ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಸಂತ್ರಸ್ತರು: ಜಂಟಿ ಸರ್ವೆಗೆ ಸೂಚನೆ

ಮುಳುಗಡೆ ಸಂತ್ರಸ್ತರಿಗೆ ಜಮೀನು ಮಂಜೂರಾತಿ ಪ್ರಕ್ರಿಯೆಗೆ 3 ತಿಂಗಳ ಗಡುವು
Last Updated 6 ನವೆಂಬರ್ 2020, 18:46 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ಪ್ರದೇಶಗಳಿಂದ ಸ್ಥಳಾಂತರ ಹೊಂದಿರುವ ಸಂತ್ರಸ್ತ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಜಮೀನುಗಳ ಖಾತೆ ಯನ್ನು ಸಂತ್ರಸ್ತರ ಹೆಸರಿಗೆ ವರ್ಗಾಯಿಸುವುದಕ್ಕೆ ಪೂರಕ ವಾಗಿ ಮೂರು ತಿಂಗಳೊಳಗೆ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರ್ದೇಶನ ನೀಡಿದರು.

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ ಮತ್ತು ಶಿವಮೊಗ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಜಮೀನಿನ ಹಕ್ಕು ಪರಭಾರೆಗೆ ಇರುವ ತೊಡಕುಗಳ ನಿವಾರಣೆಗೆ ಸಂಬಂಧಿಸಿದಂತೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಉನ್ನತಮಟ್ಟದ ಸಭೆ ನಡೆಸಿದರು.

ಮುಳುಗಡೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ 9,773 ಎಕರೆ ಜಮೀನಿನ ಒಡೆತನವನ್ನು ಅವರಿಗೆ ಹಸ್ತಾಂತರ ಮಾಡಬೇಕಿದೆ. ಅದಕ್ಕಾಗಿ ಎಲ್ಲ ಜಮೀನುಗಳ ಜಂಟಿ ಸರ್ವೆ ನಡೆಸಿ, ಸಾಗುವಳಿದಾರರ ಖಚಿತ ಮಾಹಿತಿ ಯೊಂದಿಗೆ ವರದಿ ಸಲ್ಲಿಸಬೇಕು. ಸಂತ್ರಸ್ತರಿಂದ ಅರ್ಜಿ ಪಡೆದು ಖಾತೆ ಬದಲಾ
ವಣೆ ಮಾಡಿಕೊಡಲು ಕ್ರಮ ಜರುಗಿಸಬೇಕು. ಕಾಲಮಿತಿಯೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಉಸ್ತುವಾರಿ ಅಧಿಕಾರಿ ನೇಮಕ: ಜಂಟಿ ಸರ್ವೆ ಪ್ರಕ್ರಿಯೆಯ ಮೇಲುಸ್ತುವಾರಿಗಾಗಿ ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಶಿವಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ಜಂಟಿ ಸರ್ವೆಗೆ ಅಗತ್ಯವಿರುವ ಭೂಮಾಪಕರನ್ನು ನೇಮಕ ಮಾಡಿಕೊಳ್ಳುವ ಮತ್ತು ವಾಹನಗಳ ಸೇವೆಯನ್ನು ಪಡೆಯುವ ಪೂರ್ಣ ಅಧಿಕಾರವನ್ನು ಶಿವಮೊಗ್ಗ ಜಿಲ್ಲಾಧಿಕಾರಿಗೆ ನೀಡಲು ಮುಖ್ಯಮಂತ್ರಿ ನಿರ್ದೇಶನ ನೀಡಿದರು.

‘ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಲು 7,000 ಎಕರೆ ಜಮೀನನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇನ್ನೂ 2,000 ಎಕರೆಗೂ ಹೆಚ್ಚು ಜಮೀನನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡಬೇಕಿದೆ. ಮುಳುಗಡೆ ಸಂತ್ರಸ್ತರು 1978ಕ್ಕೂ ಮೊದಲಿನಿಂದ ಸಾಗುವಳಿ ಮಾಡುತ್ತಿದ್ದಾರೆ. ಅವರನ್ನು ಅರಣ್ಯ ಅತಿಕ್ರಮಣ
ದಾರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಬಾಕಿ ಇರುವ ಜಮೀನನ್ನೂ ತ್ವರಿತವಾಗಿ ಬಿಡುಗಡೆ ಮಾಡಿ, ಸಾಗುವಳಿದಾರರಿಗೆ ಹಕ್ಕು ನೀಡಬೇಕು’ ಎಂದು ಶಾಸಕ
ರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಮತ್ತು ಕುಮಾರ್‌ ಬಂಗಾರಪ್ಪ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ಸುಪ್ರೀಂಕೋರ್ಟ್‌ಗೆ ಅರ್ಜಿ: ಹಿಂದೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶ ದಿಂದಾಗಿ ಮುಳುಗಡೆ ಸಂತ್ರಸ್ತರೂ ಅರಣ್ಯ ಅತಿಕ್ರಮಣದಾರರ ವ್ಯಾಪ್ತಿಗೆ ಸೇರಿದ್ದಾರೆ. ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಮುಳುಗಡೆ ಸಂತ್ರಸ್ತ ರಿಗೆ ಜಮೀನು ಮಂಜೂರು ಮಾಡಲು ಅನುಮತಿ ಪಡೆಯಬೇಕು. ಸಂತ್ರಸ್ತರ ಪರವಾಗಿ ಸರ್ಕಾರದಿಂದ ಕಾನೂನು ಹೋರಾಟ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ಕಂದಾಯ, ಅರಣ್ಯ, ಕಾನೂನು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ನಿರ್ಣಾಯಕ ಹಂತ ತಲುಪಿದೆ

‘1970ಕ್ಕೂ ಮೊದಲೇ ಮುಳುಗಡೆ ಸಂತ್ರಸ್ತರು ಅರಣ್ಯ ಜಮೀನನ್ನು ಸಾಗುವಳಿ ಮಾಡುತ್ತಿದ್ದರು. ಈ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂತ್ರಸ್ತರಿಗೆ ಜಮೀನು ಮಂಜೂರಾತಿಗೆ ಮುಖ್ಯಮಂತ್ರಿ ಸ್ಪಷ್ಟ ನಿರ್ದೇಶನ ನೀಡಿದ್ದು, ಈ ಪ್ರಕ್ರಿಯೆ ಈಗ ನಿರ್ಣಾಯಕ ಹಂತಕ್ಕೆ ಬಂದಿದೆ’ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಪ್ರತಿಕ್ರಿಯಿಸಿದರು. ಮುಳುಗಡೆ ಸಂತ್ರಸ್ತರನ್ನು ಒತ್ತುವರಿದಾರರು ಎಂದು ಪರಿಗಣಿಸಲು ಆಗದು. ಸರ್ಕಾರವೇ ಅವರನ್ನು ಸ್ಥಳಾಂತರ ಮಾಡಿತ್ತು. ದಶಕಗಳು ಕಳೆದರೂ ಅವರಿಗೆ ಜಮೀನಿನ ಒಡೆತನ ದೊರಕಿಲ್ಲ. ಕೆಲವೇ ತಿಂಗಳೊಳಗೆ ಖಾತೆ ವರ್ಗಾವಣೆ ಆಗುವ ವಿಶ್ವಾಸವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT