ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ನಿರ್ಲಕ್ಷ್ಯ: ಪ್ರಸೂತಿ ತಜ್ಞೆಗೆ ₹11 ಲಕ್ಷ ದಂಡ

Last Updated 8 ಫೆಬ್ರುವರಿ 2023, 13:02 IST
ಅಕ್ಷರ ಗಾತ್ರ

ಧಾರವಾಡ: ವಾಸ್ತವಾಂಶವನ್ನು ಮರೆಮಾಚಿ ಅಂಗವಿಕಲ ಮಗುವಿನ ಜನನಕ್ಕೆ ಕಾರಣವಾದ ಇಲ್ಲಿನ ಮಾಳಮಡ್ಡಿಯ ಪ್ರಶಾಂತ ನರ್ಸಿಂಗ್ ಹೋಮ್‌ನ ಡಾ. ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಮತ್ತು ಪರಿಹಾರವಾಗಿ ₹11.10ಲಕ್ಷ ವಿಧಿಸಿದೆ.

ಇಲ್ಲಿನ ಶ್ರೀನಗರ ಬಡಾವಣೆಯ ಭಾವಿಕಟ್ಟಿ ಪ್ಲಾಟ್ ನಿವಾಸಿ ಪರಶುರಾಮ ಘಾಟಗೆ ಎಂಬುವವರು ತಮ್ಮ ಪತ್ನಿ ಪ್ರೀತಿ ಅವರನ್ನು ಪ್ರಶಾಂತ ನರ್ಸಿಂಗ್ ಹೋಮ್‌ನಲ್ಲಿ 2018ರ ಜುಲೈ 12ರಿಂದ 2019ರ ಜನೆವರಿವರೆಗೆ ತಪಾಸಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಐದು ಬಾರಿ ಸ್ಕ್ಯಾನ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯೆ ಡಾ. ಸೌಭಾಗ್ಯ ಅವರು, ‘ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಅಂತಾ ತಿಳಿಸುತ್ತಿದ್ದರು. ದೂರುದಾರರ ಪತ್ನಿ ತನ್ನ 9ನೇ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹೆರಿಗೆ ನಂತರ ಅಂಗವಿಕಲ ಹೆಣ್ಣು ಮಗು ಜನಿಸಿತು’ ಎಂದು ದೂರಿನಲ್ಲಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ನ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18ರಿಂದ 20ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿವೆಯೋ ಇಲ್ಲವೇ ಎಂಬುದು ತಪಾಸಣೆ ನಡೆಸಿದ ವೈದ್ಯರಿಗೆ ತಿಳಿಯಲಿದೆ. ಆದರೆ ಐದು ಬಾರಿ ಸ್ಕ್ಯಾನಿಂಗ್ ನಡೆಸಿದ ನಂತರ, ವಾಸ್ತವಾಂಶ ಗೊತ್ತಿದ್ದರೂ, ಪ್ರಸೂತಿ ತಜ್ಞೆ ಅದನ್ನು ಮುಚ್ಚಿಟ್ಟು ಸೇವಾ ನ್ಯೂನತೆ ಎಸಗಿದ್ದಾರೆ. ಈ ಕುರಿತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರ ಆಯೋಗವನ್ನು ಕೋರಿದ್ದರು.

ಅರ್ಜಿಯ ವಿಚಾರಣೆಯನ್ನು ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ನಡೆಸಿದರು.

‘ಎಮ್.ಟಿ.ಪಿ.ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವಿಕಲತೆಯ ಬಗ್ಗೆ ವೈದ್ಯರಿಗೆ ತಿಳಿದಿದ್ದು ಆ ಸಂಗತಿಯನ್ನು ಅವರು ದೂರುದಾರರ ಗಮನಕ್ಕೆ ತಂದಿದ್ದರೆ ಅವರು ಕಾನೂನಿನ ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಆದರೆ ಶಿಶುವಿನ ಅಂಗವಿಕಲತೆಯ ಮಹತ್ವದ ಸಂಗತಿಯನ್ನು ತಜ್ಞ ವೈದ್ಯಯಾದ ಎದುರುದಾರರು ದೂರುದಾರರಿಗೆ ತಿಳಿಸದೆ ಅವರು ತಮ್ಮ ವೈದ್ಯಕೀಯ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷತೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈವರೆಗಿನ ಚಿಕಿತ್ಸೆ ಹಾಗೂ ಭವಿಷ್ಯದ ಜೀವನ ನಿರ್ವಹಣೆಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕಾದ್ದು ಅಗತ್ಯ. ಈವರೆಗಿನ ವೈದ್ಯಕೀಯ ಖರ್ಚಿಗಾಗಿ ₹50ಸಾವಿರ, ಓಡಾಟದ ಖರ್ಚಿಗೆ ₹50ಸಾವಿರ, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಹಾಗೂ ಹಿಂಸೆಗೆ ₹2ಲಕ್ಷ ಹಾಗೂ ಮಗುವಿನ ಭವಿಷ್ಯದ ವೈದ್ಯಕೀಯ ಖರ್ಚಿಗೆ ₹3ಲಕ್ಷ ಹಾಗೂ ಜೀವನ ನಿರ್ವಹಣೆಗೆ ₹5ಲಕ್ಷ, ಪ್ರಕರಣದ ಖರ್ಚಿಗಾಗಿ ₹10ಸಾವಿರ ಸೇರಿ ಒಟ್ಟು ₹11.10ಲಕ್ಷವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡಬೇಕು. ತಪ್ಪಿದಲ್ಲಿ ಆ ಮೊತ್ತದ ಮೇಲೆ ಶೇ 8ರಂತೆ ಬಡ್ಡಿ ಸೇರಿಸಿ ನೀಡಬೇಕು. ಈ ಒಟ್ಟು ಮೊತ್ತದಲ್ಲಿ ₹8ಲಕ್ಷವನ್ನು ಮಗುವಿನ ಹೆಸರಿನಲ್ಲಿ ಆಕೆ ವಯಸ್ಕಳಾಗುವವರೆಗೂ ದೂರುದಾರರು ಇಚ್ಛಿಸಿದ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಾಯಂ ಠೇವಣಿ ಮತ್ತು ಪರಿಹಾರದ ಸಂಪೂರ್ಣ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಬೇಕು’ ಎಂದು ಆಯೋಗ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT