ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಪೋಷಕರೊಂದಿಗೆ ಸೇರಿ ಹುಡುಕಾಟದ ನಾಟಕವಾಡಿದ್ದ ಆರೋಪಿ

ಆರೋಪಿ ಬಂಧನ, ಟ್ಯೂಷನ್‌ ಕೇಂದ್ರದ ಉಸ್ತುವಾರಿಯಿಂದಲೇ ಕೃತ್ಯ
Last Updated 13 ಅಕ್ಟೋಬರ್ 2022, 1:59 IST
ಅಕ್ಷರ ಗಾತ್ರ

ಮಳವಳ್ಳಿ: ಚಾಕೊಲೆಟ್ ನೀಡುವುದಾಗಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು.

ಜಿಲ್ಲಾ ಕುರುಬರ ಸಂಘ, ಮಳವಳ್ಳಿ ಯುವಕ ಮಿತ್ರರು, ಜನವಾದಿ ಮಹಿಳಾ ಸಂಘಟನೆ, ಪ್ರಾಂತ ಕೃಷಿ ಕೂಲಿಕಾರರ ಸಂಘ, ಪ್ರಾಂತ ರೈತ ಸಂಘ, ಸೌಹಾರ್ದ ನಾಗರಿಕ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಟ್ಟಣದ ಪುರ ಪೊಲೀಸ್ ಠಾಣೆ ಮುಂಭಾಗ ಕೆಲ ಕಾಲ ರಸ್ತೆ ತಡೆ ನಡೆಸಿದರು.

ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಆರೋಪಿಯನ್ನು ಗಲ್ಲುಶಿಕ್ಷೆಗೆ ಗುರಿ ಪಡಿಸುವಂತೆ ಆಗ್ರಹಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ದೇವಿ ಮಾತನಾಡಿ, ತಾಲ್ಲೂಕಿನಲ್ಲಿ ಹೆಣ್ಣು ಮಕ್ಕ ಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.

ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಪುಟ್ಟಬಸವಯ್ಯ, ಮುಖಂಡರಾದ ಎಂ.ಲಿಂಗರಾಜು, ಎನ್.ಎಲ್.ಭರತ್ ರಾಜ್, ಬಿ.ಮಹ ದೇವು, ಶಿವಮಲ್ಲಯ್ಯ, ಸುನೀತಾ, ಮಂಜುಳಾ ಇದ್ದರು.

ವರ್ಗಾವಣೆಗೆ ಆಗ್ರಹ: ಮರಣೋತ್ತರ ಪರೀಕ್ಷೆ ನಂತರ ಬಾಲಕಿಯ ಶವವನ್ನು ಪಟ್ಟಣದ ದೊಡ್ಡಕೆರೆ ಬಳಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗಿಯಾಗಿ ಅನಂತ್ ರಾಂ ವೃತ್ತ ಬಳಿ ಸೇರಿ ಆರೋಪಿ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲೆಡೆ ಮದ್ಯ ಅಕ್ರಮ ಮಾರಾಟ, ಪಟ್ಟಣದ ಬಹುತೇಕ ಕಡೆ ಗಾಂಜಾ, ವೈಶ್ಯಾವಾಟಿಕೆ ವ್ಯಾಪಕವಾಗಿ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಿಫಲರಾಗಿ ದ್ದಾರೆ. ಪಟ್ಟಣದಲ್ಲಿನ ಒಬ್ಬರು ಇನ್‌ಸ್ಪೆಕ್ಟರ್‌ ಮೂರು ವರ್ಷಗಳಿಂದ ಇಲ್ಲಿಗೆ ವರ್ಗಾವಣೆ ಮಾಡಿಸಿಕೊಂಡು ಕಾನೂನು ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಸ್ಥಳಕ್ಕೆ ಬಂದ ಡಿವೈಎಸ್ಪಿ ಎನ್.ನವೀನ್ ಕುಮಾರ್ ಅವರಿಗೆ ಪಿಐ ಎ.ಕೆ.ರಾಜೇಶ್ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಬಾಲಕಿಯ ತಾಯಿ ಮಾತನಾಡಿ, ಮುಗ್ಧ ಮಗುವಿನ ಮೇಲೆ ವಿಕೃತಿ ಮೆರೆದಿರುವ ವ್ಯಕ್ತಿಯನ್ನು ಗುಂಡಿಕ್ಕಿ ಕೊ ಲ್ಲಬೇಕು ಎಂದು ಕಣ್ಣೀರು ಹಾಕಿದರು.

ಶಾಸಕ ಡಾ.ಕೆ.ಅನ್ನದಾನಿ ಮಾತ ನಾಡಿ, ಆರೋಪಿಯನ್ನು ಬಂಧಿಸಿರುವ ಬಗ್ಗೆ ಪೊಲೀಸರು ಖಚಿತ ಪಡಿಸಿದ್ದು, ಕಠಿಣ ಶಿಕ್ಷೆ ವಿಧಿಸ ಬೇಕು. ಬಾಲಕಿಯ ಕುಟುಂಬಕ್ಕೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಿಲ್ಲಾಧಿಕಾರಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಮುಸ್ಲಿಂ ಸಮುದಾಯದ ಮುಖಂಡರು ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಸಿದರು.

ಟ್ಯೂಷನ್‌ಗೆ ಬಂದಿದ್ದಾಗ ಅತ್ಯಾಚಾರ, ಕೊಲೆ
ಟ್ಯೂಷನ್‌ಗೆ ಬಂದಿದ್ದ ಬಾಲಕಿಗೆ, ಅಲ್ಲಿನ ಕೆಲಸಗಾರನೇ ಚಾಕೊಲೇಟ್‌ ಆಸೆ ತೋರಿಸಿ ಹೊರಗೆ ಕರೆದೊಯ್ದು ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮೃತದೇಹ ನೀರಿನ ಸಂಪ್‌ನಲ್ಲಿ ಪತ್ತೆಯಾಗಿದ್ದು, 50 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಮೈಸೂರು ಮೂಲದ ಆರೋಪಿ ಪಟ್ಟಣದ ಟ್ಯೂಷನ್‌ ಕೇಂದ್ರವೊಂದರಲ್ಲಿ 15 ವರ್ಷದಿಂದ ಕೆಲಸಮಾಡುತ್ತಿದ್ದ. ಮಂಗಳವಾರ ಬೆಳಿಗ್ಗೆ 11 ಗಂಟೆಯಲ್ಲಿ ಬಾಲಕಿಗೆ ಕರೆ ಮಾಡಿ ಟ್ಯೂಷನ್‌ಗೆ ಬರುವಂತೆ ತಿಳಿಸಿದ್ದ. ಬಂದಾಗ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದಕಟ್ಟಡದ ಬಳಿ ಕರೆದೊಯ್ದು ಅತ್ಯಾಚಾರ ಎಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿ ಮೃತದೇಹವನ್ನು ಸಂಪ್‌ನಲ್ಲಿ ಹಾಕಿದ್ದ’ ಎಂದು ಪೊಲೀಸರುತಿಳಿಸಿದ್ದಾರೆ.

‘ಸಂಜೆಯಾದರೂ ಮಗಳು ಮನೆಗೆ ಬಾರದೆ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಆರೋಪಿಯೂ ಅಮಾಯಕನಂತೆ ವರ್ತಿಸಿಬಾಲಕಿಯನ್ನು ಹುಡುಕಲು ಸಹಾಯ ಮಾಡಿದ್ದ. ಸಂಜೆ 5 ಗಂಟೆಗೆ ಮೃತದೇಹ ಪತ್ತೆಯಾದ ನಂತರ ತನಿಖೆ ಆರಂಭಿಸಿ, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮಾಲೀಕನ ವಿಚಾರಣೆ ನಡೆಸಲಾಯಿತು. ಶ್ವಾನದಳ ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿ ಸಿಕ್ಕಿಬಿದ್ದ. ಸಾಕ್ಷ್ಯಗಳಿದ್ದವು. ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT