ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RTO ಠಾಣೆಗಳ ಮೇಲೆ ಲೋಕಾಯುಕ್ತ ಪೊಲೀಸ್‌ ದಾಳಿ: ₹11.03 ಲಕ್ಷ ನಗದು ವಶ

ಗಡಿಭಾಗದ ಏಳು ತನಿಖಾ ಠಾಣೆಗಳಲ್ಲಿ ಶೋಧ
Last Updated 1 ಅಕ್ಟೋಬರ್ 2022, 2:23 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಜ್ಯ ಗಡಿ ಭಾಗಗಳಲ್ಲಿರುವ ಸಾರಿಗೆ ಇಲಾಖೆಯ ಏಳು ತನಿಖಾ ಠಾಣೆಗಳ ಮೇಲೆ ಶುಕ್ರವಾರ ಬೆಳಿಗ್ಗೆ ದಾಳಿ ಮಾಡಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮವಾಗಿ ಸಂಗ್ರಹಿಸಿದ್ದ ₹11.03 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ಧೂಳಕೇಡ (ಝಳಕಿ), ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕೊಂಗನಹಳ್ಳಿ, ಬೆಂಗಳೂರು ನಗರ ಜಿಲ್ಲೆಯ ಅತ್ತಿಬೆಲೆ, ಬೀದರ್‌ ಜಿಲ್ಲೆಯ ಬೋಲ್ಕೆರೆ (ಹುಮ್ನಾಬಾದ್‌), ಬಳ್ಳಾರಿ ಜಿಲ್ಲೆಯ ಗೋದಾಳ್‌, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ತನಿಖಾ ಠಾಣೆಗಳ ಮೇಲೆ ಶುಕ್ರವಾರ ಬೆಳಗಿನ ಜಾವ 4.30 ಗಂಟೆಗೆ ದಾಳಿಮಾಡಿದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು, ಶೋಧ ನಡೆಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಜೂನ್‌ 24 ರಂದು ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಆಗ ಅವರನ್ನು ಭೇಟಿ ಮಾಡಿದ್ದ ಸ್ಥಳೀಯರು, ಅಂತರರಾಜ್ಯ ಗಡಿಯಲ್ಲಿನ ಸಾರಿಗೆ ತನಿಖಾ ಠಾಣೆಗಳಲ್ಲಿ ಅವ್ಯವಹಾರ, ಅಕ್ರಮ ನಡೆಯುತ್ತಿರುವ ಬಗ್ಗೆ ಮೌಖಿಕವಾಗಿ ದೂರು ಹೇಳಿದ್ದರು. ಬಳಿಕ ಧೂಳಖೇಡ ತನಿಖಾ ಠಾಣೆಯಲ್ಲಿ ದಿಢೀರ್‌ ತಪಾಸಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ವರದಿ ಸಲ್ಲಿಸಿದ್ದರು. ಈ ಸಂಬಂಧ ಜೂನ್‌ 30ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತರು ವಿಚಾರಣೆ ಆರಂಭಿಸಿದ್ದರು.

ಸುಳ್ಳು ಹೇಳಿದ ಅಧಿಕಾರಿಗಳು: ಸಾರಿಗೆ ಇಲಾಖೆ ಕಾರ್ಯದರ್ಶಿ, ಆಯುಕ್ತರು ಸೇರಿದಂತೆ ಹಲವು ಅಧಿಕಾರಿಗಳಿಗೆ ಲೋಕಾಯುಕ್ತರು ನೋಟಿಸ್‌ ಜಾರಿಗೊಳಿಸಿದ್ದರು. ವರದಿಯೊಂದನ್ನು ಸಲ್ಲಿಸಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು, ತನಿಖಾ ಠಾಣೆಗಳಲ್ಲಿನ ಅಕ್ರಮ, ಅವ್ಯವಹಾರ ತಡೆಗೆ ಕ್ರಮ ಕೈಗೊಂಡಿರುವುದಾಗಿ ಸಮಜಾಯಿಷಿ ನೀಡಿದ್ದರು.

ಸಾರಿಗೆ ಇಲಾಖೆ ಅಧಿಕಾರಿಗಳ ವರದಿ ಕುರಿತು ಸಂಶಯಗೊಂಡಿದ್ದ ಲೋಕಾಯುಕ್ತರು, ಸಂಸ್ಥೆಯ ಪೊಲೀಸ್‌ ಅಧಿಕಾರಿಗಳ ಮೂಲಕ ಸಾರಿಗೆ ತನಿಖಾ ಠಾಣೆಗಳಲ್ಲಿನ ಚಟುವಟಿಕೆಗಳ ಬಗ್ಗೆ ಗೋಪ್ಯ ಮಾಹಿತಿ ಸಂಗ್ರಹಿಸಿದ್ದರು. ಅಲ್ಲಿ ಅಕ್ರಮ ನಡೆಯುತ್ತಿರುವುದು ಖಚಿತವಾದ ಬಳಿಕ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 10 ರಡಿ ಶೋಧನಾ ವಾರೆಂಟ್‌ ಜಾರಿಗೊಳಿಸಿದ್ದರು.

‘ಎಲ್ಲ ಏಳು ತನಿಖಾ ಠಾಣೆಗಳಲ್ಲೂ ಅಕ್ರಮವಾಗಿ ಸಂಗ್ರಹಿಸಿದ್ದ ನಗದು ವಶಕ್ಕೆ ಪಡೆಯಲಾಗಿದೆ. ಅಲ್ಲಿ ಅಕ್ರಮ, ಅವ್ಯವಹಾರಗಳು ನಡೆಯುತ್ತಿರುವ ಕುರಿತು ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಒಟ್ಟು ₹ 11,03,647 ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

ಬಾರದ ಅಧಿಕಾರಿಗಳು: ಒಟ್ಟು ಒಂಬತ್ತು ತನಿಖಾ ಠಾಣೆಗಳ ಮೇಲೆ ದಾಳಿಮಾಡಿ, ಶೋಧ ನಡೆಸುವಂತೆ ಲೋಕಾಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ವಿಜಯನಗರ ಜಿಲ್ಲೆ ಹೊಸಪೇಟೆ ಮತ್ತು ಕೊಪ್ಪಳ ಜಿಲ್ಲೆಯ ಬೂದಗುಂಬ ಚೆಕ್‌ ಪೋಸ್ಟ್‌ಗಳಲ್ಲಿ ಯಾವೊಬ್ಬ ಅಧಿಕಾರಿ, ಸಿಬ್ಬಂದಿಯೂ ಕರ್ತವ್ಯದಲ್ಲಿ ಇರಲಿಲ್ಲ. ಹೀಗಾಗಿ ಅಲ್ಲಿ ಶೋಧ ನಡೆಸಿಲ್ಲ.

ನಗದು ಹೊರಗೆಸೆದ ನಿರೀಕ್ಷಕಿ

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಶ್ರೀನಾಥ್‌ ಜೋಶಿ ನೇತೃತ್ವದ ತಂಡ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಸಾರಿಗೆ ತನಿಖಾ ಠಾಣೆಯ ಮೇಲೆ ದಾಳಿಮಾಡಿ ಶೋಧ ಆರಂಭಿಸುತ್ತಿದ್ದಂತೆ ಅಲ್ಲಿದ್ದ ಮೋಟಾರು ವಾಹನ ನಿರೀಕ್ಷಕಿ ಲಕ್ಷ್ಮಿ ಎಂಬುವವರು ₹14,000 ನಗದನ್ನು ಕಿಟಕಿಯಿಂದ ಹೊರಕ್ಕೆ ಎಸೆದ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT