ಬೆಂಗಳೂರು: ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಒದಗಿಸಲು ನಾಗರಿಕ ಸರ್ಕಾರವೊಂದು ಮಸೂದೆ ಮಂಡಿಸುವುದು ಸಂವಿಧಾನ ವಿರೋಧಿ ನಡೆ. ಎಲ್ಲ ಧರ್ಮಗಳ ಧಾರ್ಮಿಕ ಕಟ್ಟಡಗಳೂ ಮೌಢ್ಯ ಬಿತ್ತುವ ತಾಣಗಳಾಗಿವೆ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಕಟ್ಟಡಗಳು ಅಸಮಾನತೆ, ಅಸ್ಪೃಶ್ಯತೆಯನ್ನು ಪೋಷಿಸುತ್ತಿವೆ. ಅಂತಹ ಅಕ್ರಮ ಕಟ್ಟಡಗಳನ್ನು ಏಕೆ ರಕ್ಷಿಸಬೇಕು? ಎಂದು ಮರಿತಿಬ್ಬೇಗೌಡ ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಆದೇಶ ಪಾಲಿಸಿ, ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು. ಅಸಮಾನತೆಯನ್ನು ತೊಡೆದುಹಾಕಲು ಸರ್ಕಾರ ಕಾನೂನು ಮಾಡಬೇಕು. ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸುವುದರಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಒಳಿತಾಗುವುದಿಲ್ಲ ಎಂದು ಮರಿತಿಬ್ಬೇಗೌಡ ಹೇಳಿದರು.
ಮುಖ ಉಳಿಸಿಕೊಳ್ಳುವ ಯತ್ನ: ‘ದೇವಸ್ಥಾನ ತೆರವುಗೊಳಿಸುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈಗ ಮುಖ ಉಳಿಸಿಕೊಳ್ಳಲು ಮಸೂದೆ ತರಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಟೀಕಿಸಿದರು.
‘ಈ ಮಸೂದೆ ದುರ್ಬಳಕೆ ಆಗದಂತೆ ತಡೆಯಬೇಕು. ರಕ್ಷಣೆ ಒದಗಿಸಲಾಗುತ್ತದೆ ಎಂಬ ಭಾವನೆಯಿಂದ ರಾತ್ರೋರಾತ್ರಿ ಹೊಸದಾಗಿ ಧಾರ್ಮಿಕ ಕಟ್ಟಡಗಳನ್ನು ಕಟ್ಟುವ ಅಪಾಯವಿದೆ’ ಎಂದು ಕಾಂಗ್ರೆಸ್‌ನ ಪಿ.ಆರ್. ರಮೇಶ್ ಹೇಳಿದರು.