆಂಬರ್ 2022, 19:20 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಶೌಚಾಲಯದಲ್ಲಿ ಹೆಚ್ಚಿನ ಹಣ ಪಡೆಯುತ್ತಿದ್ದ ಏಜೆನ್ಸಿಗೆ ₹26 ಸಾವಿರ ದಂಡ, ರಸ್ತೆ ದುರಸ್ತಿಗೆ ರಾಯಚೂರು ಜಿಲ್ಲಾಧಿಕಾರಿಗೆ ಪತ್ರ, ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್‌ ಸೇವೆ...

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರೊಂದಿಗೆ ‘ಪ್ರಜಾವಾಣಿ’ ನ.14ರಂದು ನಡೆಸಿದ ಫೋನ್‌–ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ಮನವಿಗಳನ್ನು ಆಧರಿಸಿ ನಿಗಮ ಕೈಗೊಂಡಿರುವ ಕ್ರಮಗಳಿವು.

ಕೆಂಪೇಗೌಡ ಬಸ್‌ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ದೂರು ಆಧರಿಸಿ ಪರಿಶೀಲನೆ ನಡೆಸಿ ಶೌಚಾಲಯ ನಿರ್ವಹಣೆ ಗುತ್ತಿಗೆ ಪೆಡದಿದ್ದ ಪನೋರಮ ಎಂಟರ್ ಪ್ರೈಸಸ್‌ಗೆ ₹26,432 ದಂಡ ವಿಧಿಸಲಾಗಿದೆ. ಕರಾರು ಉಲ್ಲಂಘಿಸಿರುವ ಏಜೆನ್ಸಿಗೆ ನೋಟಿಸ್‌ ಸಹ ನೀಡಲಾಗಿದೆ ಎಂದು ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೆಂಪೇಗೌಡ ನಿಲ್ದಾಣದಲ್ಲಿ ಮಂಗಳೂರು ಕಡೆಗೆ ಬಸ್‌ಗಳು ಹೊರಡುವ ಪ್ಲಾಟ್‌ಫಾರ್ಮ್‌ಗೆ ಸಂಚಾರ ನಿಯಂತ್ರಕರನ್ನು ನಿಯೋಜಿಸಲಾಗಿದೆ. ಈ ನಿಲ್ದಾಣದಲ್ಲಿ ವೇಶ್ಯಾವಾಟಿಕೆ ಹೆಚ್ಚುತ್ತಿರುವ ಬಗ್ಗೆ ಬಂದ ದೂರನ್ನು ಗಂಭೀರವಾಗಿ ಪರಿಗಣಿಸಿ ಸಂಚಾರ ಮೇಲ್ವಿಚಾಕರನ್ನು ನಿಯೋಜಿಸಿ ಗಸ್ತು ಹೆಚ್ಚಿಸಲಾಗಿದೆ. ವೇಶ್ಯಾವಾಟಿಕೆ ನಿಯಂತ್ರಿಸಲು ಪಶ್ಚಿಮ ವಿಭಾಗದ ಡಿಸಿಪಿಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದ್ದಾರೆ.

ಚನ್ನಪಟ್ಟಣದಿಂದ ಸಾತನೂರು– ದೊಡ್ಡ ಆಲದಹಳ್ಳಿ–ಕೋಡಿಹಳ್ಳಿ ಮಾರ್ಗದಲ್ಲಿ ಹೆಚ್ಚುವರಿ ಬಸ್ ಸೇವೆ, ಕನಕಪುರ–ಕೋಟೆವೂರು ಮಾರ್ಗದ ಬಸ್‌ ಕಾರ್ಯಾಚರಣೆ ವೇಳೆ ಪರಿಷ್ಕರಣೆ, ಆನೆಕಲ್–ಭಾಗಮಂಡಲ–ತಲಕಾವೇರಿ ಮಾರ್ಗದ ಸಾರಿಗೆಯಲ್ಲಿ ಪಾಸ್‌ ಹೊಂದಿದ ಪ್ರಯಾಣಿಕರನ್ನು ಕರೆದೊಯ್ಯಲು ಕ್ರಮ, ಹರಿಹರ–ಹಲವಾಗಲು ಮಾರ್ಗದಲ್ಲಿ ವಿದ್ಯಾರ್ಥಿಗಳ ಬೇಡಿಕೆಯಂತೆ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಕನಕಪುರ–ಕಲಾಸಿಪಾಳ್ಯ ಮಾರ್ಗಕ್ಕೆ ಕನಕಪುರ ಘಟಕದಿಂದ ಮಾತ್ರವಲ್ಲದೇ ಬೇರೆ ಘಟಕದಿಂದಲೂ 38 ಸುತ್ತುವಳಿಯಲ್ಲಿ ಬೆಂಗಳೂರು ಕಡೆಗೆ ಬಸ್‌ಗಳ ಸಂಚಾರ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಾವಣಗೆರೆ–ಜಗಳೂರು ಮಾರ್ಗದಲ್ಲಿ ಸಂಜೆ 6 ಗಂಟೆ ನಂತರ ಬಸ್‌ ಇರುವುದಿಲ್ಲ ಹಾಗೂ ಅಧಿಕಾರಿಗಳು ಪೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ದೂರು ಬಂದಿತ್ತು. ಸಂಜೆ 6.30 ಮತ್ತು 7 ಗಂಟೆಗೆ ಎರಡು ಟ್ರಿಪ್‌ ಬಸ್‌ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ. ದೂರವಾಣಿ ಕರೆ ಸ್ವೀಕರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು–ಶೃಂಗೇರಿ ಮಾರ್ಗದಲ್ಲಿ ಸಂಜೆ 7ಕ್ಕೆ ಕಾರ್ಯಾಚರಣೆ ಮಾಡುತ್ತಿದ್ದ ಬಸ್‌ ಸ್ಥಗಿತವಾಗಿತ್ತು. ಫೋನ್‌ಇನ್ ಕಾರ್ಯಕ್ರಮದಲ್ಲಿ ಕೋರಿಕೆ ಬಂದಿದ್ದರಿಂದ ನ.18ರಿಂದಲೇ ಕಾರ್ಯಾಚರಣೆ ಪುನರ್ ಆರಂಭಿಸಲಾಗಿದೆ. ಕಾಗಲವಾಡಿ–ಚಾಮರಾಜನಗರ ಮಾರ್ಗದಲ್ಲಿ ಸ್ಥಗಿತಗೊಳಿಸಿದ್ದ ಬಸ್ ಸೇವೆಯನ್ನು ಬೆಳಿಗ್ಗೆ 8 ಮತ್ತು ಮಧ್ಯಾಹ್ನ 2.30ಕ್ಕೆ ಮತ್ತೆ ಆರಂಭಿಸಲಾಗಿದೆ. ಒಟ್ಟಾರೆ ಎಲ್ಲಾ 29 ಮನವಿಗಳಿಗೂ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT