ಮಂಗಳವಾರ, ಜನವರಿ 31, 2023
27 °C

ಭಯೋತ್ಪಾದನಾ ಚಟುವಟಿಕೆ ಮೂಲೋತ್ಪಾಟನೆಗೆ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: 'ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಯನ್ನು ಮೂಲೋತ್ಪಾಟನೆ ಮಾಡಲು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆಯೂ ಆಳವಾಗಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾದ ಎಲ್ಲಾ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ'  ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
'ಈ ಹಿಂದೆ ಬಹಳ ಕಡೆ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆ ಇಂತಹ ಚಟುವಟಿಕೆ ಹತ್ತಿಕ್ಕಲು ಒತ್ತು ನೀಡಿವೆ. ಹಾಗಾಗಿ ಭಯೋತ್ಪಾದನಾ ಕೃತ್ಯಗಳು ಕಡಿಮೆಯಾಗಿವೆ' ಎಂದರು.

'ಈ ಹಿಂದೆ ಮಂಗಳೂರಿನಲ್ಲಿ ಉಗ್ರಗಾಮಿ ಸಂಘಟನೆಗಳನ್ನು ಬೆಂಬಲಿಸಿ ಗೋಡೆಬರಹದ ಬರೆದ ಪ್ರಕರಣದಲ್ಲಿ ಆರೋಪಿ ಮಹಮದ್ ಶಾರಿಕ್ ಬಂಧನಕ್ಕೊಳಗಾಗಿದ್ದ. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿ)ಕಾಯ್ದೆ ಆಡಿಯೂ ಪ್ರಕರಣ ದಾಖಲಾಗಿತ್ತು. ಆತನ ಚಲನವಲನಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು. ತೀರ್ಥಹಳ್ಳಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದ ಆತ ಒಂದು ದಿನ ಏಕಾಏಕಿ ನಾಪತ್ತೆಯಾದ. ಬಳಿಕವು ಪದೇ ಪದೇ ಸ್ಥಳಗಳನ್ನ ಬದಲಾಯಿಸಿದ್ದಾನೆ. ಗುರುತು ಬದಲಾಯಿಸಿ ತನ್ನನ್ನು ಹಿಂದು ಎಂಬಂತೆ ಬಿಂಬಿಸಿಕೊಂಡು ತಿರುಗಾಡುತ್ತಿದ್ದ. ಅವನು ಮೊಬೈಲ್ ಫೋನನ್ನು ಬಳಸುತ್ತಿರಲಿಲ್ಲ. ಹಾಗಾಗಿ ಆತ ಇಷ್ಟೆಲ್ಲ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದರೂ ಪೊಲೀಸ್ ಇಲಾಖೆಗೆ ಸುಳಿವು ಸಿಕ್ಕಿರಲಿಲ್ಲ' ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

'ಆರೋಪಿಯು ಕೊಯಮುತ್ತೂರು ಕೊಚ್ಚಿನ್, ನಾಗರಕೋಯಿಲ್, ಕನ್ಯಾಕುಮಾರಿ ಮೊದಲಾದ ಕಡೆ ಸುತ್ತಾಡಿದ್ದಾನೆ. ಪೊಲೀಸರ ತಂಡಗಳು ಅಲ್ಲಿಗೂ ತೆರಳಿ ಸಮಗ್ರವಾದ ಮಾಹಿತಿ ಕಲೆ ಹಾಕುತ್ತಿವೆ' ಎಂದರು

ಈ ಭಯೋತ್ಪಾದನಾ ಕೃತ್ಯದಲ್ಲಿ ಹೆಸರು ಕೇಳಿ ಬಂದಿರುವ ಪ್ರಮುಖ ಆರೋಪಿಗಳೆಲ್ಲರೂ ತೀರ್ಥಹಳ್ಳಿಯವರೇ ಆಗಿರುವ ಕುರಿತು ಪ್ರತಿಕ್ರಿಸಿದ ಗೃಹ ಸಚಿವರು, 'ತೀರ್ಥಹಳ್ಳಿ ಅತ್ಯಂತ ಸುಸಂಸ್ಕೃತವಾದ ತಾಲ್ಲೂಕು. ನಾಡಿಗೆ ದೊಡ್ಡ ಸಾಹಿತಿಗಳನ್ನ ಹಾಗೂ ಉತ್ತಮ ರಾಜಕಾರಣಿಗಳನ್ನು ಕೊಡುಗೆ ನೀಡಿದ ಪ್ರದೇಶವಿದು. ಇಲ್ಲಿನ ಕೆಲ ಯುವಕರು ಕರಾವಳಿ ಹಾಗೂ ಕೇರಳದ ಸಂಪರ್ಕದಿಂದ ಹಾಗೂ ಮತಾಂಧ ಸಂಘಟನೆಗಳ ಪ್ರಭಾವಕ್ಕೆ ಸಿಲುಕಿ ಇಂಥ ಕೃತ್ಯದಲ್ಲಿ ತೊಡಗಿದ್ದಾರೆ' ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವರು,'ಮಂಗಳೂರಿನಲ್ಲಿ ಎನ್ ಐ ಎ ಘಟಕ ಸ್ಥಾಪಿಸುವ ಅಗತ್ಯ ಇದೆ' ಎಂದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, 'ಹಿಂದೂ ಮುಸ್ಲಿಂ ಮತ್ತು ಕ್ರೈಸ್ತರ ನಡುವೆ ಸೌಹಾರ್ದ ಕೆಡಿಸಿ, ಕೋಮು ದ್ವೇಷ ಸೃಷ್ಟಿಸುವುದೇ ಇಂತಹ ಕೃತ್ಯದ ಮೂಲ ಉದ್ದೇಶ' ಎಂದು ತಿಳಿಸಿದರು.

'ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಣಕಾಸಿನ ಮೂಲ ಯಾವುದು ?  ಅವರಿಗೆ ದುಡ್ಡು ಎಲ್ಲಿಂದ ಬರುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದೇವೆ. ತನಿಖೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದೇವೆ. ಅದರ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗದು' ಎಂದರು.

'ಆರೋಪಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳಾದ ಕಂಪ್ಯೂಟರ್, ಫೋನ್ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಆತನಿಂದ ಕೆಲವು ಮಾಹಿತಿ ಸಂಗ್ರಹಿಸಬೇಕಿದೆ' ಎಂದರು.

'ಈ ಪ್ರಕರಣದ ತನಿಖೆಯನ್ನು ಎನ್ ಐ ಎಗೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಘಟನೆ ನಡೆದ ಮೊದಲ ದಿನದಿಂದಲೂ ಘನ್ ಐ ಎಂ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ತನಿಖಾ ಏಜೆನ್ಸಿಗಳು ನಮ್ಮ ಜೊತೆ ಸಂಪರ್ಕದಲ್ಲಿವೆ. ಆ ಏಜೆನ್ಸಿಗಳು ಕೂಡ ತನಿಖೆ ನಡೆಸುತ್ತಿವೆ  ಎಂದರು.

 'ಎಂಟು ಮಂದಿ ತಜ್ಞ ವೈದ್ಯರು ಆರೋಪಿಯ ಆರೋಗ್ಯ ಸುಧಾರಣೆ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ' ಎಂದು ಗೃಹ ಸಚಿವರು ತಿಳಿಸಿದರು.

ಮಂಗಳೂರಿನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ,'ಈ ಪ್ರಕರಣ ಸಂಬಂಧ ಒಟ್ಟು ಎಂಟು ಕಡೆಗಳಲ್ಲಿ ಶೋಧ ನಡೆಸಿದ್ದೇವೆ. ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಅವರನ್ನು ಆರೋಪಿಗಳೆಂದು ಇನ್ನೂ ಪರಿಗಣಿಸಿಲ್ಲ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು