ಗುರುವಾರ , ಆಗಸ್ಟ್ 11, 2022
28 °C

ಟೀಕೆಯೂ ಎಲ್ಲೆ ಮೀರದಿರಲಿ: ಸಿಎಂ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಟ್ಟ ಪದಗಳ ಬಳಕೆ, ಕೂಗಾಡುವುದರಿಂದಷ್ಟೇ ಟೀಕಿಸಲು ಸಾಧ್ಯ ಎಂಬ ಮನೋಭಾವದಿಂದ ಪತ್ರಕರ್ತರು ಹೊರ ಬರಬೇಕು. ಟೀಕಿಸುವಾಗ ಬಳಸುವ ಭಾಷೆಯು ಎಲ್ಲೆ ಮೀರದಂತೆ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು ಪ್ರೆಸ್‌ ಕ್ಲಬ್‌ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳು ಜಂಟಿಯಾಗಿ ಬೆಂಗಳೂರು ಪ್ರೆಸ್‌ ಕ್ಲಬ್‌ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ಸೃಜನಶೀಲ ಭಾಷೆ ಬಳಸಿಯೂ ಮೊನಚಾಗಿ ಟೀಕಿಸಬಹುದು’ ಎಂದರು.

‘ನಾವು ಯಾವ ರೀತಿ ಸುದ್ದಿಗಳನ್ನು ನೀಡುತ್ತೇವೆ ಎನ್ನುವುದರ ಆಧಾರದಲ್ಲೇ ಮಾಧ್ಯಮಗಳೂ ಕೆಲಸ ಮಾಡುತ್ತವೆ. ರಾಜಕಾರಣಿಗಳಿಗೂ ಭಾಷೆಯ ಮೇಲೆ ಹಿಡಿತ ಅಗತ್ಯ. ಭಾಷೆಯನ್ನು ಸುಂದರವಾಗಿ ಹೇಗೆ ಬಳಸಬೇಕು ಎಂಬುದನ್ನು ಹಿರಿಯ ಪತ್ರಕರ್ತರು ಮತ್ತು ಹಿರಿಯ ರಾಜಕಾರಣಿಗಳಿಂದ ಕಲಿಯಬೇಕು’ ಎಂದು ಹೇಳಿದರು.

ಕನ್ನಡ ಪತ್ರಿಕೋದ್ಯಮ ಇನ್ನೂ ಹೆಚ್ಚು ವಿಸ್ತಾರವಾಗಿ ಬೆಳೆಯಲು ಅವಕಾಶಗಳಿವೆ. ಹೊಸ ಪತ್ರಿಕೆಗಳು ಮತ್ತು ಹೊಸ ಸುದ್ದಿ ವಾಹಿನಿಗಳಿಗೆ ಅವಕಾಶವೇ ಇಲ್ಲ ಎಂಬ ಮಾತು ಸರಿಯಲ್ಲ. ಹೊಸದಾಗಿ ಆರಂಭವಾದ ಹಲವು ಮಾಧ್ಯಮ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದಿರುವುದು ಈ ಕ್ಷೇತ್ರದಲ್ಲಿ ದೊಡ್ಡ ಅವಕಾಶಗಳಿರುವುದಕ್ಕೆ ಸಾಕ್ಷಿ ಎಂದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌. ಶ್ರೀಧರ, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್‌. ಹರ್ಷ ಉಪಸ್ಥಿತರಿದ್ದರು. ಪತ್ರಕರ್ತರಾದ ಮಾಯಾ ಶರ್ಮ ಮತ್ತು ಹುಣಸವಾಡಿ ರಾಜನ್‌ ‘ಪತ್ರಿಕೋದ್ಯಮದ ಸವಾಲುಗಳು: ಅಂದು– ಇಂದು– ಮುಂದು’ ಕುರಿತು ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು