ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸತ್ತವರ ನೆರಳಿನ ಹುಡುಕಾಟ

Last Updated 20 ನವೆಂಬರ್ 2021, 22:06 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಆಕ್ರಮಣ ತಡೆಗಾಗಿನ ಲಾಕ್‌ಡೌನ್ ತಂದಿತ್ತ ಆರ್ಥಿಕ ಆಘಾತ, ಹುತ್ತಗಟ್ಟುತ್ತಲೇ ಹೋದ ಅಭದ್ರತೆಯ ಕರಿನೆರಳು ಕುಟುಂಬ ಆತ್ಮಹತ್ಯೆಯ ‘ವಿನಾಶಕಾರಿ’ ನಡೆಗೆ ದಾರಿ ಮಾಡಿಕೊಟ್ಟವು. ಸಾಮಾಜಿಕ ಕ್ಷೋಭೆಯ ಪರಿಣಾಮದಿಂದಾದ ಮನೋವ್ಯಾಕುಲತೆಯೂ ಹೆಚ್ಚಾಗಿ ಮನೆಮಂದಿಯೆಲ್ಲ ಕೂಡಿ ಆತ್ಮಹತ್ಯೆ ಮಾಡಿಕೊಳ್ಳುವ ದುರಂತ ಪ್ರಕರಣಗಳು ಸರಣಿಯೋಪಾದಿಯಲ್ಲಿ ನಡೆಯುತ್ತಲೇ ಹೋದವು. ಸಾವೇ ಪರಿಹಾರ ಎಂದು ನಿಶ್ಚಯಕ್ಕೆ ಬಂದಂತಿರುವ ಜನರಲ್ಲಿ ವಿಶ್ವಾಸ ಮೂಡಿಸಿ, ಜೀವ ಉಳಿಸುವ ಮಂತ್ರದಂಡ ಯಾವುದು ಎಂಬುದು ಸರ್ಕಾರ, ಸಮಾಜ, ವೈದ್ಯಲೋಕದ ಮುಂದಿರುವ ಸವಾಲು.

2020ರ ಜೂನ್‌ನಲ್ಲಿ ಚಾಮರಾಜ ನಗರ ತಾಲ್ಲೂಕಿನ ಮೂಕನಹಳ್ಳಿಯ ರೈತ ಮಹಾದೇವಸ್ವಾಮಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಆಗಾಗ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ವರ್ಷ ಕಳೆಯುವುದರೊಳಗೆ ಇಂತಹ ಮೂರು ಪ್ರಕರಣಗಳು ನಡೆದಿವೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ₹ 1.5 ಲಕ್ಷ ಸಾಲದ ಹೊರೆ ತಾಳಲಾರದೆ ಕುಟುಂಬವೊಂದು ನೇಣಿಗೆ ಕೊರಳೊಡ್ಡಿತು. ಬಿಎಂಟಿಸಿಯಲ್ಲಿ ಚಾಲಕನಾಗಿದ್ದ ಪತಿಯನ್ನು ಕೋವಿಡ್‌ ನಿಂದ ಕಳೆದುಕೊಂಡ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಜೀವನಕ್ಕೆ ವಿದಾಯ ಹೇಳಿದ್ದರು. ಕೌಟುಂಬಿಕ ಕಲಹದಿಂದ ನಲುಗಿಹೋಗಿದ್ದ ಕುಟುಂಬವೊಂದರ ತಾಯಿ ಮತ್ತು ಮೂವರು ಮಕ್ಕಳು ಹಾಲುಗಲ್ಲದ ಹಸುಳೆಯೊಂದನ್ನು ಉಸಿರುಗಟ್ಟಿಸಿ, ನಂತರ ತಾವೆಲ್ಲರೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಗೆ ಬೆಂಗಳೂರು ಎರಡು ತಿಂಗಳ ಹಿಂದಷ್ಟೇ ಸಾಕ್ಷಿಯಾಗಿತ್ತು.

ಮಗು ಅಪಹರಣದ ಆರೋಪವುಳ್ಳ ದೂರಿಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಹಿಂಸಿಸಿ, ಅವಮಾನಿಸಲಾಗಿದೆ ಎಂಬ ಕಾರಣಕ್ಕೆ ಕೋಲಾರ ನಗರದ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಈ ಪಟ್ಟಿಗೆ ಸೇರಿರುವ ಇತ್ತೀಚಿನ ಘಟನೆ.

ಇವು ಕೆಲವು ಉದಾಹರಣೆಗಳು. ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳಂತೂ ಸರಣಿ ರೂಪದಲ್ಲಿ ನಡೆಯುತ್ತಲೇ ಇವೆ. ಕೋವಿಡ್‌ನಿಂದ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಮಗುವನ್ನು ನದಿಗೆ ಎಸೆದು, ತಾನೂ ನೀರಿಗೆ ಧುಮುಕಿದ್ದರು. ಆರ್ಥಿಕ ಸಂಕಷ್ಟ ಎದುರಿಸಲಾಗದೆ ಆ ಮಹಿಳೆ ಆತ್ಮಹತ್ಯೆಯ ಹಾದಿ ತುಳಿದಿದ್ದರು ಎಂಬುದು ನಂತರ ಗೊತ್ತಾಯಿತು.

ಅಧ್ಯಯನ ವರದಿಗಳ ಪ್ರಕಾರ, 2019ರವರೆಗೂ ಕುಟುಂಬದ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನೆರೆಯ ರಾಜ್ಯಗಳಲ್ಲಿ ಹೆಚ್ಚಾಗಿದ್ದವು. 2019ರಲ್ಲಿ ತಮಿಳುನಾಡಿನಲ್ಲಿ 16, ಆಂಧ್ರಪ್ರದೇಶದಲ್ಲಿ 14 ಮತ್ತು ಕೇರಳದ 11 ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಯ ದಾರಿ ಹಿಡಿದಿದ್ದವು. ಆದರೆ, ಎರಡು ವರ್ಷಗಳಿಂದ ಈಚೆಗೆ ರಾಜ್ಯದಲ್ಲಿ ಸರಣಿಯೋಪಾದಿಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ.

ಆರ್ಥಿಕ ಸಂಕಷ್ಟ, ಬಡತನ, ನಿರುದ್ಯೋಗ, ಕೌಟುಂಬಿಕ ಕಲಹದಂತಹ ಕಾರಣಗಳಿಂದ ಖಿನ್ನತೆಗೆ ಜಾರುವ ವ್ಯಕ್ತಿಗಳು ಆತ್ಮಹತ್ಯೆಯ ಮೂಲಕ ಬದುಕನ್ನೇ ಕೊನೆಗೊಳಿಸಿಕೊಳ್ಳುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಆದರೆ, ಇಡೀ ಕುಟುಂಬವೇ ಈ ರೀತಿಯ ಅಂತ್ಯದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಘಟನೆಗಳು ದಿಢೀರನೆ ಹೆಚ್ಚುತ್ತಿರುವುದು ಏಕೆ ಎಂಬ ಪ್ರಶ್ನೆ ಈಗ ರಾಜ್ಯವನ್ನೇ ಕಾಡತೊಡಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಪ್ರಕಾರ, 2016ರಿಂದ 2020ರ ಅವಧಿಯಲ್ಲಿ ದೇಶದಲ್ಲಿ 6.87 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ 2020ರಲ್ಲೇ 12,259 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಸರಾಸರಿಯಲ್ಲಿ ದೇಶದಲ್ಲೇ ಆರನೇ ಸ್ಥಾನದಲ್ಲಿತ್ತು. ಕೋವಿಡ್‌ ತಂದೊಡ್ಡಿರುವ ಬಿಕ್ಕಟ್ಟುಗಳ ಕಾರಣದಿಂದ ಈ ವರ್ಷ ಆತ್ಮಹತ್ಯೆ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳವಾಗಿದೆ.

2019ರ ಜನವರಿಯಿಂದ 2021ರ ಅಕ್ಟೋಬರ್‌ ಅಂತ್ಯದವರೆಗೆ ರಾಜ್ಯದಲ್ಲಿ 34,375 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2019ರಲ್ಲಿ ಇಬ್ಬರು, 2020ರಲ್ಲಿ ಒಬ್ಬ ಮತ್ತು 2021ರಲ್ಲಿ ಆರು ಮಂದಿ ತೃತೀಯ ಲಿಂಗಿಗಳು ಆತ್ಮಹತ್ಯೆಯ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿಯಲ್ಲಿದೆ.

ಉತ್ತರಕ್ಕಾಗಿ ಹುಡುಕಾಟ: ದೇಶದಲ್ಲಿ 2020ರಲ್ಲಿ ನಡೆದಿದ್ದ ಆತ್ಮಹತ್ಯೆಗಳಲ್ಲಿ ಶೇ 33.6ರಷ್ಟು ಕೌಟುಂಬಿಕ ಸಮಸ್ಯೆಗಳ ಕಾರಣಕ್ಕಾಗಿಯೇ ಘಟಿಸಿದ್ದವು. ಶೇ 18ರಷ್ಟು ಆತ್ಮಹತ್ಯೆ ಪ್ರಕರಣಗಳ ಹಿಂದೆ ಅನಾರೋಗ್ಯದ ಕಾರಣವಿತ್ತು. ಶೇ 3.4ರಷ್ಟು ಜನರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗೆ ಶರಣಾದರೆ, ಶೇ 2.3ರಷ್ಟು ಮಂದಿ ನಿರುದ್ಯೋಗದ ಕಾರಣದಿಂದ ಬದುಕಿಗೆ ವಿದಾಯ ಹೇಳಿದ್ದರು ಎಂಬುದನ್ನು ಎನ್‌ಸಿಆರ್‌ಬಿ ವಿಶ್ಲೇಷಣಾ ವರದಿಗಳು ಹೇಳುತ್ತವೆ.

ವ್ಯಕ್ತಿಗತ ಆತ್ಮಹತ್ಯೆ ಪ್ರಕರಣಗಳು ಮತ್ತು ಕುಟುಂಬವೇ ಸಾಮೂಹಿಕವಾಗಿ ಆತ್ಮಹತ್ಯೆಯ ಹಾದಿ ಹಿಡಿಯುವುದನ್ನು ಒಂದೇ ಮಾನದಂಡಗಳಲ್ಲಿ ವಿಶ್ಲೇಷಿಸಲಾಗದು. ರಾಜ್ಯದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ ಹೆಚ್ಚಿನ ಸಂಖ್ಯೆಯ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳ ಹಿಂದೆ ಆರ್ಥಿಕ ಸಂಕಷ್ಟವೇ ಪ್ರಧಾನ ಕಾರಣವಾಗಿ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅದರಾಚೆಗೂ ಇದ್ದಿರಬಹುದಾದ ಸಾಮಾಜಿಕ, ಕೌಟುಂಬಿಕ ಮತ್ತು ಇತರ ಆಯಾಮಗಳ ಕುರಿತು ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಬಹು ಆಯಾಮದ ಸಮಸ್ಯೆ

ಸಾಮೂಹಿಕ ಆತ್ಮಹತ್ಯೆ ಹೆಚ್ಚಳಕ್ಕೆ ಬಹು ಆಯಾಮಗಳಿವೆ. ಹೆಚ್ಚು ಪ್ರಕರಣಗಳಲ್ಲಿಆರ್ಥಿಕ ಕಾರಣ ಇರಬಹುದು. ಅದಕ್ಕಿಂತಲೂ ಮುಖ್ಯವಾಗಿ ಬದಲಾದ ಸಾಮಾಜಿಕ ವ್ಯವಸ್ಥೆಯೇ ಕಾರಣ. ದಿಢೀರ್‌ ಶ್ರೀಮಂತರಾಗುವ, ಯಾವುದೋ ಅನುಕೂಲ ಪಡೆಯುವ ಆಸೆಯಿಂದ ಮೋಸಕ್ಕೊಳಗಾಗುವುದು ಹೆಚ್ಚುತ್ತಿದೆ. ಆಗ ಹತಾಶೆಯಿಂದ ಆತ್ಮಹತ್ಯೆಯ ದಾರಿ ಹಿಡಿಯುವವರು ಇದ್ದಾರೆ ಎನ್ನುತ್ತಾರೆ ಆರ್ಥಿಕ ತಜ್ಞ ಪ್ರೊ.ಟಿ.ಆರ್‌. ಚಂದ್ರಶೇಖರ

ಯಾರಿಗೂ ವ್ಯವಧಾನ ಇಲ್ಲದಂತಹ ವಾತಾವರಣ ಈಗ ಇದೆ. ಈ ಸಮಸ್ಯೆಗೆ ಪರಿಹಾರ ದೊರಕಬೇಕಾದರೆ ಕೌಟುಂಬಿಕ ಆಪ್ತ ಸಮಾಲೋಚನೆಯ ಸೌಲಭ್ಯವನ್ನು ಹೆಚ್ಚು ವ್ಯವಸ್ಥಿತಗೊಳಿಸಬೇಕು ಮತ್ತು ವಿಸ್ತರಿಸುವ ಕೆಲಸ ಆಗಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಪ್ರತ್ಯೇಕ ವಿವರ ಅಲಭ್ಯ

ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್‌ಸಿಆರ್‌ಬಿ), ಎನ್‌ಸಿಆರ್‌ಬಿ ಸೇರಿದಂತೆ ಎಲ್ಲಿಯೂ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳ ಮಾಹಿತಿಯನ್ನು ಪ್ರತ್ಯೇಕವಾಗಿ ದಾಖಲಿಸುವ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಈ ಪ್ರಕರಣಗಳ ನಿರ್ದಿಷ್ಟ ಅಂಕಿಅಂಶವೇ ಲಭ್ಯವಿಲ್ಲ.

ಎಲ್ಲ ಆತ್ಮಹತ್ಯೆ ಪ್ರಕರಣಗಳನ್ನೂ ಬಿಡಿ ಬಿಡಿಯಾಗಿಯೇ ದಾಖಲಿಸಲಾಗುತ್ತದೆ. ಅದೇ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ ನಡೆಸಲಾಗುತ್ತಿದೆ. ಹೀಗಾಗಿ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳ ಕುರಿತು ಈವರೆಗೂ ಪ್ರತ್ಯೇಕ
ವಾದ ವಿಶ್ಲೇಷಣೆಗಳು ನಡೆದಿಲ್ಲ ಎನ್ನುತ್ತವೆ ಗೃಹ ಇಲಾಖೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT