ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಜೊತೆ ಚರ್ಚಿಸಿ ಶಾಲಾರಂಭ ತೀರ್ಮಾನ: ಸುರೇಶ್ ಕುಮಾರ್

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ
Last Updated 17 ಡಿಸೆಂಬರ್ 2020, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಗುರುವಾರ ನೀಡಿರುವ ವರದಿಯ ಆಧಾರದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಶಾಲಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಮತ್ತು ಪರಿಷ್ಕೃತ ವಿದ್ಯಾಗಮ ಆರಂಭಿಸುವ ಸಂಬಂಧದಲ್ಲಿ ಕ್ರಮಗಳ ಕುರಿತು ಸಲಹಾ ಸಮಿತಿ ಸಲಹೆ ನೀಡಿದೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಕೋವಿಡ್ ಪ್ರಸರಣ, ಪಾಸಿಟಿವ್ ಪ್ರಕರಣಗಳ ದಾಖಲು, ಮರಣ ಪ್ರಮಾಣ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪರಿಸ್ಥಿತಿ ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ಯಾವ ಯಾವ ತರಗತಿಗಳನ್ನು ಯಾವ ದಿನಗಳಲ್ಲಿ ಆರಂಭಿಸಬಹುದು, ಆರಂಭಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಸಿದ್ಧಪಡಿಸಿಕೊಟ್ಟಿದೆ’ ಎಂದು ಸಚಿವರು ವಿವರಿಸಿದರು.

‘ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಖಾತರಿಪಡಿಸುವ ಮೂಲಸೌಲಭ್ಯಗಳನ್ನು ಗಮನಿಸಿದ ನಂತರವೇ ತರಗತಿಗಳನ್ನು ಆರಂಭಿಸುವುದು, ವಿದ್ಯಾರ್ಥಿಗಳು ಶಾಲೆಗೆ ಬರುವ ಮೊದಲು ಪೋಷಕರ ಅನುಮತಿ ಕಡ್ಡಾಯ. ಶೀತ, ನೆಗಡಿ, ಕೆಮ್ಮು ಹಾಗೆಯೇ ಕೋವಿಡ್ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅಂಥವರು ವೈದ್ಯಕೀಯ ವರದಿಯೊಂದಿಗೆ ಹಾಜರಾಗಬೇಕು. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟ ತೊಂದರೆ, ಗಂಟಲು ನೋವು ಮತ್ತಿತರ ಯಾವುದೇ ಲಕ್ಷಣಗಳಿಲ್ಲ ಎಂದು ಪೋಷಕರು ಅನುಮತಿ ಪತ್ರದಲ್ಲಿ ತಿಳಿಸುವುದು ಕಡ್ಡಾಯ. ವಿದ್ಯಾರ್ಥಿಗಳು ಪಾಳಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ವಾರದಲ್ಲಿ ಎರಡು ದಿನಗಳು ಮಾತ್ರವೇ ಬರುವುದರಿಂದ ಸುರಕ್ಷಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಸಚಿವರು ತಿಳಿಸಿದರು.

‘ಶಾಲಾರಂಭಕ್ಕೂ ಮೊದಲು ಶಾಲಾಡಳಿತಗಳು, ಶಾಲಾ ಮೇಲುಸ್ತುವಾರಿ ಸಮಿತಿಗಳು ಪೋಷಕರು, ಮಕ್ಕಳು ಸೇರಿದಂತೆ ಇತರ ಶೈಕ್ಷಣಿಕ ಪಾಲುದಾರರ ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ವೈದ್ಯಕೀಯ ಪರೀಕ್ಷೆಗೆ ಅಗತ್ಯವಿರುವ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಗೆ ಮೊದಲ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ’ ಎಂದು ವಿವರಿಸಿದರು.

ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಸುದರ್ಶನ್, ಸದಸ್ಯರಾದ ಡಾ. ವಿ. ರವಿ, ಡಾ. ಎಂ. ಶರೀಫ್, ಡಾ. ಶಶಿಭೂಷಣ್ ಬಿ.ಎಲ್, ಡಾ. ಲೋಕೇಶ್ ಅಲ್ಹಾರಿ ಸೇರಿದಂತೆ ಕೋವಿಡ್ ಸಲಹಾ ಸಮಿತಿ ಸದಸ್ಯರಾದ ಹಲವಾರು ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್ ಸಭೆಯಲ್ಲಿದ್ದರು.

‘ಬ್ರಾಹ್ಮಣರ ಅವಹೇಳನ ಪಠ್ಯ ಕೈಬಿಡಲಾಗುವುದು’
ಬೆಂಗಳೂರು:
ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಗುರುವಾರ ಸೂಚಿಸಿದ್ದಾರೆ.

ಆರನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿ ಈ ಪಠ್ಯಭಾಗ ಬ್ರಾಹ್ಮಣ ಜನಾಂಗದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂಬ ವರದಿಗಳ ಕಾರಣ, ಸಂಕೀರ್ಣ ಪಠ್ಯಭಾಗವನ್ನು ಕೈಬಿಡುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

‘1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಇಂತಹ ಯಾವುದೇ ಸಂಕೀರ್ಣ ವಿಷಯಗಳ ಕುರಿತು ಶಿಕ್ಷಕರು ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ 15 ದಿನಗಳಲ್ಲಿ ವರದಿ ಪಡೆದು ಸಲ್ಲಿಸುವಂತೆ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ವರದಿ ಪಡೆದ ನಂತರ ಅಂತಹ ಪಠ್ಯ ಭಾಗಗಳ ಉಲ್ಲೇಖವಿದ್ದರೆ, ಅದರ ಪರಾಮರ್ಶೆಗೆ ತಜ್ಞ ಸಮಿತಿ ರಚಿಸಲಾಗುವುದು’ ಎಂದು ಅವರು ವಿವರಿಸಿದ್ದಾರೆ.

‘ಮಂತ್ರಾಲಯ ಶ್ರೀಕ್ಷೇತ್ರದ ಸ್ವಾಮೀಜಿಯವರು ದೂರವಾಣಿ ಕರೆ ಮಾಡಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿಲ್ಲ ಅಥವಾ ಹೊಸ ಪಾಠಭಾಗಗಳನ್ನು ಸೇರಿಸಿಲ್ಲ’ ಎಂದೂ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT