ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಮುಷ್ಕರ; ಕೋಡಿಹಳ್ಳಿ ಸೇರಿ 17 ಮಂದಿ ವಿರುದ್ಧ ಎಫ್‌ಐಆರ್

Last Updated 19 ಏಪ್ರಿಲ್ 2021, 17:24 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಸಂಸ್ಥೆ ನೌಕರರನ್ನು ಪ್ರಚೋದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಾನೂನುಬಾಹಿರವಾಗಿ ಮುಷ್ಕರ ನಡೆಸಿ ಸಂಸ್ಥೆಗೆ ನಷ್ಟವನ್ನುಂಟು ಮಾಡಿದ ಆರೋಪದಡಿ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ 17 ಮಂದಿ ವಿರುದ್ಧ ವಿಲ್ಸನ್‌ ಗಾರ್ಡನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಬಿಎಂಟಿಸಿ ಭದ್ರತಾ ಮತ್ತು ಜಾಗೃತ ಶಾಖೆಯ ವಿಭಾಗೀಯ ಭದ್ರತಾ ನಿರೀಕ್ಷಕ ಕೆ.ಎಂ. ಮುನಿಕೃಷ್ಣ ದೂರು ನೀಡಿದ್ದಾರೆ. ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ಅಕ್ರಮ ಕೂಟ, ಜೀವ ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ, ಅಪರಾಧಕ್ಕೆ ಕುಮ್ಮಕ್ಕು, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ ಚಂದ್ರಶೇಖರ್, ಮಾಜಿ ನೌಕರ ಆನಂದ್, ನಿರ್ವಾಹಕಿ ಚಂಪಕಾವತಿ, ಬೆಂಗಳೂರು ಕೇಂದ್ರೀಯ ವಿಭಾಗದ ಇತರೆ ನೌಕರರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅವರೆಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದೂ ಹೇಳಿದರು.

‘ಆರೋಪಿಗಳು, ಅಕ್ರಮ ಕೂಟ ರಚಿಸಿಕೊಂಡು ಸರ್ಕಾರದ ಆದೇಶ ಹಾಗೂ ಕಾನೂನುಗಳನ್ನು ಉಲ್ಲಂಘಿಸಿ ಕಾನೂನುಬಾಹಿರ ಮುಷ್ಕರ ನಡೆಸಲು ನೌಕರರನ್ನು ಪ್ರೇರೇಪಿಸಿದ್ದಾರೆ. ನೌಕರರು ಸಾಮೂಹಿಕವಾಗಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಮುನಿಕೃಷ್ಣ ತಿಳಿಸಿದ್ದಾರೆ’ ಎಂದೂ ಅವರು ತಿಳಿಸಿದರು.

‘ಸಂಸ್ಥೆಯ 6 ಬಸ್‌ಗಳನ್ನು ಜಖಂ ಮಾಡಿ ನಷ್ಟವನ್ನುಂಟು ಮಾಡಿದ್ದಾರೆ. ಕಾನೂನುಬದ್ಧವಾಗಿ ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಗೂ ವಿಡಿಯೊ ಹರಿಬಿಟ್ಟು ನೌಕರರನ್ನು ಪ್ರಚೋದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT