ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ರಾಜಕಾರಣ: ನಾಯಕತ್ವ ಬದಲಾವಣೆಯ ‘ಸಂಚಲನ’

ಚಟುವಟಿಕೆ ನಡೆಯುತ್ತಿರುವುದು ಶೇ 100ರಷ್ಟು ನಿಜ: ಸಚಿವ ಅಶೋಕ
Last Updated 26 ಮೇ 2021, 22:06 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಬಿಜೆಪಿ ಪಾಳೆಯದಲ್ಲಿ ‘ಬಹಿರಂಗ’ ಚರ್ಚೆಗೆ ಚಾಲನೆ ಸಿಕ್ಕಿರುವ ಬೆನ್ನಲ್ಲೇ, ‘ನಾಯಕತ್ವ ಬದಲಾವಣೆಯ ಚಟುವಟಿಕೆ ನಡೆದಿರುವುದು ಶೇ 100 ರಷ್ಟು ನಿಜ’ ಎಂದು ಕಂದಾಯ ಸಚಿವ ಆರ್‌.ಅಶೋಕ ಪ್ರತಿಪಾದಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಆದರೆ, ಇಬ್ಬರು ಉಪಮುಖ್ಯಮಂತ್ರಿ ಮತ್ತು ಸಚಿವರು ಯಡಿಯೂರಪ್ಪ ಅವರ ಪರ ಹೇಳಿಕೆ ನೀಡಿದ್ದಲ್ಲದೇ, ‘ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾಯಕತ್ವದ ಬದಲಾವಣೆ ಊಹಾಪೋಹ’ ಎಂದೂ ಪ್ರತಿಪಾದಿಸಿದ್ದಾರೆ.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ’ ಎಂದು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರು ಹೇಳಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಜೂನ್‌ 7 ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲು ಪಕ್ಷದ ವರಿಷ್ಠರು ಸೂಚಿಸಿರುವುದರಿಂದಾಗಿ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದೆ.

ಬೆಳವಣಿಗೆ ಸತ್ಯ: ‘ನಾಯಕತ್ವ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಚಿವರು ಮತ್ತು ಶಾಸಕರು ಭಾಗಿಯಾಗಿದ್ದಾರೆ. ದೆಹಲಿಯಲ್ಲಿ ಕೆಲವು ಸಚಿವರು ಮತ್ತು ಶಾಸಕರು ಇರುವುದು ನಿಜ. ಇನ್ನು ಕೆಲವರು ಪ್ರತ್ಯೇಕ ಸಭೆ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ. ನಾಯಕತ್ವ ಬದಲಾವಣೆ ಬಗ್ಗೆ ಬೆಳವಣಿಗೆ ಆಗುತ್ತಿರುವುದಂತೂ ಸತ್ಯ’ ಎಂದು ಅಶೋಕ ಹೇಳಿರುವುದು, ಮುಖ್ಯಮಂತ್ರಿ ಬದಲಾವಣೆಯ ವಿದ್ಯಮಾನಕ್ಕೆ ಸಾಕ್ಷಿ ಒದಗಿಸಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದು, ‘ಯಡಿಯೂರಪ್ಪ ನಮ್ಮ ನಾಯಕರು ಮತ್ತು ಮುಖ್ಯಮಂತ್ರಿ. ಅವರ ನೇತೃತ್ವದಲ್ಲಿ ಕೋವಿಡ್‌ ನಿರ್ವಹಣೆ ನಡೆಯುತ್ತಿದೆ. ಶಾಸಕರು ದೆಹಲಿಗೆ ಹೋಗಿರುವ ವಿಚಾರ ನನಗೆ ಗೊತ್ತಿಲ್ಲ. ಪ್ರತಿ ಸಲ ಮುಖ್ಯಮಂತ್ರಿ ರೇಸ್‌ ಸುದ್ದಿಗಳಲ್ಲಿ ನನ್ನ ಹೆಸರು ಬರುತ್ತಿದೆ. ಅದಕ್ಕೆ ಮಹತ್ವ ನೀಡಬೇಕಾಗಿಲ್ಲ’ ಎಂದರು.

ಕೇವಲ ಊಹಾಪೋಹ: ‘ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ. ಮುಖ್ಯಮಂತ್ರಿ ಬದಲಾವಣೆ ಯಾಕೆ? ಸಮರ್ಥ ವ್ಯಕ್ತಿ ಇರುವಾಗ ಪದೇ ಪದೇ ಈ ಪ್ರಶ್ನೆ ಏಕೆ ಕೇಳಿಬರುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಅವಧಿ ಪೂರೈಸಲಿದ್ದಾರೆ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ’ ಎಂದು ಇನ್ನೊಬ್ಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಥಣಿಯಲ್ಲಿ ಹೇಳಿದ್ದಾರೆ.

‘ಮುಖ್ಯಮಂತ್ರಿ ಬದಲಾವಣೆ ಕೇವಲ ಗಾಳಿ ಸುದ್ದಿ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರ ಅವಧಿ ಪೂರೈಸಲಿದೆ. ಯಾವುದೇ ಗೊಂದಲಗಳಿಲ್ಲ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರದಲ್ಲಿ ಹೇಳಿದರು.

‘ಮುಖ್ಯಮಂತ್ರಿ ಸೀಟು ಖಾಲಿ ಇಲ್ಲ. ಇದ್ದಿದ್ದರೆ ಮಾತನಾಡಬಹುದಿತ್ತು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುತ್ತೇವೆ’ ಎಂದು ಗಣಿ ಸಚಿವ ಮುರುಗೇಶ ನಿರಾಣಿ ಪ್ರತಿಕ್ರಿಯಿಸಿದ್ದಾರೆ.

‘ನಾಯಕತ್ವ ಬದಲಾವಣೆ ಸುದ್ದಿ ಊಹಾಪೋಹ. ಅದಕ್ಕೆಲ್ಲ ಪ್ರತಿಕ್ರಿಯೆ ಬೇಕಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಬಲಕ್ಕೆ ನಿಂತ ಶಾಸಕರು: ಶಾಸಕರಾದ ಎಸ್‌.ಆರ್.ವಿಶ್ವನಾಥ್‌, ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ನಿರಂಜನ್‌ ಕುಮಾರ್‌ ಮತ್ತು ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿರುವ ಶಂಕರ ಗೌಡ ಪಾಟೀಲ ಅವರು ‘ಯಡಿಯೂರಪ್ಪ ಅವಧಿ ಪೂರೈಸಲಿದ್ದಾರೆ’ ಎಂದು ಹೇಳಿದ್ದಾರೆ.

ಭೇಟಿಗೆ ಬಿಜೆಪಿ ವರಿಷ್ಠರ ನಕಾರ
ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಶಾಸಕ ಅರವಿಂದ ಬೆಲ್ಲದ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿಯಾಗಲು ನಿರಾಕರಿಸಿದ ಕಾರಣ ಇಬ್ಬರೂ ರಾಜ್ಯಕ್ಕೆ ವಾಪಾಸಾಗಿದ್ದಾರೆ.

‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ಬರುವ ಅಗತ್ಯವಿಲ್ಲ. ಏನೇ ಬದಲಾವಣೆ ಇದ್ದರೂ ಮುಂಚಿತವಾಗಿಯೇ ತಿಳಿಸುತ್ತೇವೆ’ ಎಂದು ಅರುಣ್ ಸಿಂಗ್ ಅವರು ಇಬ್ಬರಿಗೂ ಸಂದೇಶ ಮುಟ್ಟಿಸಿದರು ಎಂದು ಮೂಲಗಳು ಹೇಳಿವೆ.

ಭೇಟಿಗೆ ನಡ್ಡಾ ಅವರು ಸಮಯ ನೀಡದ ಕಾರಣ ಸಚಿವ ಮುರುಗೇಶ್‌ ನಿರಾಣಿ ದೆಹಲಿಗೆ ಪ್ರವಾಸ ರದ್ದುಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT