ಸೋಮವಾರ, ಮೇ 23, 2022
30 °C
ಮಸೂದೆ ಒಪ್ಪಿಗೆಗೆ ವಿಫಲ ಕಸರತ್ತು: ಸಭಾಪತಿ ಕೊಠಡಿಯೊಳಗೆ ಬೃಹನ್ನಾಟಕ

ಮತಾಂತರ ನಿಷೇಧ ಕಾಯ್ದೆ: ಮೇಲ್ಮನೆಯಲ್ಲಿ ಸರ್ಕಾರಕ್ಕೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ವಿರೋಧ ಪಕ್ಷಗಳ ಸದಸ್ಯರು ಊರು ಗಳತ್ತ ತೆರಳಿದ್ದ ಸಮಯವನ್ನೇ ಬಳಸಿ ಕೊಂಡು ವಿಧಾನ ಪರಿಷತ್‌ನಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಗೆ ಅಂಗೀಕಾರ ಪಡೆಯಲು ಯತ್ನಿಸಿದ ಬಿಜೆಪಿ ಸರ್ಕಾರ, ವಿಪಕ್ಷಗಳ ಬಿಗಿ ಪಟ್ಟಿನಿಂದಾಗಿ ಮುಖಭಂಗ ಅನುಭವಿಸಿತು.

ಹೊರಹೋಗಿದ್ದ ತನ್ನ ಸದಸ್ಯರನ್ನು ಕರೆಸಿಕೊಂಡು ಬಲ ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ಮಾಡಿದ ಆಡಳಿತ ಪಕ್ಷ, ಕಲಾಪ ಆರಂಭಿಸುವುದನ್ನು ವಿಳಂಬ ಮಾಡಿತು. ಇದನ್ನು ಅರಿತ ಕಾಂಗ್ರೆಸ್ ಸದಸ್ಯರು ಸಭಾಪತಿ ಕಚೇರಿಯತ್ತ ಧಾವಿಸಿ, ವಾಗ್ವಾದ ನಡೆಸಿದಾಗ ಕೋಲಾ ಹಲ ಸೃಷ್ಟಿಯಾಯಿತು. ಕಾಂಗ್ರೆಸ್‌ ಸದಸ್ಯರ ಬೇಡಿಕೆಗೆ ಮಣಿದ ಸರ್ಕಾರ, ವಿಧಾನ ಪರಿಷತ್‌ನಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆಯಿಂದ ಹಿಂದೆ ಸರಿಯಿತು.

ಕಾಂಗ್ರೆಸ್‌ ಮತ್ತು ಜೆಡಿಎಸ್ ಸದಸ್ಯರ ಒಟ್ಟು ಸಂಖ್ಯೆಯನ್ನು ಅರಿತ ಬಿಜೆಪಿ, ಮಸೂದೆ ಅಂಗೀಕಾರಕ್ಕೆ ಇರುವ ಕೊರತೆಯನ್ನು ತುಂಬಿಕೊಳ್ಳುವ ಪ್ರಯತ್ನ ಆರಂಭಿಸಿತ್ತು.

ದಾವಣಗೆರೆ ತಲುಪಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಮತ್ತು ಬಿಜೆಪಿ ಸದಸ್ಯ ರುದ್ರೇಗೌಡ ಅವರನ್ನು ಸಂಪರ್ಕಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದನಕ್ಕೆ ಹಿಂದಿರು ಗುವಂತೆ ಸೂಚಿಸಿದ್ದರು. ಅವರು ಬರುವ ವರೆಗೂ ಕಾದು ನಂತರವೇ ಕಲಾಪ ಆರಂಭಿಸಲು ಆಡಳಿತ ಪಕ್ಷ ತಂತ್ರಗಾರಿಕೆ ಹೆಣೆದಿತ್ತು. ಮಧ್ಯಾಹ್ನ ಭೋಜನ ವಿರಾಮದ ಬಳಿಕ 3 ಗಂಟೆಗೆ ಕಲಾಪ ಆರಂಭವಾಗ ಬೇಕಿತ್ತು. 4 ಗಂಟೆಯಾದರೂ ಕೋರಂ ಬೆಲ್‌ ಹಾಕಿರಲಿಲ್ಲ. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಆಡಳಿತ ಪಕ್ಷದ ಹಲವರು ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸಮಾಲೋಚನೆ ನಡೆಸುತ್ತಿದ್ದರು. ವಿಳಂಬ ಧೋರ ಣೆಯ ತಂತ್ರಗಾರಿಕೆ ಅರಿತ ಕಾಂಗ್ರೆಸ್‌ ಸದಸ್ಯರು ಸಭಾಪತಿ ಕೊಠಡಿ ಯೊಳಕ್ಕೆ ಪ್ರವೇಶಿಸಿದರು. ಆಡಳಿತ ಪಕ್ಷದ ಸದಸ್ಯರು ಸಭಾಪತಿ ಕೊಠಡಿ ಯೊಳಕ್ಕೆ ಸೇರಿಕೊಂಡು ಕಲಾಪ ಆರಂಭ ವಾಗದಂತೆ ತಡೆಯುತ್ತಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಆಕ್ಷೇಪಿಸಿದರು.

ಹೊರಟ್ಟಿ ಅವರ ಕೊಠಡಿಯಲ್ಲೇ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರಿ ವಾಕ್ಸಮರ ನಡೆದು, ಕೋಲಾಹಲದ ಸನ್ನಿವೇಶ ನಿರ್ಮಾಣವಾಯಿತು.

ಕಲಾಪ ಮುಂದೂಡಲು ಆಗ್ರಹ: ಕೊಠಡಿಯಲ್ಲಿ ಗದ್ದಲ ಹೆಚ್ಚುತ್ತಿದ್ದಂತೆ ಕೋರಂ ಬೆಲ್‌ ಹಾಕಿದ ಸಭಾಪತಿ ಬಸವರಾಜ ಹೊರಟ್ಟಿ ಸದನಕ್ಕೆ ಬಂದು ಕಲಾಪ ಆರಂಭಿಸಿದರು. ಮತ್ತಷ್ಟು ವಿಳಂಬ ಮಾಡಲು ಯತ್ನಿಸಿದ ಸಭಾನಾಯಕರು, ನಿವೃತ್ತರಾಗುತ್ತಿರುವ ಸದಸ್ಯರಿಗೆ ಅಭಿನಂದನೆ ಹೇಳಲು ಅವಕಾಶ ಕೋರಿದರು. ಕಾಂಗ್ರೆಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

‘ಬಿಜೆಪಿಯ ಕೆಲವರಿಗಾಗಿ ಕಲಾಪ ವಿಳಂಬ ಮಾಡಿ ಸದನದ ಸದಸ್ಯರನ್ನು ಅವಮಾನಿಸಲಾಗಿದೆ. ಇದು ಸರಿಯಲ್ಲ. ಊರಿನತ್ತ ಹೊರಟಿದ್ದ ನಮ್ಮ ಸದಸ್ಯರೂ ವಾಪಸ್‌ ಬರುತ್ತಿದ್ದಾರೆ. ಶನಿವಾರದವರೆಗೆ ಕಲಾಪ ಮುಂದೂಡಬೇಕು. ಶನಿವಾರ ಮತಾಂತರ ನಿಷೇಧ ಮಸೂದೆ ಮಂಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ಸಿ.ಎಂ. ಇಬ್ರಾಹಿಂ, ಎಂ. ನಾರಾಯಣಸ್ವಾಮಿ ಮತ್ತಿತರರು ಆಗ್ರಹಿಸಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ‘ಸದನದಲ್ಲಿರುವ ನಾವು ಯಾರೊಬ್ಬರೂ ಶಾಶ್ವತವಲ್ಲ. ಆದರೆ, ಸಭಾಪತಿಯವರ ಪೀಠದ ತೀರ್ಮಾನ ದೊಡ್ಡದು. ಈ ದಿನ ಮಸೂದೆ ಮಂಡನೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ವಿಷಾದ ವ್ಯಕ್ತಪಡಿಸಿದ ಸಭಾಪತಿ: ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಕ್ಕೆ ಭಾವುಕರಾಗಿ ಪ್ರತಿಕ್ರಿಯಿಸಿದ ಹೊರಟ್ಟಿ, ‘ನಾನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ. ತಮ್ಮ ಕೆಲವು ಸದಸ್ಯರು ಸದನಕ್ಕೆ ಬರುತ್ತಿದ್ದು, ಅಲ್ಲಿಯವರೆಗೂ ಕಾಲಾವಕಾಶ ನೀಡಿ ಎಂದು ಆಡಳಿತ ಪಕ್ಷದ ಪ್ರಮುಖರು ಕೋರಿದರು. ನಿಮ್ಮ ಜತೆ (ವಿರೋಧ ಪಕ್ಷಗಳ ಮುಖಂಡರು) ಚರ್ಚೆ ಮಾಡಿರುವುದಾಗಿಯೂ ನನಗೆ ತಿಳಿಸಿದ್ದರು’ ಎಂದರು.

‘ನನ್ನಿಂದ ಯಾವುದೇ ತಪ್ಪಾಗಿಲ್ಲ. ಆದರೂ, ಸದಸ್ಯರ ಮನಸ್ಸಿಗೆ ನೋವಾಗಿರುವುದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದ ಸಭಾಪತಿ, ಕಲಾಪ ಮುಂದುವರಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಶನಿವಾರಕ್ಕೆ ಕಲಾಪ ಮುಂದೂಡುವಂತೆ ಪಟ್ಟು ಹಿಡಿದರು. ಐದು ನಿಮಿಷಗಳ ಕಾಲ ಕಲಾಪ ಮುಂದೂಡಿದ ಸಭಾಪತಿ, ಆಡಳಿತ ಮತ್ತ ವಿರೋಧ ಪಕ್ಷಗಳ ಪ್ರಮುಖರನ್ನು ತಮ್ಮ ಕೊಠಡಿಗೆ ಆಹ್ವಾನಿಸಿ ಮಾತುಕತೆ ನಡೆಸಿದರು. ಮಸೂದೆ ಮಂಡನೆಯನ್ನು ಮುಂದೂಡುವ ತೀರ್ಮಾನವನ್ನು ಸಂಧಾನ ಸಭೆಯಲ್ಲಿ ಕೈಗೊಳ್ಳಲಾಯಿತು.

ಐದು ನಿಮಿಷದ ಬಳಿಕ ಕಲಾಪ ಮತ್ತೆ ಆರಂಭವಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಪೀಠಕ್ಕೆ ಮರಳಲಿಲ್ಲ.  ಅವರ ಬದಲಿಗೆ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಪೀಠದಲ್ಲಿದ್ದರು.

ಆಗ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆಯನ್ನು ಈಗ ಮಂಡಿಸುವುದಿಲ್ಲ. ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆಯುತ್ತೇವೆ’ ಎಂದು ಪ್ರಕಟಿಸಿದರು. ನಂತರ ಕಲಾಪದ ವರದಿ ಮಂಡಿಸಿದ ಉ‍ಪಸಭಾಪತಿ, ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.‌

ರಾಜೀನಾಮೆಗೆ ಮುಂದಾಗಿದ್ದ ಸಭಾಪತಿ ಹೊರಟ್ಟಿ
ಮತಾಂತರ ನಿಷೇಧ ಮಸೂದೆ ಒಪ್ಪಿಗೆ ಪಡೆಯಲು ವಿಧಾನಪರಿಷತ್ತಿನಲ್ಲಿ ಶುಕ್ರವಾರ ನಡೆದ ಬೃಹನ್ನಾಟಕದಿಂದ ಮನನೊಂದ ಬಸವರಾಜ ಹೊರಟ್ಟಿ ಅವರು ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡಲು ಮುಂದಾಗಿದ್ದರು.

ಮಸೂದೆಗೆ ಹೇಗಾದರೂ ಅನುಮೋದನೆ ಪಡೆಯಲೇಬೇಕೆಂಬ ಹಟಕ್ಕೆ ಬಿದ್ದಿದ್ದ ಆಡಳಿತಾರೂಢ ಬಿಜೆಪಿ, ಕಲಾಪವನ್ನು ವಿಳಂಬ ಮಾಡುವ ಮೂಲಕ ಸಂಖ್ಯಾಬಲ ಕ್ರೋಡೀಕರಣಕ್ಕೆ ಮುಂದಾಗಿತ್ತು. ಇದನ್ನು ಅರಿತ ಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ವಾಗ್ವಾದ ನಡೆಸಿದ್ದರು. ಬಳಿಕ ಕಲಾಪ ಆರಂಭವಾದಾಗ, ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಧೋರಣೆಯನ್ನು ಪ್ರಶ್ನಿಸಿದ್ದರು.

ಸುದೀರ್ಘ ಅವಧಿಯಲ್ಲಿ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಹೊರಟ್ಟಿಯವರಿಗೆ ಇದು ಮುಜುಗರ ತಂದಿತ್ತು. 'ನಾನು ಪ್ರಮಾಣ ಮಾಡಿ ಹೇಳುವೆ, ಇದರಲ್ಲಿ ನನ್ನ ತಪ್ಪಿಲ್ಲ. ವಿಳಂಬವಾಗುತ್ತದೆ ಎಂಬುದನ್ನು ವಿರೋಧ ಪಕ್ಷದ ಗಮನಕ್ಕೆ ತಂದಿರುವುದಾಗಿ ಆಡಳಿತ ಪಕ್ಷದವರು ನನಗೆ ತಿಳಿಸಿದ್ದರು. ಈ ಕಾರಣಕ್ಕೆ ತಡವಾಯಿತು' ಎಂದು ಹೊರಟ್ಟಿ ಸಮಜಾಯಿಷಿ ನೀಡಿದರು.ಅದನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್ ಸದಸ್ಯರು ಒಪ್ಪಿರಲಿಲ್ಲ.

ಬಳಿಕ ಕಲಾಪವನ್ನು ಐದು ನಿಮಿಷ ಮುಂದೂಡಿದ್ದ ಸಭಾಪತಿ, ಮುನಿಸಿನಿಂದಲೇ ಹೊರನಡೆದಿದ್ದರು. ಅದಾದ ತರುವಾಯ ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಹೊರಟ್ಟಿ ಬಂದಿದ್ದರಲ್ಲದೇ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ತಿಳಿಸಿದ್ದರು. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್, ಕಾಂಗ್ರೆಸ್ ನಾಯಕರು ಮನವೊಲಿಸಿದ ನಂತರವಷ್ಟೇ ರಾಜೀನಾಮೆ ನಿರ್ಧಾರದಿಂದ ಹೊರಟ್ಟಿ ಹಿಂದೆ ಸರಿದರು ಎಂದು ಮೂಲಗಳು ತಿಳಿಸಿವೆ

ಸುಗ್ರೀವಾಜ್ಞೆಗೂ ಅವಕಾಶ
ಮತಾಂತರ ನಿಷೇಧ ಮಸೂದೆಗೆ ವಿಧಾನ ಪರಿಷತ್‌ನ ಅಂಗೀಕಾರ ದೊರೆಯದೇ ಇರುವುದರಿಂದ ಕಾಯ್ದೆಯ ರೂಪದಲ್ಲಿ ಜಾರಿಗೆ ಅವಕಾಶವಿಲ್ಲ.

ಆದರೆ, ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಕ್ಷಣವೇ ಈ ಮಸೂದೆಯಲ್ಲಿರುವ ಕ್ರಮಗಳನ್ನು ಜಾರಿಗೊಳಿಸಲು ಅವಕಾಶವಿದೆ. ಸುಗ್ರೀವಾಜ್ಞೆ ಜಾರಿಯ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಅನುಮೋದಿಸಿ, ರಾಜ್ಯಪಾಲರ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಬೆಳಿಗ್ಗೆಯಿಂದಲೂ ಕಸರತ್ತು
ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆಯಲು ಸರ್ಕಾರ ಶುಕ್ರವಾರ ಬೆಳಿಗ್ಗೆಯಿಂದಲೂ ಕಸರತ್ತು ನಡೆಸಿತ್ತು.

ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಸದನದಲ್ಲಿ ಹಾಜರಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಪಟ್ಟಿ ಸಿದ್ಧಪಡಿಸಿದ್ದರು. ಆಗ ಬಿಜೆಪಿಯ ಸದಸ್ಯ ಬಲ ಕಡಿಮೆ ಇರುವುದು ಗೊತ್ತಾಗಿತ್ತು. ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವರು ಊರುಗಳತ್ತ ಹೊರಟಿರುವ ಮಾಹಿತಿ ಲಭಿಸುತ್ತಿದ್ದಂತೆ, ಮತ್ತೆ ಮಸೂದೆ ಮಂಡನೆಯ ತೀರ್ಮಾನಕ್ಕೆ ಬರಲಾಗಿತ್ತು. ಆ ಬಳಿಕವೇ ಬಿಜೆಪಿ ಸದಸ್ಯರನ್ನು ಸಂಪರ್ಕಿಸಿದ್ದ ಮುಖ್ಯಮಂತ್ರಿ, ತಕ್ಷಣ ಸದನಕ್ಕೆ ಬರುವಂತೆ ತಾಕೀತು ಮಾಡಿದ್ದರು.

ಕಾಂಗ್ರೆಸ್‌ ಕೂಡ ಪ್ರತಿತಂತ್ರ ರೂಪಿಸುತ್ತಿತ್ತು. ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಬೆಳಿಗ್ಗೆಯೇ ಸದನದಲ್ಲಿರುವ ಎರಡೂ ಕಡೆಯ ಸದಸ್ಯರ ಪಟ್ಟಿ ಮಾಡಿದ್ದರು. ಕಾಂಗ್ರೆಸ್‌ನ ಆರ್‌. ಧರ್ಮಸೇನ, ರಘು ಆಚಾರ್‌, ವಿಜಯ್ ಸಿಂಗ್‌, ಸಿ.ಎಂ. ಲಿಂಗಪ್ಪ ಅವರಿಗೆ ಮಾರ್ಗ ಮಧ್ಯದಿಂದಲೇ ಹಿಂದಿರುಗುವಂತೆ ಕಾಂಗ್ರೆಸ್‌ ನಾಯಕರು ಸೂಚನೆ ನೀಡಿದ್ದರು. 4 ಗಂಟೆಯ ವೇಳೆಗೆ ಕೆಲವರು ಕಿತ್ತೂರು ಸಮೀಪ ಬಂದಿದ್ದರು ಎಂಬ ಮಾಹಿತಿಯನ್ನು ವಿರೋಧ ಪಕ್ಷದ ಮುಖಂಡರು ಸದನದಲ್ಲೇ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು