ಮದುವೆ ಮನೆಗಳಲ್ಲಿ ಮಾರ್ಷಲ್ಗಳಿಂದ ಆರೋಗ್ಯ ಪಾಠ

ಬೆಂಗಳೂರು: ನಗರದಲ್ಲಿ ಹಮ್ಮಿಕೊಳ್ಳುವ ಮದುವೆ ಮತ್ತಿತರ ಸಮಾರಂಭಗಳಲ್ಲಿ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಕಾರ್ಯವನ್ನು ಬಿಬಿಎಂಪಿ ನಿಯೋಜಿಸಿರುವ ಮಾರ್ಷಲ್ಗಳು ಬುಧವಾರದಿಂದಲೇ ಆರಂಭಿಸಿದ್ದಾರೆ.
ವಿವಿಧ ವಲಯಗಳಲ್ಲಿ ಮಾರ್ಷಲ್ಗಳ ಒಟ್ಟು 20 ತಂಡಗಳು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದವು.
‘ಒಟ್ಟು 66 ಮಾರ್ಷಲ್ಗಳು ಬುಧವಾರ ವಿವಿಧ ಸಮಾರಂಭಗಳಿಗೆ ಭೇಟಿ ನೀಡಿ ಕೋವಿಡ್ ನಿಯಂತ್ರಣದ ಸಲುವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿ ಹೇಳಿದ್ದಾರೆ. ಅವರು ಭೇಟಿ ನೀಡಿದ ಬಹುತೇಕ ಎಲ್ಲ ಕಡೆ ಕೋವಿಡ್ ಸೋಂಕು ತಡೆಗಟ್ಟಲು ಬಿಬಿಎಂಪಿ ಸೂಚಿಸಿರುವ ನಿಯಮಗಳನ್ನು ಪಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಎಲ್ಲೂ ಯಾರಿಗೂ ದಂಡ ವಿಧಿಸುವ ಪ್ರಮೇಯ ಎದುರಾಗಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗುರುವಾರವೂ ನಗರದಲ್ಲಿ ನಡೆಯುವ ಎಲ್ಲ ಸಮಾರಂಭಗಳಿಗೆ ಮಾರ್ಷಲ್ಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ’ ಎಂದರು.
‘ಸಮಾರಂಭಗಳಿಗೆ ನೂರಾರು ಮಂದಿ ಭೇಟಿ ನೀಡುತ್ತಾರೆ. ಅವರಲ್ಲಿ ಒಬ್ಬರು ಕೋವಿಡ್ ಸೋಂಕು ಹೊಂದಿದ್ದರೂ ಅಪಾಯಕಾರಿ. ಸರಿಯಾದ ನಿಯಂತ್ರಣ ಕ್ರಮ ಅನುಸರಿಸದೇ ಹೋದರೆ ಒಬ್ಬರಿಂದ ನೂರಾರು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಎರಡು ಮೀಟರ್ ಅಂತರ ಕಾಪಾಡಬೇಕು. ಗುಂಪುಗೂಡುವುದನ್ನು ತಪ್ಪಿಸಬೇಕು’ ಎಂದು ಆಯುಕ್ತರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.