ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಪುತ್ರನ ಹೆಸರಿನಲ್ಲಿ ಹಣ ವಸೂಲಿ: ಸಚಿವ ಶ್ರೀರಾಮುಲು ಆಪ್ತನ ವಿಚಾರಣೆ

₹ 2 ಕೋಟಿ ವಸೂಲಿ ಆರೋಪದ ಸುತ್ತ: ಸಂಶಯದ ಹುತ್ತ
Last Updated 2 ಜುಲೈ 2021, 21:10 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕ ಎನ್ನಲಾದ ರಾಜು ಅಲಿಯಾಸ್ ಬಳ್ಳಾರಿ ರಾಜಣ್ಣ (35) ಅವರನ್ನು ಹಣ ವಸೂಲಿ ಆರೋಪದಡಿ ವಶಕ್ಕೆ ಪಡೆದಿದ್ದ ನಗರದ ಸಿಸಿಬಿ ಪೊಲೀಸರು, ಧ್ವನಿ ಮಾದರಿ ಸಂಗ್ರಹಿಸಿ ಬಿಡುಗಡೆ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ಹಾಗೂ ಇತರೆ ಮುಖಂಡರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ರಾಜಣ್ಣ ಅವರನ್ನು ಗುರುವಾರ ಸಂಜೆಯಷ್ಟೇ ಶ್ರೀರಾಮುಲು ಅವರ ಮನೆ ಆವರಣದಲ್ಲೇ ವಶಕ್ಕೆ ಪಡೆಯಲಾಗಿತ್ತು.

‘ಶ್ರೀರಾಮುಲು ಆಪ್ತ ಸಹಾಯಕರಾಗಿದ್ದ ರಾಜಣ್ಣ ವಿರುದ್ಧ ವಿಜಯೇಂದ್ರ ದೂರು ನೀಡಿದ್ದರು. ಗುರುವಾರ ಸಂಜೆ ರಾಜಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಅಗತ್ಯ ಪುರಾವೆಗಳು ದೊರೆಯದಿದ್ದರಿಂದ ಅವರನ್ನು ಬಂಧಿಸದೇ ಶುಕ್ರವಾರ ಬಿಟ್ಟು ಕಳುಹಿಸಲಾಗಿದೆ. ವಿಚಾರಣೆ ಅಗತ್ಯವಿದ್ದರೆ ತನಿಖಾಧಿಕಾರಿ ಎದುರು ಮತ್ತೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಹಣ ವಸೂಲಿ ಸಂಬಂಧ ಇಬ್ಬರು ಮಾತನಾಡಿರುವ ಮೊಬೈಲ್ ಸಂಭಾಷಣೆ ಆಡಿಯೊವನ್ನು ದೂರುದಾರರು ಕೊಟ್ಟಿದ್ದಾರೆ. ಅದರಲ್ಲಿರುವ ಧ್ವನಿ ರಾಜಣ್ಣ ಅವರದ್ದೆಂಬ ಬಗ್ಗೆ ಅನುಮಾನವಿದೆ. ಹೀಗಾಗಿ, ರಾಜಣ್ಣ ಅವರ ಧ್ವನಿ ಮಾದರಿ ಸಂಗ್ರಹಿಸಲಾಗಿದೆ. ಅದರ ಸಮೇತವೇ ಆಡಿಯೊವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

₹ 2 ಕೋಟಿ ವಸೂಲಿ ಆರೋಪ: ‘ವಿಜಯೇಂದ್ರ ತನಗೆ ಆಪ್ತರೆಂದು ರಾಜಣ್ಣ ಹೇಳಿಕೊಳ್ಳುತ್ತಿದ್ದ. ವಿಜಯೇಂದ್ರ ಮೂಲಕವೇ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ ಇತ್ತೀಚೆಗಷ್ಟೇ ₹ 2 ಕೋಟಿ ಹಣ ಪಡೆದಿದ್ದ ಎನ್ನಲಾಗಿದೆ. ಸರ್ಕಾರಿ ಕೆಲಸ ಕೊಡಿಸುವ ಹಾಗೂ ವರ್ಗಾವಣೆ ಮಾಡಿಸುವುದಾಗಿಯೂ ಆರೋಪಿ ಹಲವರಿಗೆ ಆಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

‘ಉದ್ಯಮಿಯೊಬ್ಬರ ಜೊತೆ ಆರೋಪಿ ರಾಜಣ್ಣ ನಡೆಸಿದ್ದ ಮೊಬೈಲ್ ಸಂಭಾಷಣೆ ಇತ್ತೀಚೆಗೆ ಎಲ್ಲೆಡೆ ಹರಿದಾಡಿತ್ತು. ಅದರ ಸಮೇತವೇ ಉದ್ಯಮಿ, ವಿಜಯೇಂದ್ರ ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ, ವಿಜಯೇಂದ್ರ ಅವರೇ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿವೆ.

‘ಹೆಸರು ಹೇಳಿ ವಂಚನೆ: ಎಚ್ಚರಿಕೆ ಇರಲಿ’
‘ಸಾರ್ವಜನಿಕ ಕ್ಷೇತ್ರದಲ್ಲಿ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸುವವರ ಬಗ್ಗೆ ಎಚ್ಚರಿಕೆ ಇರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೆಂದ್ರ ಹೇಳಿದ್ದಾರೆ.

‘ಸಾರ್ವಜನಿಕ ಕ್ಷೇತ್ರದಲ್ಲಿ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತೊಂದರೆ ತುಸು ಹೆಚ್ಚು ಬಾಧಿಸುತ್ತಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಸಾರ್ವಜನಿಕರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಮತ್ತು ವ್ಯಕ್ತಿತ್ವ ರಕ್ಷಣೆಗಾಗಿ ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

‘ಸಮಗ್ರ ತನಿಖೆಯಾಗಲಿ’
‘ಕೆಲಸ ಮಾಡಿಸಿಕೊಳ್ಳಲು, ಪ್ರಾಜೆಕ್ಟ್ ಕ್ಲಿಯರ್ ಮಾಡಿಕೊಡಲು ಆತ ಲಂಚ ತೆಗೆದುಕೊಳ್ಳುತ್ತಿದ್ದಾನೆ ಎಂದು ವಿಜಯೇಂದ್ರ ದೂರು ನೀಡಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೇಬೇಕು. ಈ ಬಗ್ಗೆ ಸಮಗ್ರ ತನಿಖೆಯಾಗಲಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ‘ಇದು 20–25 ಪರ್ಸೆಂಟ್ ಸರ್ಕಾರ. ವಿಜಯೇಂದ್ರನೇ ನಿಜವಾದ ಮುಖ್ಯಮಂತ್ರಿ. ಯಡಿಯೂರಪ್ಪ ಲೆಕ್ಕಕ್ಕಿಲ್ಲದ ಮುಖ್ಯಮಂತ್ರಿ. ಮೊಮ್ಮಗ, ಅಳಿಯ ಸೇರಿ ಇಡೀ ಕುಟುಂಬವೇ ಲಂಚದಲ್ಲಿ ಮುಳುಗಿದೆ’ ಎಂದರು.

‘ತಪ್ಪು ಗ್ರಹಿಕೆಯಿಂದ ದೂರು’
‘ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ಅವರು ದೂರು ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ, ನನ್ನನು ಕರೆಸಿ ಮಾತನಾಡಿದ್ದರೆ ವಾಸ್ತವಾಂಶ ಹಾಗೂ ಸತ್ಯಾಸತ್ಯತೆ ಗೊತ್ತಾಗಿರುತ್ತಿತ್ತು’ ಎಂದು ರಾಜಣ್ಣ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಯಾವುದೇ ತಪ್ಪು ಮಾಡಿಲ್ಲ. ಜೀವನಕ್ಕಾಗಿ ಕಷ್ಟಪಟ್ಟು ದುಡಿದು ಬದುಕುವ ವ್ಯಕ್ತಿ ನಾನು. ಅಡ್ಡದಾರಿ ಹಿಡಿಯುವವನಲ್ಲ’ ಎಂದೂ ತಿಳಿಸಿದ್ದಾರೆ.

ಆಪ್ತನ ಬಂಧನಕ್ಕೆ ಬೇಸರ: ಶ್ರೀರಾಮುಲು
‘ರಾಜಣ್ಣ ನನಗೆ ಗೊತ್ತಿರುವ ಹುಡುಗ. ನನಗೆ ಹೇಳದೇ ಆತನನ್ನು ಬಂಧಿಸಿದ್ದಕ್ಕೆ ಬೇಸರವಾಗಿದೆ. ಆದರೆ, ಆ ಬಗ್ಗೆ ಅಸಮಾಧಾನ ಇಲ್ಲ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಯಾರೂ ಕೂಡ ಬೇರೆ ಯಾರದ್ದೇ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ಅದು ತಪ್ಪು. ವಿಜಯೇಂದ್ರ ಮತ್ತು ಮುಖ್ಯಮಂತ್ರಿಯವರ ಜತೆಗೆ ಮಾತನಾಡುತ್ತೇನೆ. ವಿಜಯೇಂದ್ರ ಅವರು ನನ್ನ ಬಳಿ ಹೇಳಿದ್ದರೆ, ಕೂರಿಸಿ ವಿಚಾರಿಸುತ್ತಿದ್ದೆ’ ಎಂದರು.

‘ರಾಜಣ್ಣ ನನ್ನ ಬಳಿ ಅಧಿಕೃತವಾಗಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ನಾನು ತಪ್ಪಿತಸ್ಥರನ್ನು ಕಾಪಾಡುವ ವ್ಯಕ್ತಿಯಲ್ಲ. ಈ ಬೆಳವಣಿಗೆಯಿಂದ ನೋವಾಗಿದೆ’ ಎಂದು ರಾಮುಲು ಹೇಳಿದರು.

ಆಪ್ತ ಸಹಾಯಕನ ಬಂಧನದಿಂದ ಸಿಟ್ಟಾಗಿದ್ದ ಶ್ರೀರಾಮುಲು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿಯಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ಗೊತ್ತಾಗಿದೆ.

‘ಮಾತುಕತೆ ಮೂಲಕ ಬಗೆಹರಿಯಬೇಕಾದ ಸಮಸ್ಯೆಯನ್ನು ಠಾಣೆಯವರೆಗೂ ತೆಗೆದುಕೊಂಡು ಹೋಗಿದ್ದು ಏಕೆ? ಎಂದು ಪ್ರಶ್ನಿಸಿದ್ದಲ್ಲದೇ, ಅಭಿವೃದ್ಧಿ ಪರಿಷತ್ತಿನ ಸಭೆಗೂ ಬರುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಅವರನ್ನು ಸಮಾಧಾನಪಡಿಸಿದ ಯಡಿಯೂರಪ್ಪ, ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT