ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ಅರ್ಹತೆಯುಳ್ಳ ದಲಿತರು ಅರ್ಚಕರಾಗಲಿ

Last Updated 19 ಅಕ್ಟೋಬರ್ 2021, 18:33 IST
ಅಕ್ಷರ ಗಾತ್ರ

ಮೈಸೂರು: ‘ಅರ್ಚಕರಿಗೆ ಆಗಮ ಶಾಸ್ತ್ರ, ದೇವತಾರ್ಚನೆಯ ವಿಧಿವಿಧಾನಗಳ ಪರಿಚಯವಿರಬೇಕು. ಮಂತ್ರಗಳನ್ನು ಶುದ್ಧವಾಗಿ ಉಚ್ಚರಿಸಬೇಕು. ಅದನ್ನು ಬಲ್ಲ ಯಾವುದೇ ದಲಿತ ಅರ್ಚಕ ಆಗಬಹುದು’ ಎಂದು ಗ.ನಾ.ಭಟ್ಟ, ಎಸ್‌.ಎಂ.ಜಾಮದಾರ್‌ ಅವರು ಪ್ರತಿಪಾದಿಸಿದರೆ, ‘ಮುಜರಾಯಿ ಕಾಯ್ದೆಯಡಿ ಆಗಮಶಾಸ್ತ್ರ ಹೇರಲಾಗುತ್ತಿದೆ. ಗ್ರಾಮದೇವತೆಗಳು, ಭೂತ ಕೋಲಗಳನ್ನು ಬ್ರಾಹ್ಮಣೀಕರಿಸಲಾಗುತ್ತಿದೆ. ಭಾಷೆ ಶುದ್ಧವಾಗಿ ಬರಬೇಕು ಎಂಬುದು ಹುದ್ದೆಯಿಂದ ದಲಿತರನ್ನು ಹೊರಗಿಡುವುದಕ್ಕಿರುವ ಮಾನದಂಡವಾಗಿದೆ’ ಎಂದು ಜಿ.ಎನ್‌.ನಾಗರಾಜ್‌, ಸಬಿತಾ ಬನ್ನಾಡಿ ಹೇಳಿದರು.

‘ಪ್ರಜಾವಾಣಿ’ ಮಂಗಳವಾರ ಹಮ್ಮಿಕೊಂಡಿದ್ದ ‘ದಲಿತರಿಗೆ ಅರ್ಚಕ ಹುದ್ದೆ ಮತ್ತು ಮುಜರಾಯಿ ಕಾಯ್ದೆ’ ಕುರಿತ ಸಂವಾದದಲ್ಲಿ ಈ ರೀತಿಯ ಅಭಿ‍ಪ್ರಾಯಗಳು ವ್ಯಕ್ತವಾದವು.

‘ಅರ್ಹತೆ ಇದ್ದವರು ಅರ್ಚಕರಾಗಬಹುದು’

ಯಾವುದೇ ವೃತ್ತಿಗೆ ಅರ್ಹತೆ ಇರುತ್ತದೆ. ಅರ್ಚಕ ವೃತ್ತಿಗೂ ಆಗಮ ಶಾಸ್ತ್ರ, ದೇವತಾರ್ಚನೆಯ ವಿಧಿವಿಧಾನಗಳ ಪರಿಚಯವಿರಬೇಕು. ಆಯಾ ದೇವತೆಗೆ ಸಂಬಂಧಿಸಿದ ಮಂತ್ರಗಳನ್ನು ಕಲಿತಿರಬೇಕು. ಸಂಸ್ಕೃತ ದೇವರಿಗೆ ಅರ್ಪಿತವಾದ ಭಾಷೆ. ಮಂತ್ರಗಳನ್ನು ಶುದ್ಧವಾಗಿ ಉಚ್ಚರಿಸಬೇಕು. ಇದನ್ನು ಬಲ್ಲ ಯಾವುದೇ ದಲಿತ ಅರ್ಚಕ ಆಗಬಹುದು. ದಲಿತರೂ ಮನುಷ್ಯರೇ. ಮಂತ್ರಗಳನ್ನು ಕಲಿತು ಬರುವುದಾದರೆ ಆಕ್ಷೇಪವಿಲ್ಲ.

ಪಂಚೆ ಉಡುವುದಕ್ಕೂ, ಶಲ್ಯ ಹೊದ್ದುಕೊಳ್ಳುವುದಕ್ಕೂ ಪದ್ಧತಿ ಇದೆ. ನೋಡಿದ ಕೂಡಲೇ ಅವರು ಶಾಸ್ತ್ರೀಯ ವ್ಯಕ್ತಿಗಳೋ ಅಲ್ಲವೋ ಎಂಬುದು ಗೊತ್ತಾಗುತ್ತದೆ. ಬಾಯಿ ಬಿಟ್ಟಾಗ ಲೋ‍ಪ ದೋಷಗಳು ಗೊತ್ತಾಗುತ್ತವೆ. ವೇದದಲ್ಲಿ ಸಣ್ಣ ಸ್ವರ ವ್ಯತ್ಯಾಸವಾದರೂ ವೈದಿಕರು ಸಹಿಸುವುದಿಲ್ಲ.

ಸರ್ಕಾರದ ಸೌಲಭ್ಯಗಳಿಗಾಗಿ ಅನೇಕ ಅಪಸವ್ಯಗಳು ನಡೆಯುತ್ತಿವೆ. ಎಲ್ಲವನ್ನು, ಎಲ್ಲರನ್ನು ಸೀಮಿತಗೊಳಿಸುವ ‍ಪರಿಪಾಠ ಆರಂಭವಾಗಿದೆ. ವಾಲ್ಮೀಕಿಯನ್ನೂ ಒಂದು ಜನಾಂಗಕ್ಕೆ ಕಟ್ಟಿಹಾಕುವ ಮನಸ್ಥಿತಿ ನಿರ್ಮಾಣವಾಗಿದೆ. ಅರ್ಚಕರಾಗಿ ನೇಮಕಗೊಳ್ಳಬೇಕಾದರೆ ಸಂಸ್ಕೃತ ಪಾಠಶಾಲೆಯಲ್ಲಿ ಐದು ವರ್ಷ ಓದಬೇಕು. ವೇದಾಗಮ– ವಿಧಿವಿಧಾನಗಳನ್ನು ಕಲಿಯಬೇಕು. ಯಾರೂ ಬೇಕಾದರೂ ವೇದವನ್ನು ಓದಬಹುದು. ಅರ್ಚಕರಾಗಬಹುದು. ಬ್ರಾಹ್ಮಣರೇ ಅರ್ಚಕರಾಗಬೇಕು ಎಂಬ ಕಟ್ಟುಪಾಡೇನು ಇಲ್ಲ. ಆದರೆ, ಅರ್ಹತೆ ಇರಬೇಕು. ಬರೀ ಮಡಿ ಉಟ್ಟುಕೊಂಡು ದೇವತಾರ್ಚನೆ ಮಾಡಿದರೆ ಮೌಲ್ಯ ಬರುವುದಿಲ್ಲ.

ಗ.ನಾ.ಭಟ್ಟ, ಸಂಸ್ಕೃತ ವಿದ್ವಾಂಸ

***

ಕಾಯ್ದೆಯಡಿ ಆಗಮ ಶಾಸ್ತ್ರದ ಹೇರಿಕೆ

ಮರ, ಅದರಡಿ ಮೂರ್ತಿ, ಅದಕ್ಕೆ ಮೂರಡಿ ಕಟ್ಟಡ ಹೀಗೆ ದೇಗುಲಗಳು ಬೆಳೆದಿವೆ. ಅವನ್ನು ಮೊದಲು ಶೂದ್ರರೇ ಪೂಜಿಸುತ್ತಿದ್ದರು. ಕರ್ನಾಟಕದ ಸಾವಿರಾರು ದೇಗುಲಗಳಲ್ಲಿ ಶೂದ್ರರೇ ತಮ್ಮ ಪರಂಪರೆಗೆ ತಕ್ಕಂತೆ ಪೂಜೆ ನಡೆಸುತ್ತಿದ್ದಾರೆ. ಆದರೆ, ದೇವಸ್ಥಾನ ಜನಪ್ರಿಯವಾಗುತ್ತಿದ್ದಂತೆ ವೈದಿಕರ ಪ್ರವೇಶವಾಗುತ್ತದೆ. ಮಾರಮ್ಮನ ದೇವಾಲಯಕ್ಕೂ ವೈದಿಕ ಪುರೋಹಿತರ ಹಸ್ತಕ್ಷೇಪ ನಡೆದಿದೆ.

ಚಿಕ್ಕ ಗುಡಿಗಳಿಗೆ ಗರ್ಭಗುಡಿ, ಪ್ರಾಂಗಣ ರಚಿಸಿ ಶೂದ್ರರು, ದಲಿತರನ್ನು ಹೊರಹಾಕಲಾಗಿದೆ. ಅದಕ್ಕೆ ಸಂಸ್ಕೃತ, ಆಗಮಶಾಸ್ತ್ರಗಳ ವಿಧಿಗಳನ್ನು ಹೇರಲಾಗುತ್ತದೆ. ಕರಾವಳಿಯ ಭೂತ, ದೈವ, ಕೋಲಗಳಲ್ಲೂ ಬ್ರಾಹ್ಮಣೀಕರಣ ಪ್ರಕ್ರಿಯೆ ನಡೆದಿದೆ. ಆದಾಯ ಬರುವ ದೇವಸ್ಥಾನಗಳೇ ವೈದಿಕರ ಗುರಿಯಾಗುತ್ತವೆಯೇ ಹೊರತು ಆದಾಯ ಬರದ ಸಣ್ಣ ದೇಗುಲಗಳತ್ತ ಅವರು ಸುಳಿಯುವುದೇ ಇಲ್ಲ.

ದಲಿತರು, ಹಿಂದುಳಿದವರು, ಶಿವಶರಣರಿಗೆ ದೇವರು ಒಲಿದಿಲ್ಲವೇ. ಬೇಡರ ಕಣ್ಣಪ್ಪ, ಕನಕದಾಸರಿಗೆ ಶಿವ, ವಿಷ್ಣು ಒಲಿದಿಲ್ಲವೇ. ಅವರೇನು ಸಂಸ್ಕೃತ ಕಲಿತಿ‌ದ್ದರಾ? ಆಗಮಶಾಸ್ತ್ರಗಳನ್ನು ತೂರಿ ಕನ್ನಡದಲ್ಲೇ ಪೂಜೆ ಮಾಡಿದರು. ಶುದ್ಧ–ಅಶುದ್ಧ, ಪಾಂಡಿತ್ಯದ ಪ್ರಶ್ನೆ ಬರಲೇಬಾರದು. ಸಂವಿಧಾನದ ಸಮಾನತೆಯ ತತ್ವವನ್ನು ಸ್ಥಾಪಿಸುವ ಭಾಗವಾಗಿ ದಲಿತರಿಗೆ ದೇವಸ್ಥಾನಗಳಲ್ಲಿ ಅರ್ಚಕ ಹುದ್ದೆ ನೀಡಬೇಕು. ಜನಪದ ನಂಬಿಕೆಗಳ ಮೇಲೆ ಮುಜರಾಯಿ ಕಾಯ್ದೆಯ ಮೂಲಕ ಆಗಮದ ಹೇರಿಕೆಯನ್ನು ಕರ್ನಾಟಕದ ಹಲವು ದೇಗುಲಗಳಲ್ಲಿ ಮಾಡಲಾಗಿದೆ. ಹಾಗಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಲೇಬೇಕು.

ಜಿ.ಎನ್‌.ನಾಗರಾಜ್‌,ಸಿಪಿಎಂ ರಾಜ್ಯ ಮಂಡಳಿ ಸದಸ್ಯ

***

‘ಮತದಾರರ ವಿರೋಧ ಕಟ್ಟಿಕೊಳ್ಳಲು ಇಷ್ಟವಿಲ್ಲ’

ಧಾರ್ಮಿಕ ಆಡಳಿತ ದುರ್ಬಳಕೆಯಾಗಬಾರದು ಎಂದು 1863ರಲ್ಲಿ ಮುಜರಾಯಿ ಕಾಯ್ದೆಯನ್ನು ಬ್ರಿಟಿಷರು ಜಾರಿಗೊಳಿಸಿದರು. ಪ್ರಭುತ್ವದ ಕೆಳಗೆ ಧಾರ್ಮಿಕ ಸಂಸ್ಥೆಗಳು ಇರಬೇಕು. ಧರ್ಮವು ಪ್ರಭುತ್ವವನ್ನು ನಿಯಂತ್ರಿಸಬಾರದು ಎಂಬುದೇ ಅದರ ಉದ್ದೇಶವಾಗಿತ್ತು. ಈ ಹಿಂದೆ ಭಾರತದಲ್ಲಿ 18 ಶಾಸ್ತ್ರಗಳ ಪ್ರಕಾರ ಪುರೋಹಿತನೇ ಮೇಲಿದ್ದರೆ ರಾಜ ಕೆಳಗೆ ಇದ್ದ. ಅದೊಂದು ದಬ್ಬಾಳಿಕೆಯಾಗಿತ್ತು. ಅದನ್ನು ಬ್ರಿಟಿಷರು ಕಡಿಮೆ ಮಾಡಿದರು.

2012ರ ಮುಜರಾಯಿ ಕಾಯ್ದೆಯಲ್ಲಿ ದಲಿತನು ಪುರೋಹಿತನಾಗಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಮಂತ್ರಘೋಷಗಳು ಬರಬೇಕು. ಪೂಜೆ ಮಾಡುವ ವಿಧಿವಿಧಾನಗಳು ಗೊತ್ತಿರಬೇಕು. ಅದಕ್ಕೆ ಬೇಕಾದ ಶಿಕ್ಷಣದ ಪ್ರಮಾಣ ಪತ್ರ ಪಡೆದಿರಬೇಕು. ಅರ್ಚಕರಾಗಿ ನೇಮಕಗೊಂಡರೂ ಸಂಸ್ಕೃತ ಶ್ಲೋಕ ಹೇಳಲು ಬರಲಿಲ್ಲವೆಂದರೆ ಅವರನ್ನು ತೆಗೆದುಹಾಕಬಹುದು. ಸಪ್ತ ವ್ಯಸನಗಳಿಂದ ಅರ್ಚಕ ದೂರ ಇರಬೇಕು. ಹಿಂದೂ ಆಗಿರಬೇಕು. ಮುಜರಾಯಿ ಇಲಾಖೆಯ ಆಯುಕ್ತ ಕೂಡ ಹಿಂದೂ ಆಗಿರಬೇಕು.

ದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ದೇವಾಲಯಗಳಿವೆ. ರಾಜ್ಯದಲ್ಲಿ ಪ್ರತಿ 300 ಜನರಿಗೆ ಒಂದು ದೇವಸ್ಥಾನವಿದೆ. ಈ ಎಲ್ಲ ದೇವಾಲಯಗಳು ಮುಜರಾಯಿ ಕಾಯ್ದೆ ವ್ಯಾಪ್ತಿಯಲ್ಲಿಲ್ಲ. ರಾಜ್ಯದ 1 ಲಕ್ಷ ದೇವಾಲಯಗಳಲ್ಲಿ ಸುಮಾರು 30 ಸಾವಿರ ದೇವಾಲಯಗಳು ಮುಜರಾಯಿ ಕಾಯ್ದೆಯಡಿ ಬರುತ್ತವೆ. ಅವುಗಳಲ್ಲಿ ಅಧಿಕೃತ ಮತ್ತು ಘೋಷಿಸಲ್ಪಟ್ಟ ದೇವಸ್ಥಾನಗಳು ಎಂಬ ಎರಡು ವಿಭಾಗಗಳಿವೆ. ಆನುವಂಶಿಕ, ಖಾಸಗಿ ದೇವಾಲಯಗಳಲ್ಲಿ ವೇದಾಗಮವನ್ನು ಹೇರುವಂತಿಲ್ಲ. ಅದಲ್ಲದೆ ಸಂಯುಕ್ತ ಧಾರ್ಮಿಕ ಸಂಸ್ಥೆಗಳೂ ಇವೆ. ಉದಾಹರಣೆಗೆ ಶಿರಹಟ್ಟಿಯ ಫಕೀರೇಶ್ವರ. ಇಲ್ಲಿ ಎರಡು ಧರ್ಮಗಳು ಒಟ್ಟಿಗೇ ಕಾರ್ಯನಿರ್ವಹಿಸುತ್ತಿವೆ.

ಹಿಂದೆಯೂ ಅರ್ಹತೆ ಪಡೆದ ದಲಿತ ಅರ್ಚಕರನ್ನು 1988ರ ಸುಮಾರಿನಲ್ಲಿ ನೇಮಿಸಲಾಗಿತ್ತು. ಒಂದೇ ವಾರದಲ್ಲಿ ಎಸ್‌.ಆರ್‌.ಬೊಮ್ಮಾಯಿ ಸರ್ಕಾರವು ಅರ್ಚಕರನ್ನು ತೆಗೆದುಹಾಕಿತು. ಮತದಾರರ ವಿರೋಧ ಕಟ್ಟಿಕೊಳ್ಳಲು ಸರ್ಕಾರಕ್ಕೆ ಇಷ್ಟವಿಲ್ಲ.

ಎಸ್‌.ಎಂ.ಜಾಮದಾರ್‌,ನಿವೃತ್ತ ಐಎಎಸ್‌ ಅಧಿಕಾರಿ

***

ಹೊರಗಿಡಲು ಭಾಷೆಯೇ ಮಾನದಂಡ

ಹಿಂದೂ ಅನ್ನುವ ದೊಡ್ಡ ಛತ್ರಿಯ ಕೆಳಗೆ ಇರುವ ದೇವಾಲಯಗಳು, ವಿಧಿ ವಿಧಾನಗಳು, ಸಮುದಾಯಗಳು ಒಂದೇ ಅಲ್ಲ. ಅರ್ಚಕರು ಒಂದೇ ಜಾತಿಯವರಲ್ಲ. ಆದರೆ, ಪರಂಪರೆ ಎಂದ ಕೂಡಲೇ ವೇದ ಆಗಮ ಮಾತ್ರವೇ. ಜನಪದದಲ್ಲಿ ಹಲವು ಪರಂಪರೆಗಳು ಇವೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು– ಧಾರ್ಮಿಕ ದತ್ತಿ ಅಧಿನಿಯಮ ಕಾಯ್ದೆ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ.

ಸಾಮಾಜಿಕ ಮನ್ನಣೆಯ ಸ್ವರೂಪ ಹಾಗೂ ಆರ್ಥಿಕ ನೆಲೆಗೂ ಧರ್ಮವೇ ಶಕ್ತಿ. ಅದು ಇನ್ನೊಬ್ಬರನ್ನು ಕೀಳರಿಮೆಗೆ ತಳ್ಳಿ ಆಳುವ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತದೆ. ಗ್ರಾಮದೇವತೆಯ ಪೂಜೆಗೆ ಸಂಸ್ಕೃತ ಮಂತ್ರ ಬೇಕಿಲ್ಲ. ಆ ದೇವತೆಗಳ ದೇವಾಲಯಗಳಲ್ಲಿ ಅರ್ಚಕರಾಗುವ ಬ್ರಾಹ್ಮಣರು ಹಳೆಯ ವಿಧಿವಿಧಾನಗಳನ್ನು ಮುಂದುವರಿಸುವುದಿಲ್ಲ. ಬ್ರಾಹ್ಮಣರೂ ಸ್ಥಳೀಯ ಪರಂಪರೆಯನ್ನು ಕಲಿಯಬೇಕಲ್ಲವೇ?

ನಮ್ಮ ಮನೆಯ ಸಮೀಪದ ಶನೀಶ್ವರ ದೇವಾಲಯದಲ್ಲಿ ದಲಿತ ಅರ್ಚಕರೊಬ್ಬರಿದ್ದರು. ದೇಗುಲ ಜನಪ್ರಿಯವಾಗುತ್ತಿದ್ದಂತೆ ದೇವಾಲಯ ಸಮಿತಿ ರಚನೆಯಾಯಿತು. ಹಲವು ವರ್ಷಗಳಿಂದ ಪೂಜಿಸಿದ ಅರ್ಚಕನನ್ನು ಪರೀಕ್ಷೆಗೊಡ್ಡಲಾಯಿತು. ‘ನಿನಗೆ ನಮ್ಮ ವಿಧಿ– ವಿಧಾನಗಳು, ಹೋಮ ಬರುತ್ತದೆಯೇ’ ಎಂಬ ಪರೀಕ್ಷೆಗಳಾದವು. ಆ ಪರೀಕ್ಷೆಗಳಲ್ಲಿ ಅರ್ಚಕ ಉತ್ತೀರ್ಣನಾದಾಗ ಸಮಿತಿಯವರು ‘ನೀನು ಹಿಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿದ್ದೆ. ಅದಕ್ಕೆ ಪಾಸು ಮಾಡಿದೆ’ ಎಂದರಂತೆ.

ಸಂಸ್ಕೃತ, ಆಗಮ, ಶಾಸ್ತ್ರ ಎಂಬ ಮಾನದಂಡಗಳು ಶಕ್ತಿ ಕೇಂದ್ರಿತ ರಾಜಕಾರಣದ ಭಾಗ. ಅವುಗಳ ಮೂಲಕ ನಿರ್ದಿಷ್ಟ ವರ್ಗ ಇಡೀ ಧಾರ್ಮಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಭಾಷೆ ಶುದ್ಧವಾಗಿ ಬರಬೇಕು ಎಂಬುದು ಹುದ್ದೆಯಿಂದ ಕೆಲವರನ್ನು ಹೊರಗಿಡುವುದಕ್ಕಿರುವ ಮಾನದಂಡ.

ಸಬಿತಾ ಬನ್ನಾಡಿ,ಅಂಕಣಕಾರ್ತಿ

www.facebook.com/prajavani.net

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT