ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಟೀಕೆ: ಪಾಟೀಲ, ನಾರಾಯಣಗೌಡ ಆಕ್ಷೇಪ

Last Updated 3 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೀಳುಮಟ್ಟದ ಹಾಗೂ ಏಕವಚನ ಪದಪ್ರಯೋಗ ಮಾಡುವುದನ್ನು ಬಿಡಬೇಕು ಎಂದು ಸಚಿವರಾದ ಬಿ.ಸಿ. ಪಾಟೀಲ, ಬೈರತಿ ಬಸವರಾಜ, ನಾರಾಯಣಗೌಡ ಆಗ್ರಹಿಸಿದ್ದಾರೆ.

‘ಯಡಿಯೂರಪ್ಪ ಅವರಪ್ಪನ ಮನೆಯಿಂದ ತಂದು ಕೊಡ್ತಾನಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಯಾರೊಬ್ಬರೂ ಅಪ್ಪನ ಮನೆಯಿಂದ ಕೊಡುವುದಿಲ್ಲ; ಎಲ್ಲರೂ ಸರ್ಕಾರದ ದುಡ್ಡನ್ನೇ ಕೊಡುವುದು ಎಂಬುದು ಅವರ ಗಮನದಲ್ಲಿರಲಿ. ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೇ ಹೊರತು ಕೀಳುಮಟ್ಟದಲ್ಲಿ ಅಲ್ಲ.ಕೀಳುಮಟ್ಟದ ಭಾಷೆ ಬಳಸುವುದರಿಂದ ಜನಾನುರಾಗಿ ಆಗುತ್ತೇನೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

‘ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಪಡಿತರ ವ್ಯವಸ್ಥೆ ಮುಂದುವರಿದಿದ್ದು, 2 ಕೆ.ಜಿ ಅಕ್ಕಿ ಮಾತ್ರ ಕಡಿಮೆಯಾಗಿದೆ. ಕೋವಿಡ್ ಮತ್ತು ನೆರೆ ಪರಿಸ್ಥಿತಿಯಲ್ಲಿಯೂ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು, ಮೆಕ್ಕೆಜೋಳಕ್ಕೆ ಪರಿಹಾರ ಕೊಟ್ಟಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ರೀತಿ ಕೀಳು ಮಟ್ಟದ ಪ್ರಚಾರವನ್ನು ನಿಲ್ಲಿಸುವುದು ಒಳ್ಳೆಯದು’ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ‘7 ಕೆ.ಜಿ ಅಕ್ಕಿ ಕೊಟ್ಟರೂ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ ನೀವು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ಕುಟುಕಿದ್ದಾರೆ.

‘ಸಿದ್ದರಾಮಯ್ಯನವರು ಯಡಿಯೂರಪ್ಪ ಅವರ ಜವಾಬ್ದಾರಿಯುತ ಸ್ಥಾನ ಮರೆತು ಏಕವಚನದಲ್ಲೇ ಬಾಯಿಗೆ ಬಂದಂತೆ ಮಾತನಾಡಿದಲ್ಲಿ ನಾವು ಕೂಡ ಏಕವಚನದಲ್ಲೇ ಉತ್ತರಿಸಬೇಕಾಗುತ್ತದೆ. ಆದ್ದರಿಂದ ತಮ್ಮ ಮಾತಿನ ಮೇಲೆ ಹಿಡಿತವಿರಲಿ’ ಎಂದು ಎಚ್ಚರಿಸಿದ್ದಾರೆ.

ಸಿಎಂ ಬಡವರ ಪರ: ‘ ಯಡಿಯೂರಪ್ಪ ಕುರಿತು ಸಿದ್ದರಾಮಯ್ಯಲಘುವಾಗಿ ಮಾತನಾಡಬಾರದು. ಮುಖ್ಯಮಂತ್ರಿಯವರು ಬಡವರ ಪರವಾಗಿ ಇದ್ದಾರೆ. ಈಗಲೂ ರಾಜ್ಯದಲ್ಲಿ 1.16 ಕೋಟಿ ಕುಟುಂಬಗಳಿಗೆ ಉಚಿತವಾಗಿ ಪಡಿತರ ಧಾನ್ಯ ವಿತರಿಸಲಾಗುತ್ತಿದೆ’ ಎಂದು ಬೈರತಿ ಬಸವರಾಜ ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಚ್ಚು ಸಮಸ್ಯೆಗಳಿರಲಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರವಾಹ ಸ್ಥಿತಿ ತಲೆದೋರಿತು. ನಂತರ ಕೋವಿಡ್‌ನಿಂದ ಸಂಕಷ್ಟ ಎದುರಾಯಿತು. ಆರ್ಥಿಕ ಸ್ಥಿತಿ ಚೇತರಿಕೆ ಆದ ಬಳಿಕ ಪಡಿತರ ಧಾನ್ಯ ವಿತರಣೆಯಲ್ಲಿ ಹೆಚ್ಚಳ ಮಾಡುವಂತೆ ಮನವೊಲಿಸಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯಗೆ ಹತಾಶೆ

‘ಈಗ ನಡೆಯುತ್ತಿರುವ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಭೀತಿ ಕಾಣಿಸಿಕೊಂಡಿರುವುದರಿಂದ ಹತಾಶರಾಗಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ವಿರುದ್ಧ ಕೀಳು ಮಟ್ಟದ ಟೀಕೆ ಮಾಡಲು ಆರಂಭಿಸಿದ್ದಾರೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ಹೇಳಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತ ಕೊಟ್ಟಿದ್ದರೆ ಮತ್ತೆ ಅಧಿಕಾರಕ್ಕೆ ಬರಬೇಕಿತ್ತು. ಯಾಕೆ ಜನ ಅವರನ್ನು ತಿರಸ್ಕರಿಸಿದರು ಎಂದು ಪ್ರಶ್ನಿಸಿರುವ ಸೋಮಶೇಖರ್‌, ನಮ್ಮ ಸರ್ಕಾರ ಹಾಗೂ ಯಡಿಯೂರಪ್ಪ ಸಾಧನೆ ಸಹಿಸಲಾಗದೇ, ಟೀಕೆಗೆ ಏನೂ ಕಾರಣ ಸಿಗದೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಳವಣಿಗೆ ವೇಗವನ್ನು ಸಿದ್ದರಾಮಯ್ಯ ಅವರಿಗೆ ಸಹಿಸಲಾಗುತ್ತಿಲ್ಲ. ವರುಣಾದಲ್ಲಿಯೇ ಅವರ ಮುಂದಿನ ಸ್ಪರ್ಧೆ ಎಂಬ ಹೇಳಿಕೆ ಇತ್ತೀಚೆಗೆ ಹೊರಬಿದ್ದಿದ್ದರಿಂದ ಗಾಬರಿಯಾಗಿರುವ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮ ಅಸ್ತಿತ್ವಕ್ಕಾಗಿ ಪಕ್ಷದಲ್ಲಿ ಹೋರಾಡುತ್ತಿದ್ದು, ಒಬ್ಬರ ಕಾಲನ್ನು ಒಬ್ಬರು ಎಳೆದುಕೊಳ್ಳುತ್ತಾ, ಕಿತ್ತಾಡುತ್ತಿದ್ದಾರೆ. ಸುಮ್ಮನೆ ಆ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಗೌರವಕ್ಕೆ ಚ್ಯುತಿ ತಂದುಕೊಳ್ಳಬೇಡಿ

ಗೌರವಯುತ ಸ್ಥಾನದಲ್ಲಿರುವ ಯಡಿಯೂರಪ್ಪನವರ ಬಗ್ಗೆ ಸಿದ್ಧರಾಮಯ್ಯನವರು ತಮ್ಮ ನಾಲಿಗೆ ಹರಿಬಿಡಲಾರಂಭಿಸಿರುವುದು ಅವರ ಗೌರವಕ್ಕೇ ಚ್ಯುತಿ ತಂದುಕೊಂಡಂತೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.

ಹೀಗೆ ಮಾತನಾಡುವುದು ನನಗೆ ರೂಢಿ ಎಂದು ಮಾತು ಮಾತಿಗೆ ಹೇಳುವ ಸಿದ್ದರಾಮಯ್ಯ ಎಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಏಕವಚನದಲ್ಲಿ ಸಂಭೋದಿಸುವುದು ತಪ್ಪು. ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತದೆ ಎಂಬ ಸಾಮಾನ್ಯ ಜ್ಞಾನವನ್ನು ಅವರು ಮೊದಲು ಅರಿತುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ಈ ಹಿಂದೆ ಹಲವು ಬಾರಿ ಕೆ.ಎಸ್.ಈಶ್ವರಪ್ಪ ತಲೆಯಲ್ಲಿ ಮೆದುಳಿಲ್ಲ. ಅವರೊಬ್ಬ ದಡ್ಡ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಆದರೆ, ಈಗ ಈಶ್ವರಪ್ಪ ಮೇಲೆ ಎಲ್ಲಿಲ್ಲದ ಪ್ರೀತಿ ತೋರಿಸುತ್ತಿರುವ ಸಿದ್ದರಾಮಯ್ಯ ನಮ್ಮ ಪಕ್ಷದ ಆಂತರಿಕ ವಿಚಾರದಲ್ಲಿ ರಾಜಕಾರಣ ಮಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ರಾಜಕಾರಣವನ್ನು ರಾಜ್ಯದ ಜನರು ಗಂಭೀರವಾಗಿ ನೋಡುತ್ತಿದ್ದು, ಜನರೇ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ವಿಶ್ವನಾಥ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT