ಬುಧವಾರ, ಮಾರ್ಚ್ 22, 2023
31 °C
ವಿಜಯಪುರದಲ್ಲೇ ಇದ್ದರೂ ಬಿಜೆಪಿ ಸಮಾವೇಶಕ್ಕೆ ಬಾರದ ಶಾಸಕ

ನಡ್ಡಾ ಸಮಾವೇಶಕ್ಕೆ ಶಾಸಕ ಯತ್ನಾಳ ಗೈರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ವಿಜಯಪುರ ನಗರ, ಸಿಂದಗಿಯಲ್ಲಿ ಭಾಗವಹಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೈರಾಗಿದ್ದರು.

ಕಲಬುರ್ಗಿಯಿಂದ ಹೆಲಿಕಾಫ್ಟರ್‌ ಮೂಲಕ ನಗರದ ಸೈನಿಕ್ ಶಾಲೆಯ ಮೈದಾನದಲ್ಲಿ ಬಂದಿಳಿದ ನಡ್ಡಾ ಅವರನ್ನು ಸ್ವಾಗತಿಸಲು ಸಹ ಯತ್ನಾಳ ಬಾರದೇ ಇರುವುದು ರಾಜಕೀಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಜ್ಞಾನ ಯೋಗಾಶ್ರಮಕ್ಕೆ ನಡ್ಡಾ ಭೇಟಿ ನೀಡುವಾಗ ಸ್ವಾಗತಿಸಲು ಬರುತ್ತಾರೆ ಎಂದು ಬಿಜೆಪಿ ಸ್ಥಳೀಯ ಮುಖಂಡರು ನಿರೀಕ್ಷಿಸಿದ್ದರು. ಆದರೆ, ಅಲ್ಲಿಗೂ ಬಾರದೇ ಸಂಪೂರ್ಣ ದೂರ ಉಳಿದ್ದಿದ್ದರು.

ಬಿಜೆಪಿ ಮುಖಂಡರ ವಿರುದ್ಧ ಮುನಿಸಿಕೊಂಡಿರುವ ಯತ್ನಾಳ ಅವರು ವಿಜಯಪುರದಲ್ಲೇ ಇದ್ದರೂ ಸಹ ನಡ್ಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯಪುರ ನಗರದಲ್ಲೇ ನಡೆದ ಬಿಜೆಪಿ ‘ವಿಜಯ ಸಂಕಲ್ಪ’ ಅಭಿಯಾನಕ್ಕೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮಕ್ಕೆ ಯತ್ನಾಳ ಅವರಿಗೆ ಪಕ್ಷದಿಂದ ಆಹ್ವಾನ ನೀಡದೇ ಉದ್ದೇಶ ಪೂರ್ವಕವಾಗಿ ಕಾರ್ಯಕ್ರಮದಿಂದ ದೂರ ಇಡಲಾಗಿತ್ತು ಎಂಬ ಮಾತು ಸಹ ಯತ್ನಾಳ ಅವರ ಬೆಂಬಲಿಗರಿಂದ ಕೇಳಿಬಂದಿದೆ.

ಪಕ್ಷದ ಸಚಿವರು, ಮುಖಂಡರ ವಿರುದ್ಧ ಪದೇ ಪದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಟೀಕೆ ಮಾಡುವ ಮೂಲಕ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಯತ್ನಾಳ ಅವರಿಗೆ, ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಬಿಜೆಪಿ ಹೈಕಮಾಂಡ್‌ ಕಳೆದ ವಾರ ಸೂಚನೆ ನೀಡಿತ್ತು. 

ಶಾಸಕ ಯತ್ನಾಳ ಅವರು ಯಾರನ್ನು ನಿರಂತರವಾಗಿ ಕಟುವಾದ ಮತ್ತು ಅವಾಚ್ಯ ಶಬ್ಧಗಳಿಂದ ಟೀಕಿಸುತ್ತಾ ಬಂದಿದ್ದಾರೋ ಅವರನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಕಲಬುರ್ಗಿಯಿಂದ ವಿಜಯಪುರಕ್ಕೆ ಹೆಲಿಕಾಫ್ಟರ್‌ನಲ್ಲಿ ಒಟ್ಟಿಗೆ ಕರೆದುಕೊಂಡು ಬರುವ ಮೂಲಕ ಪಕ್ಷಕ್ಕೆ ಯಡಿಯೂರಪ್ಪ ಮುಖ್ಯ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂಬ ಮಾತು ಬಿಜೆಪಿ ವಲಯದಿಂದ ಕೇಳಿಬಂದಿತು.

ಹೆಲಿಕಾಫ್ಟರ್ ಮೂಲಕ ವಿಜಯಪುರಕ್ಕೆ ಬಂದ ಜೆ.ಪಿ.ನಡ್ಡಾ, ಬಿ.ಎಸ್‌.ಯಡಿಯೂರಪ್ಪ ಮತ್ತು ಸಚಿವ ಅಶ್ವಥ್‌ ನಾರಾಯಣ ಅವರನ್ನು ಶಾಸಕರಾದ ಎ.ಎಸ್‌.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ ಹಾಗೂ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್‌ ಸದಸ್ಯರಾದ ಹನುಮಂತ ನಿರಾಣಿ, ಪಿ.ಎಚ್‌.ಪೂಜಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಕೂಚಬಾಳ, ಮುಖಂಡರಾದ ಗೋಪಾಲ ಕಾರಜೋಳ ಮತ್ತು ಉಮೇಶ ಕಾರಜೋಳ ಅವರು ಸ್ವಾಗತಿಸಿದರು.

ಕಾಂಗ್ರೆಸ್ ಎಂದರೆ ಕಮಿಷನ್‌: ಜೆ.ಪಿ. ನಡ್ಡಾ

ವಿಜಯಪುರ: ‘ಬಿಜೆಪಿ ಎಂದರೆ ವಿಕಾಸ, ಪಾರದರ್ಶಕತೆ, ಕಾಂಗ್ರೆಸ್ ಎಂದರೆ ವಿನಾಶ, ಭ್ರಷ್ಟಾಚಾರ, ಕಮಿಷನ್.  ಹೀಗಾಗಿ ಕಾಂಗ್ರೆಸ್‌ಗೆ ವಿಶ್ರಾಂತಿ ನೀಡಿ, ಕೆಲಸ ಮಾಡುವ ಬಿಜೆಪಿಯವರಿಗೆ ಮತ ನೀಡಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ಸಿಂದಗಿಯಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ವರ ವಿಕಾಸವೇ ಬಿಜೆಪಿ ಮೂಲಮಂತ್ರವಾದರೆ, ಅರಾಜಕತೆ ಸೃಷ್ಟಿಯೇ ಕಾಂಗ್ರೆಸ್ ಇತಿಹಾಸ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಹಣಬಲ, ತೋಳ್ಬಲ, ಹೆಂಡದ ಬಲ ಪ್ರಯೋಗಿಸಿ ಅಧಿಕಾರಕ್ಕೆ ಬರುವ ಕನಸು ಕಾಣುವುದನ್ನು ಕಾಂಗ್ರೆಸ್ ಬಿಡಬೇಕು ಎಂದರು.

ಮುಂಬರುವ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಅಸ್ತಿತ್ವದಲ್ಲಿಯೇ ಇರುವುದಿಲ್ಲ, ನಾಯಕರೇ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಜನತೆ ಮರೆಯುತ್ತಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು