ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಗೊಂದಲ: ಚರ್ಚೆಗೆ ಗ್ರಾಸವಾದ ಸುರೇಶ್ ಕುಮಾರ್ ಅನಿಸಿಕೆ!

‘ಫೇಸ್‌ಬುಕ್‌’ನಲ್ಲಿ ಅಭಿಪ್ರಾಯ ಹಂಚಿಕೊಂಡ ಶಿಕ್ಷಣ ಸಚಿವ
Last Updated 22 ಜೂನ್ 2021, 22:03 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲಾ ಶುಲ್ಕ ಗೊಂದಲ ಬಗೆಹರಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ. ಶಿಕ್ಷಣ ತಜ್ಞರು, ಪೋಷಕರ ಪ್ರತಿನಿಧಿಗಳು, ಖಾಸಗಿ ಶಾಲೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯ ಶಿಫಾರಸು ಬಹುಶಃ ಎಲ್ಲ ರಿಗೂ ಸಮಂಜಸ ಆಗಬಹುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಖಾಸಗಿ ಶಾಲೆಗಳು ಮತ್ತು ಪೋಷ ಕರ ನಡುವಿನ ಶುಲ್ಕ ಸಂಘರ್ಷ ಪರಿ ಹರಿಸಿ ಸಾಮರಸ್ಯ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಸುದೀರ್ಘವಾಗಿ ಬರೆದು ಕೊಂಡು ಅವರು ವ್ಯಕ್ತಪಡಿಸಿರುವ ಅಭಿ ಪ್ರಾಯ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಬೆಂಗಳೂರಿನ ಶಾಲೆಯೊಂದು ಪೋಷಕರಿಗೆ ಸಂದೇಶ ಕಳುಹಿಸಿ, ಈ ವರ್ಷದ ಶುಲ್ಕದಲ್ಲಿ ಶೇ 20ರಷ್ಟು ರಿಯಾಯಿತಿ ನೀಡಿರುವುದಾಗಿ ತಿಳಿಸಿತು. ಆದರೆ, ಪೋಷಕರು ಶಾಲೆಗೆ ಮರು ಸಂದೇಶ ಕಳಿಸಿ,‘ನಾವು ಪೂರ್ಣ ಶುಲ್ಕ ಕಟ್ಟುತ್ತೇವೆ. ನಮ್ಮ ಶಾಲೆಯ ಶಿಕ್ಷಕರಿಗೆ ತೊಂದರೆ ಆಗಬಾರದು’ ಎಂದಿದ್ದಾರೆ. ಅದಕ್ಕೆ ಆ ಶಾಲೆಯ ವ್ಯವಸ್ಥಾಪಕ ಮಂಡಳಿ, ಯಾರಿಗೆ ಅಗತ್ಯವಿದೆಯೋ ಆ ಪೋಷಕರು ಶೇ 20ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಕೆಲವು ಶಾಲೆಗಳು ಶುಲ್ಕದಲ್ಲಿ ಶೇ 20 ರಿಂದ 25ರಷ್ಟು ರಿಯಾಯಿತಿಯನ್ನು ಆರ್ಥಿಕವಾಗಿ ಅಶಕ್ತರಾದ ಪೋಷಕರಿಗೆ ನೀಡುವುದಾಗಿ ಹೇಳಿವೆ. ಈ ನಿರ್ಧಾರ ಗಳು ಇಂದಿನ ಪರಿಸ್ಥಿತಿಗೆ ಪರಿಹಾರ ಸೂಚಿಸಬಹುದಾದ ಮಾರ್ಗಗಳು’ ಎಂದೂ ಸುರೇಶ್‌ ಕುಮಾರ್‌ ಬರೆದುಕೊಂಡಿದ್ದಾರೆ.

‘ಪೋಷಕರು ಮತ್ತು ಖಾಸಗಿ ಶಿಕ್ಷಕರ ಹಿತವನ್ನು ಕಾಪಾಡುವ ಸೂತ್ರದ ಅಗತ್ಯ ನಮ್ಮ ಮುಂದಿದೆ. ಈಗ ಆ ಪರಿಹಾರದ ಬಗ್ಗೆ ಸಮಾಜ ಯೋಚಿಸಬೇಕಿದೆ. ಆರ್ಥಿಕವಾಗಿ ಸಬಲರಾಗಿದ್ದ ಪೋಷ ಕರೂ ಶುಲ್ಕ ಪಾವತಿ ಮಾಡಲು ಮುಂದಾಗಲಿಲ್ಲ. ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದು ಪ್ರತಿ ತಿಂಗಳು ತಪ್ಪದೇ ಸಂಬಳ ಪಡೆದ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಕರಿಗೆ ವೇತನ ದೊರೆಯಲು ತಾವು ಶುಲ್ಕ ಕಟ್ಟಬೇಕೆಂಬ ಕರ್ತವ್ಯ ನೆನಪಿಗೆ ಬರಲಿಲ್ಲ. ಇದು ನಿಜಕ್ಕೂ ಒಳ್ಳೆಯ ಸಂಗತಿಯಲ್ಲ’ ಎಂದಿದ್ದಾರೆ.

ಸಚಿವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೆಲವರು, ‘ಸೂಕ್ತ ನಿರ್ಧಾರ ಕೈಗೊಂಡು ಕಠಿಣವಾಗಿ ಆಡಳಿತ ನಡೆಸಿ’ ಎಂದರೆ, ಅನೇಕರು ಖಾರವಾಗಿ, ಇನ್ನೂ ಕೆಲವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ‘ಖಾಸಗಿ ಶಾಲೆಗಳ ಪರ ತಮಟೆ ಬಾರಿಸು ವುದನ್ನು ಬಿಟ್ಟು, ಮೂಗುದಾರ ಹಾಕಿ’ ಎಂದು ಕೆಲವರು ಹೇಳಿದ್ದಾರೆ. ‘ಖಾಸಗಿ ಶಾಲೆಗಳ ಮೇಲೆ ಹಿಡಿತ ಇಲ್ಲದೆ ಇದ್ದ ಮೇಲೆ ಶಿಕ್ಷಣ ಇಲಾಖೆ ಯಾಕೆ ಬೇಕು ಸ್ವಾಮಿ’ ಎಂದು ಒಬ್ಬರು ಪ್ರಶ್ನಿಸಿದರೆ, ‘ನಿಮ್ಮ ವಿವರಣೆಯಿಂದ ಸರ್ಕಾರ ಏನ್‌ ಮಾಡ್ತಿದೆ ಎನ್ನುವುದನ್ನು ಬಿಟ್ಟು ಇನ್ನೆಲ್ಲ ಅರ್ಥ ಆಯಿತು’ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ‘ಸರ್ಕಾರಿ ಶಾಲೆ ಗಳನ್ನು ಮರೆತಿದ್ದೀರಾ? ಈ ಶಾಲೆಗಳ ಗುಣಮಟ್ಟ ಹೆಚ್ಚಿಸಿ. ಖಾಸಗಿ ಶಾಲೆಗಳನ್ನು ಸರ್ಕಾರವೇ ನಡೆಸಲಿ’ ಎಂದೂ ಕೆಲವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT