ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಖರೀದಿಗೆ ಮಿತಿ ಇರುವುದು ಒಳಿತು: ಸಂಸದೆ ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ
Last Updated 10 ಅಕ್ಟೋಬರ್ 2020, 3:04 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಕೃಷಿಕರಿಗೆ ಸಂಬಂಧಿಸಿದ ಮೂರು ಮಸೂದೆಗಳು ಲೋಕಸಭೆ ಅಧಿವೇಶನದಲ್ಲಿ ಅಂಗೀಕಾರವಾಗಿವೆ. ರೈತರ ರಕ್ಷಣೆ, ಕೃಷಿ ಕ್ಷೇತ್ರದ ಸುಧಾರಣೆ ಈ ಇವುಗಳ ಉದ್ದೇಶವಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಶುಕ್ರವಾರ ತಿಳಿಸಿದರು.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಕೃಷಿಯಿಂದ ವಿಮುಖರಾಗಿ, ನಗರಗಳಿಗೆ ವಲಸೆ ಹೋಗಿರುವಂಥ ಹಲವಾರು ನಿದರ್ಶನಗಳಿವೆ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಈ ಮಸೂದೆಗಳಿಂದ ಇಂಥ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ರೈತರಿಗೆ ಸ್ವಾತಂತ್ರ್ಯ ತಂದುಕೊಡಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಸ್ವಾಮಿನಾಥನ್‌ ವರದಿಗೆ ಸಂಬಂಧಿಸಿದಂತೆ ಸಂಸತ್‌,ರಾಜ್ಯಗಳ ವಿಧಾನಸಭೆಗಳಲ್ಲಿ ಚರ್ಚೆಯಾಗಿದೆ. ಅದನ್ನು ಒಪ್ಪಿಕೊಳ್ಳುವ , ಬದಲಾವಣೆ ಮಾಡುವ ಸ್ಥಿತಿಯಲ್ಲಿ ಹಲವಾರು ರಾಜ್ಯಗಳು ಇಲ್ಲ ಎಂದು ಹೇಳಿದರು.

ವಿರೋಧ ಪಕ್ಷಗಳು, ವಿವಿಧ ಸಂಘಟನೆಗಳು ಮಸೂದೆಗಳನ್ನು ವಿರೋಧಿಸುತ್ತಿರುವುದರಲ್ಲಿ ಹುರಳಿಲ್ಲ. ಎಪಿಎಂಸಿ ಮುಚ್ಚುವುದಿಲ್ಲ. ಮಸೂದೆ ಜಾರಿಗೊಳಿಸುವುದರಿಂದ ‌ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಸಿಗುತ್ತದೆ. ಎಪಿಎಂಸಿಯಲ್ಲಿ ಆನ್‌ಲೈನ್‌ ಮಾರ್ಕೆಟಿಂಗ್‌ ವ್ಯವಸ್ಥೆ ಉತ್ತೇಜಿಸಲಾಗುತ್ತದೆ. ರೈತರು ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ಕಡ್ಡಾಯ ಇಲ್ಲ, ಯಾವುದೇ ವ್ಯಾಪಾರಸ್ಥರಿಗೆ ಮಾರಾಟ ಮಾಡಬಹುದು. ಮಧ್ಯವರ್ತಿಗಳ ಹಾವಳಿ ಕಡಿವಾಣ ಬೀಳುತ್ತದೆ ಎಂದು ವಿವರಿಸಿದರು.

ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ವ್ಯಾಪ್ತಿಯಲ್ಲಿ ಆಲೂಗಡ್ಡೆ, ಎಣ್ಣೆಕಾಳು, ಆಹಾರಧಾನ್ಯಗಳು ಒಳಪಡುತ್ತವೆ. ಸರಕುಗಳ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಈಗ ಅವಕಾಶವಾಗುತ್ತದೆ ಎಂದರು.

ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಜಾರಿಯಿಂದ ಒಪ್ಪಂದ ಕೃಷಿಗೆ ಎಡೆಯಾಗುತ್ತದೆ. ಕಾರ್ಪೊರೇಟ್‌ ಸಂಸ್ಥೆ ಸಾಥ್‌ನಲ್ಲಿ ಒಟ್ಟಾಗಿ ಬೆಳೆ ಬೆಳೆಯುವ ವಿಧಾನ ಇದು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮುಂದೆಯೂ ಇರುತ್ತದೆ ಎಂದು ಹೇಳಿದರು.

ಸ್ಪೈಸ್‌ ಪಾರ್ಕ್‌ ಸ್ಥಾಪನೆ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರಾಗಬೇಕಿದೆ. ಜಾಗ ಮಂಜೂರಾದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಉತ್ತರಿಸಿದರು.

ಬಿಜೆಪಿ ಮುಖಂಡರಾದ ಎಂ.ಎಸ್‌.ಭೋಜೇಗೌಡ, ಕಲ್ಮರುಡಪ್ಪ, ಮಧುಕುಮಾರ್‌ ಅರಸ್‌, ಈ.ಆರ್‌.ಮಹೇಶ್‌, ಎಚ್‌.ಡಿ.ತಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT