ಮಂಗಳವಾರ, ಮಾರ್ಚ್ 28, 2023
31 °C
ಹೆದ್ದಾರಿಯಿಂದ 500 ಮೀ. ಆಚೆ ಹೊಸ ಮದ್ಯದಂಗಡಿ

ಮದ್ಯ ಖರೀದಿ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಕೆ ಮಾಡಲು ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು–1967ಕ್ಕೆ ತಿದ್ದುಪಡಿ ತರಲಾಗುತ್ತಿದೆ.

ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆಯು ಸಿದ್ಧಪಡಿಸಿರುವ ಕರಡು ಪ್ರತಿಯನ್ನು ಸೋಮವಾರ (ಜನವರಿ 9) ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು–1967ರ ಸೆಕ್ಷನ್‌ 10 (1) (ಇ) ಅಡಿಯಲ್ಲಿ ಮದ್ಯ ಖರೀದಿದಾರನ ವಯಸ್ಸಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸುವ ಉಲ್ಲೇಖ ತಿದ್ದುಪಡಿ ಕರಡಿನಲ್ಲಿದೆ.

‘21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ’ ಎಂದು ಸೆಕ್ಷನ್‌ 10 (1) (ಇ)ನಲ್ಲಿ ಹೇಳಲಾಗಿತ್ತು. ಅದನ್ನು ಬದಲಿಸಿ, ‘18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ’ ಎಂಬುದನ್ನು ಸೇರಿಸುವ ಪ್ರಸ್ತಾವ ಇದೆ.

ಹೆದ್ದಾರಿಯಿಂದ 500 ಮೀ. ಅಂತರ:

ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು 5,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಅಂಚಿನಿಂದ 500 ಮೀಟರ್‌ವರೆಗಿನ ಪ್ರದೇಶದಲ್ಲಿ ಹೊಸ ಮದ್ಯದಂಗಡಿ ತೆರೆಯುವುದನ್ನು ನಿರ್ಬಂಧಿಸಿರುವುದನ್ನು ಅಬಕಾರಿ ನಿಯಮಗಳ ವ್ಯಾಪ್ತಿಗೆ ತರಲಾಗುತ್ತಿದೆ.

ಹೆದ್ದಾರಿಗಳ ಅಂಚಿನಿಂದ 500 ಮೀಟರ್‌ವರೆಗೆ ಮದ್ಯದಂಗಡಿಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ 2016ರಲ್ಲಿ ತೀರ್ಪು ನೀಡಿತ್ತು. ನಗರ ಸ್ಥಳೀಯ ಸಂಸ್ಥೆಗಳು ಮತ್ತು 5,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ನಿರ್ಬಂಧಿತ ಪ್ರದೇಶದ ಮಿತಿಯನ್ನು 220 ಮೀಟರ್‌ಗೆ ಪರಿಷ್ಕರಿಸಿ 2017ರಲ್ಲಿ ಸುಪ್ರೀಂ ಕೋರ್ಟ್‌ ಮತ್ತೊಂದು ಆದೇಶ ಹೊರಡಿಸಿತ್ತು.

ಹೆದ್ದಾರಿ ಪಕ್ಕದ ಮದ್ಯದಂಗಡಿಗಳಿಗೆ ಸಂಬಂಧಿಸಿದಂತೆ 2017ರಿಂದಲೂ ಸುತ್ತೋಲೆ ಮೂಲಕ ಜಾರಿಯಲ್ಲಿದ್ದ ನಿರ್ಬಂಧವನ್ನು ನಿಯಮಗಳಲ್ಲಿ ಸೇರಿಸಲಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಅಬಕಾರಿ (ಸನ್ನದುಗಳಿಗೆ ಸಾಮಾನ್ಯ ಷರತ್ತುಗಳು) ನಿಯಮ–1967ರ ಸೆಕ್ಷನ್‌ 5ಕ್ಕೆ ತಿದ್ದುಪಡಿ ತರಲಾಗುತ್ತಿದೆ.

‘20,000 ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆದ್ದಾರಿಯ ಅಂಚಿನಿಂದ 220 ಮೀಟರ್‌ ನಂತರದಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಹುದು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ 2011ರ ಜನಗಣತಿ ಪ್ರಕಾರ 5,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳ ವ್ಯಾಪ್ತಿಗೆ 500 ಮೀಟರ್‌ ನಿರ್ಬಂಧ ಅನ್ವಯವಾಗುವುದಿಲ್ಲ’ ಎಂದು ಉದ್ದೇಶಿತ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಿ ಕಚೇರಿಗಳಿಂದ 100 ಮೀಟರ್‌ ಅಂತರದಲ್ಲಿ ಮದ್ಯದಂಗಡಿ ಪರವಾನಗಿ ನೀಡುವಂತಿಲ್ಲ ಎಂಬ ನಿಯಮವನ್ನು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಿಎಲ್‌–4 (ಕ್ಲಬ್‌) ಸಿಎಲ್‌–6ಎ (ತಾರಾ ಹೋಟೆಲ್‌) ಮತ್ತು ಸಿಎಲ್‌–7ಗಳಿಗೆ (ಪ್ರವಾಸಿ ಹೋಟೆಲ್‌ ಸನ್ನದು) ಸೀಮಿತವಾಗಿ ಕೈಬಿಡುವ ಪ್ರಸ್ತಾವ ತಿದ್ದುಪಡಿಯಲ್ಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು