ಗುರುವಾರ , ಜೂನ್ 30, 2022
22 °C

ನಗರದ ಜನರಿಗೆ ನೀರಿಗಾಗಿ ನಡಿಗೆ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದ ಜನರಿಗೆ ಕುಡಿಯುವ ನೀರು ಪೂರೈಸಲು ಮತ್ತು ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮೇಕೆದಾಟು ಪಾದಯಾತ್ರೆಯ ಸಮಾರೋಪ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾರ್ಚ್ 3ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರಾದ ಬಿ.ಕೆ. ಹರಿಪ್ರಸಾದ್, ರಾಮಲಿಂಗಾ ರೆಡ್ಡಿ, ಡಿ.ಕೆ. ಸುರೇಶ್ ಜೊತೆ ಸಮಾರೋಪ ಸಮಾವೇಶ ನಡೆಯಲಿರುವ ಸ್ಥಳ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

‘ಇದು ಪಕ್ಷಾತೀತ ಹೋರಾಟ. ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ. ಎಲ್ಲ ಅಪಾರ್ಟ್‌ಮೆಂಟ್‌ ಸಂಘಗಳು, ಕಾರ್ಮಿಕ, ಕೈಗಾರಿಕಾ ಸಂಘಟನೆ, ಸರ್ಕಾರೇತರ ಸಂಸ್ಥೆಗಳು, ಚಿತ್ರರಂಗದ ಎಲ್ಲ ವಿಭಾಗದವರು, ಧರ್ಮಗುರುಗಳು, ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ’ ಎಂದರು.

‘ಬೆಂಗಳೂರು ನಗರದಲ್ಲಿ ಐದು ದಿನ ಪಾದಯಾತ್ರೆ ಮಾಡಬೇಕಾಗಿತ್ತು. ಬಜೆಟ್ ಅಧಿವೇಶನ ಇರುವ ಕಾರಣ ಕೇವಲ ಮೂರು ದಿನ ಮಾಡುತ್ತೇವೆ. ಪಾದಯಾತ್ರೆಗೆ ಬರುವವರು ಮೆಟ್ರೊ ರೈಲು ಬಳಸಲು ಅನುಕೂಲವಾಗುವಂತೆ ಸಮಾರೋಪದ ಸ್ಥಳ ಆಯ್ಕೆ ಮಾಡಿದ್ದೇವೆ’ ಎಂದು ವಿವರಿಸಿದರು.

ಅಪಾರ್ಟ್‌ಮೆಂಟ್‌ಗಳಿಗೆ ನೀರಿಲ್ಲ: ‘ದಕ್ಷಿಣ ಏಷ್ಯಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಈ ನಗರಕ್ಕೆ 2050ರ ವೇಳೆಗೆ ಕುಡಿಯುವ ನೀರು ಅಭಾವ ತಲೆದೋರಲಿದೆ. ಕಾವೇರಿ ಏಳನೇ ಹಂತ ಬಂದರೂ ನಗರದ ಏಳು ಸಾವಿರ ಅಪಾರ್ಟ್‌ಮೆಂಟ್‌ಗಳಿಗೆ ನೀರು ಸಿಗುತ್ತಿಲ್ಲ. ಕಾಂಗ್ರೆಸ್ ಸದಾ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಜನರ ಪರವಾಗಿ ಹೋರಾಡುತ್ತಿದೆ. ಈ ಪಾದಯಾತ್ರೆ ಕೂಡಾ ಆ ಹೋರಾಟ ಭಾಗ. ಹೀಗಾಗಿ, ಜನಸಾಮಾನ್ಯರು ಇದಕ್ಕೆ ಬೆಂಬಲ ನೀಡಬೇಕು‘ ಎಂದು ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದರು.

ಮೆಟ್ರೊದಲ್ಲಿ ಸಂಚಾರ: ‘ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೊಂದಿಕೊಂಡಿರುವ ಮೆಟ್ರೊ ರೈಲು ನಿಲ್ದಾಣದಿಂದ ಮೆಜೆಸ್ಟಿಕ್ ನಿಲ್ದಾಣದವರೆಗೆ ಕಾಂಗ್ರೆಸ್ ನಾಯಕರುಗಳು ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಸಮಾವೇಶದ ಸಮಯದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಸಮಾವೇಶದಲ್ಲಿ ಭಾಗವಹಿಸುವವರು ಮೆಟ್ರೊದಲ್ಲಿ ಪ್ರಯಾಣಿಸಬೇಕು ಎಂದೂ ಕಾಂಗ್ರೆಸ್‌ ನಾಯಕರು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು