ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ, ಕೋಟಿ ಕೊಟ್ಟು ನೇಮಕಗೊಂಡ ಕುಲಪತಿಗಳು ಅಕ್ರಮ ನಡೆಸದಿರಲು ಸಾಧ್ಯವೇ?

ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಇತರೆ ಕೆಲ ಕಾನೂನು ತಿದ್ದುಪಡಿ ಮಸೂದೆಗೆ ಪರಿಷತ್ ಅನುಮೋದನೆ
Last Updated 10 ಡಿಸೆಂಬರ್ 2020, 14:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಲಪತಿ ನೇಮಕದಲ್ಲಿ ಅಕ್ರಮ ನಡೆಯುತ್ತಿದೆ. ಐದಾರು ಕೋಟಿ ಲಂಚ ಕೊಟ್ಟು ಹುದ್ದೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಇಷ್ಟು ಮೊತ್ತ ನೀಡಿದವರು ಅಕ್ರಮ ನಡೆಸದೇ ಇರಲು ಸಾಧ್ಯವೇ’ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನಿಸಿದರು.

ವಿಧಾನ ಪರಿಷತ್ ನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.‌ಸಿ.ಎನ್.‌ ಅಶ್ವತ್ಥನಾರಾಯಣ ಮಂಡಿಸಿದ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಇತರೆ ಕೆಲವು ಕಾನೂನು ತಿದ್ದುಪಡಿ ಮಸೂದೆ ಮೇಲೆ‌ ನಡೆದ ಚರ್ಚೆ ವೇಳೆ‌ ಮಾತನಾಡಿದ ಅವರು, ‘ಈ ವ್ಯವಸ್ಥೆಯನ್ನು ತೆಗೆದುಹಾಕಬೇಕು. ಜತೆಗೆ ವಿಶ್ವವಿದ್ಯಾಲಯ ಪ್ರಗತಿಯಲ್ಲಿ ಶಾಸಕರು ಪಾಲ್ಗೊಳ್ಳುವ ಕಾರ್ಯ ಆಗಬೇಕು. ಯಾವ ರೀತಿ ಬಳಸಿಕೊಳ್ಳಬಹುದು ಎನ್ನುವುದನ್ನು ಸಚಿವರು ನಿರ್ಧರಿಸಿ. ವಿವಿ ಅಕ್ರಮ ತಡೆಯುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ಮಸೂದೆ ‌ಮಂಡಿಸಿ ವಿವರಣೆ ನೀಡಿದ ಸಚಿವರು, ಬೆಂಗಳೂರಿನಲ್ಲಿ ನೃಪತುಂಗ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದ್ದು, ಕೇಂದ್ರ ಸರ್ಕಾರ 55 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ಸರ್ಕಾರಿ ವಿಜ್ಞಾನ ಕಾಲೇಜು ದೇಶದ ಮೂರು ಪ್ರಮುಖ ಕಾಲೇಜಿನಲ್ಲಿ ಒಂದು. 2600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನು ಉನ್ನತಿಕರಿಸುವ ಸಲುವಾಗಿ ಹಾಗೂ ದೂರ ಶಿಕ್ಷಣ ಕ್ಷೇತ್ರ ವ್ಯಾಪ್ತಿ ವಿಸ್ತರಿಸಲು ಅವಕಾಶ ನೀಡಿ ತಿದ್ದುಪಡಿ ತರಲಾಗಿದೆ. ಹಿಂದೆ ಕುಲಪತಿ ವಿಚಾರದಲ್ಲಿ ಅವಕಾಶ ಸೀಮಿತವಾಗಿತ್ತು. ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಲು ಅನುಕೂಲ ಕಲ್ಪಿಸಲು ಕಾಯ್ದೆಯ ಸೆಕ್ಷನ್ 14 ರಲ್ಲಿ ಬದಲಾವಣೆ ತರಲಾಗಿದೆ. ಇವೂ ಸೇರಿದಂತೆ ಹಲವು ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವ ಬದಲಾವಣೆ ತಂದು ತಿದ್ದುಪಡಿ ಮಾಡಿ ಕಾಯ್ದೆ ತರಲಾಗಿದೆ ಎಂದರು.

ವಿರೋಧ ಪಕ್ಷ ದ ನಾಯಕ ಎಸ್.ಆರ್. ಪಾಟೀಲ, ‘ಕುಲಪತಿ ನೇಮಕಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸಬಾರದು. ಪ್ರೊಫೆಸರ್ ಗಳಿಗೆ ಅವಕಾಶ ಸಿಕ್ಕರೆ ಶಿಕ್ಷಣ ಪ್ರಗತಿ ಸಾಧ್ಯ. ಹಣ ಹಾಗೂ ಜಾತಿ ಆಧಾರದ ಮೇಲೆ ಉಪಕುಲಪತಿಗಳ ನೇಮಕವಾದರೆ ಮಕ್ಕಳ ಭವಿಷ್ಯ ಬೆಳಗುವುದು ಹೇಗೆ? ವಿಶ್ವವಿದ್ಯಾಲಯಗಳನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ವಿಶ್ವದ ಅತ್ಯುತ್ತಮ 200 ವಿಶ್ವವಿದ್ಯಾಲಯ ದಲ್ಲಿ ಭಾರತದ ಒಂದು ವಿವಿಯೂ ಇಲ್ಲ. ಕನಿಷ್ಠ ಒಂದಾದರೂ ವಿವಿ 200 ರ ಒಳಗೆ ರಾಜ್ಯದ ವಿವಿ ಬರುವಂತೆ ಮಾಡಿ’ ಎಂದು ಸಲಹೆ ನೀಡಿದರು.

ಜೆಡಿಎಸ್ ನ ಭೋಜೇಗೌಡ, ‘ವಿಶ್ವವಿದ್ಯಾಲಯಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಸಿಬ್ಬಂದಿ ಕೊರತೆ ಇದೆ. ವಿವಿಗಳು ವ್ಯಾಪಾರೀಕರಣದ ಕೇಂದ್ರವಾಗಿದೆ. ರಾಜಕೀಯ ಪ್ರಭಾವಿ ನಾಯಕರ ಆಪ್ತರೇ ಇಲ್ಲಿನ ಆಯಕಟ್ಟಿನ ಸ್ಥಾನದಲ್ಲಿದ್ದಾರೆ. ಐಎಎಸ್ ದರ್ಜೆಯ ಅಧಿಕಾರಿಗಳನ್ನು ನೇಮಿಸಬಾರದು. ಹಣ ಗಳಿಕೆ ಕೇಂದ್ರ ಆಗಬಾರದು ಹಾಗೂ ಬಿಳಿ ಆನೆಯಾಗಬಾರದು’ ಎಂದರು.

ಬಿಜೆಪಿಯ ಎಸ್.ವಿ.ಸಂಕನೂರು, ‘ಇದುವರೆಗೂ ಹಲವು ವಿವಿಗಳಲ್ಲಿ ದೂರಶಿಕ್ಷಣ ನಡೆಸುತ್ತಿದ್ದೆವು. ಆದರೆ ಮುಕ್ತ ವಿವಿ ಹೊರತುಪಡಿಸಿ ಉಳಿದ ವಿವಿಗೆ ಅವಕಾಶ ಇಲ್ಲ. ವಿಶ್ವವಿದ್ಯಾಲಯಗಳು ಸಾಕಷ್ಟು ಹಣಕಾಸು ಸಮಸ್ಯೆ ಎದುರಿಸುತ್ತಿವೆ. ದೂರಶಿಕ್ಷಣ ವ್ಯವಸ್ಥೆಯಿಂದ ಒಂದಿಷ್ಟು ಆದಾಯ ಬರುತ್ತಿತ್ತು. ಅದು ನಿಂತರೆ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟ. ರಿಜಿಸ್ಟ್ರಾರ್ ಗಳನ್ನು ಹೊರಗಿನಿಂದ ತಂದು ಕೂರಿಸಿದರೆ ಮಾಹಿತಿ ಕೊರತೆ ಎದುರಾಗಲಿದೆ. ಹಿರಿಯ ಪ್ರಾಧ್ಯಾಪಕರಿಗೆ ಅವಕಾಶ ಇತ್ತು. ಇಷ್ಟು ಅವಕಾಶ ಹಿಂದೆ ಇದ್ದಾಗ ಸಾಕಷ್ಟು ಉತ್ತಮವಾಗಿ ನಡೆದಿತ್ತು. ಈಗೇನು ಸಮಸ್ಯೆ ಆಗಿದೆ ಎಂದರು.

ಜೆಡಿಎಸ್ ರಮೇಶ್ ಗೌಡ, ಅಪ್ಪಾಜಿಗೌಡ, ಬಿಜೆಪಿ ಸದಸ್ಯರಾದ ರವಿಕುಮಾರ್, ಪುಟ್ಟಣ್ಣ, ಸಾಯಬಣ್ಣ ತಳವಾರ್, ತೇಜಸ್ವಿನಿ ಗೌಡ ಮಾತನಾಡಿದರು.

ಸದಸ್ಯರ ಚರ್ಚೆಯ ನಂತರ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಪರ-ವಿರುದ್ಧವಾಗಿ ಸಾಕಷ್ಟು ಸಲಹೆ ಕೇಳಿ ಬಂದಿದೆ. ರಾಜ್ಯದಲ್ಲಿ 5.5 ಸಾವಿರ ರಾಜ್ಯದಲ್ಲಿ ಕಾಲೇಜಿದೆ. ದೇಶದಲ್ಲಿ 80 ಸಾವಿರ ಕಾಲೇಜುಗಳಿವೆ. ಮಹಾರಾಣಿ ಕ್ಲಸ್ಟರ್ ದೇಶದಲ್ಲಿನ ಮೂರರಲ್ಲಿ ಒಂದು ಕಾಲೇಜು. ಮಂಡ್ಯದ ಕಾಲೇಜು ಸಹ ಅತ್ಯುನ್ನತ ಕಾಲೇಜಾಗಿದೆ. ಬೇರೆ ವಿಶ್ವವಿದ್ಯಾಲಯಗಳು ಸಿ ದರ್ಜೆಯದ್ದಾಗಿವೆ. ಆದರೆ ನಮ್ಮ ವಿವಿಗಳು ಎ+ ದರ್ಜೆಯದ್ದಾಗಿವೆ. ಇತರರಿಗೆ ನಾವು ಮಾದರಿ ಆಗಿದ್ದೇವೆ. ಉಪಕುಲಪತಿ ನೇಮಕದಲ್ಲಿ‌ ಹಣ, ಜಾತಿಗೆ ಆಸ್ಪದ ನೀಡದೇ ಉತ್ತಮ ಕುಲಪತಿ ನೇಮಿಸುವ ಕಾರ್ಯ ಆಗುತ್ತಿದೆ. ಎಲ್ಲಿಯೂ ದುರ್ಬಳಕೆ ಆಗದ ರೀತಿ ನೇಮಕ ಆಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲ. ಗುಣಮಟ್ಟ, ಅರ್ಹ ಕುಲಪತಿ ನೇಮಿಸಿ ಶಿಕ್ಷಣ ಕ್ಷೇತ್ರ ಸುಧಾರಣೆ ಮಾಡುತ್ತೇವೆ' ಎಂದು ಭರವಸೆ ನೀಡಿದರು. ಚರ್ಚೆಯ ಬಳಿಕ ಮಸೂದೆಗೆ ಅಂಗೀಕಾರ ‌ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT