ಬುಧವಾರ, ಆಗಸ್ಟ್ 10, 2022
21 °C
ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಗಂಭೀರ ಆರೋಪ; ಹೋರಾಟದ ಎಚ್ಚರಿಕೆ

ಬಚ್ಚೇಗೌಡ ಕುಟುಂಬದಿಂದ ಭೂಕಬಳಿಕೆ: ಎಂ.ಟಿ.ಬಿ. ನಾಗರಾಜ್‌ ಗಂಭೀರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ತಾಲ್ಲೂಕಿನ ಶಾಂತನಪುರ ಗ್ರಾಮದ ಸರ್ವೆ ನಂ. 9ರಲ್ಲಿರುವ ಪರಿಶಿಷ್ಟ ಜಾತಿಯವರಿಗೆ ಸೇರಿದ 26 ಎಕರೆ ಜಮೀನನ್ನು ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ ಅವರ ಕುಟುಂಬ ಕಬಳಿಕೆ ಮಾಡಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್‌ ಗಂಭೀರ ಆರೋಪ ಮಾಡಿದ್ದಾರೆ.

‘ಹಿಂದೆ ಪ್ಲೇಗ್‌ ರೋಗ ಕಾಣಿಸಿಕೊಂಡಾಗ ಗ್ರಾಮಸ್ಥರು ಈ ಜಮೀನಿನಲ್ಲಿ ಊರು ನಿರ್ಮಿಸಿಕೊಂಡಿದ್ದರು. ರೋಗ ನಿವಾರಣೆಯಾದ ಬಳಿಕ ಖಾಲಿ ಮಾಡಿದ್ದರು. ಇದು ಸರ್ಕಾರಿ ಜಮೀನಾಗಿತ್ತು. ಇದನ್ನು ಸಂಸದ ಬಚ್ಚೇಗೌಡ ಕುಟುಂಬದವರು ಕಬಳಿಸಿದ್ದಾರೆ’ ಎಂದು ಸಚಿವರು ಆರೋಪಿಸಿದ್ದಾರೆ.

‘ಪರಿಶಿಷ್ಟ ಜಾತಿಯವರ ಬಳಿ ಜಮೀನಿನ ದಾಖಲೆಗಳಿವೆ. ಜಮೀನು ಪಡೆಯಲು ಅವರು ಭೂ ಕಬಳಿಕೆ ತಡೆ ನ್ಯಾಯಾಲಯಕ್ಕೂ ಹೋಗಿದ್ದರು. ಅಲ್ಲಿ ಅವರಿಗೆ ನ್ಯಾಯ ವಿಳಂಬವಾಯಿತು. ನಂತರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಡಿ.ಸಿ ಅವರು 26 ಎಕರೆಯು ಸರ್ಕಾರಿ ಜಮೀನಾಗಿದೆ ಎಂದು ಆದೇಶಿಸಿದ್ದಾರೆ. ಈ ಆದೇಶದ ಪ್ರತಿಯೂ ನನ್ನ ಬಳಿ ಇದೆ’ ಎಂದು ತಿಳಿಸಿದ್ದಾರೆ.

ನ್ಯಾಯ ಕೊಡಿಸುತ್ತೇನೆ: ‘ಜಮೀನಿನ ಸಂಬಂಧ ಬಡಜನರು ಹೈಕೋರ್ಟ್‌ಗೂ ಮೊರೆ ಹೋಗಿದ್ದರು. ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಆದೇಶದನ್ವಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಬಡವರಿಗೆ ಜಮೀನು ಬಿಟ್ಟುಕೊಡುವಂತೆ ಸೂಚಿಸಿದ್ದರು. ಆದರೆ, ಜಮೀನು ಬಿಟ್ಟುಕೊಡದೆ ಬಚ್ಚೇಗೌಡರ ಕುಟುಂಬ ಅನ್ಯಾಯ ಎಸಗುತ್ತಿದೆ. ನಾನು ಬಡವರ ಪರ ಹೋರಾಟಕ್ಕೆ ಸಿದ್ಧ’ ಎಂದು ಸಚಿವ ಎಂ.ಟಿ.ಬಿ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಂತನಪುರ ಬೇಚಾರಕ್ ಹಳ್ಳಿಯಾಗಿದೆ. ಅಲ್ಲಿ ಯಾರೂ ವಾಸವಾಗಿಲ್ಲ. ನಮ್ಮ ತಾತ ಭೈರೇಗೌಡರು ಈ ಜಮೀನಿನ ಒಡೆಯರಾಗಿದ್ದರು. ಅವರು ನನ್ನ ತಂದೆ ಮತ್ತು ಅವರ ಅಣ್ಣ, ತಮ್ಮಂದಿರಿಗೆ ನೀಡಿರುವ ಪಿತ್ರಾರ್ಜಿತ ಆಸ್ತಿಯಾಗಿದ್ದು ನಮ್ಮ ಹೆಸರಿನಲ್ಲಿಯೇ ಇದೆ. ಈಗ ನನ್ನ ತಮ್ಮ ಗೋಪಾಲಗೌಡ ನೋಡಿಕೊಳ್ಳುತ್ತಿದ್ದಾರೆ’ ಎಂದು ಸಂಸದ ಬಚ್ಚೇಗೌಡ ಪ್ರತಿಕ್ರಿಯಿಸಿದರು.

‘ಮಹಾರಾಜರ ಕಾಲದಲ್ಲಿ ಜೋಡಿದಾರರಾಗಿದ್ದ ಕುಟುಂಬ ನಮ್ಮದು. ತಾಲ್ಲೂಕಿನಲ್ಲಿ ನಮಗೆ ನೂರಾರು ಎಕರೆ ಜಮೀನಿದೆ. ನಾವೇ ಕೆಲವರಿಗೆ ಜಮೀನನ್ನು ದಾನವಾಗಿ ನೀಡಿದ್ದೇವೆ. ಸರ್ಕಾರಿ ಅಥವಾ ಬೇರೆಯವರ ಜಮೀನು ಕಬಳಿಸುವ ಅಗತ್ಯ ನಮಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಚಿವರು ಬಡವರಿಗೆ ನ್ಯಾಯ ಕೊಡಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರ ಕೆಲಸಕ್ಕೆ ಅಡ್ಡಿ ಬರುವುದಿಲ್ಲ. ಈ ಜಮೀನಿನ ಸಂಬಂಧ ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಅವರು ಹೇಳುವ ರೀತಿಯಲ್ಲಿ ಜಮೀನಿನ ಪ್ರಕರಣ ಕೋರ್ಟ್‌ನಲ್ಲಿದ್ದರೆ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು