ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು, ಹೈಕಮಾಂಡ್‌ನಿಂದ ಸಿಎಂ ಆಯ್ಕೆ: ಸಿದ್ದರಾಮಯ್ಯ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ
Last Updated 2 ನವೆಂಬರ್ 2021, 16:07 IST
ಅಕ್ಷರ ಗಾತ್ರ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಬಳಿಕ ಪಕ್ಷದ ಹೆಚ್ಚಿನ ಶಾಸಕರ ಅಭಿಪ್ರಾಯ ಮತ್ತು ಹೈಕಮಾಂಡ್‌ ತೀರ್ಮಾನದ ಆಧಾರದಲ್ಲಿ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಉಪ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಕ್ಷದ ಯಾವುದೇ ನಾಯಕರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆ ವ್ಯಕ್ತಪಡಿಸಿದರೂ ತಪ್ಪಲ್ಲ. ಆದರೆ, ಶಾಸಕರು ಮತ್ತು ಹೈಕಮಾಂಡ್‌ ಬೆಂಬಲವೇ ಅಂತಿಮವಾಗಲಿದೆ’ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವನತಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯೂ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈ ಕಾರಣದಿಂದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಹಾನಗಲ್‌ ಕ್ಷೇತ್ರದಲ್ಲೇ ಬಿಜೆಪಿ ಸೋಲು ಕಂಡಿದೆ. ಮುಖ್ಯಮಂತ್ರಿಯವರ ಭಾವನಾತ್ಮಕ ಮಾತುಗಳಿಗೆ ಜನರು ಮರುಳಾಗಿಲ್ಲ. ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಮಗ ಕೂಡ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಆದರೂ, ಬಿಜೆಪಿಗೆ ಬೆಂಬಲ ಸಿಕ್ಕಿಲ್ಲ ಎಂದರು.

ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಹೀನಾಯವಾಗಿ ಸೋತಿದೆ. ಹಾನಗಲ್‌ನಲ್ಲಿ ನಾಲ್ಕಂಕಿ ಮತ ಪಡೆಯಲೂ ಸಾಧ್ಯವಾಗಿಲ್ಲ. ಅವರ ಪಕ್ಷದ ಸೋಲಿಗೆ ಕಾರಣವೇನು ಎಂಬುದನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನೇ ಕೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

‘ಸಿಂದಗಿಯಲ್ಲಿ ಜೆಡಿಎಸ್‌ನಿಂದ ಬಂದವರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಸಮನ್ವಯದ ಕೊರತೆ ಸೋಲಿಗೆ ಕಾರಣ ಎಂಬ ಚರ್ಚೆ ಇದೆ. ಆದರೆ, ಪರಿಶೀಲಿಸಿದ ಬಳಿಕವೇ ಗೊತ್ತಾಗಬೇಕು. ನಾನು ಕೂಡ ಜೆಡಿಎಸ್‌ನಿಂದ ಬಂದು ಗೆದ್ದಿದ್ದೇನೆ. ಜಮೀರ್‌ ಅಹಮ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ್‌ ಕೂಡ ಗೆದ್ದಿದ್ದಾರೆ’ ಎಂದರು.

ಅಲ್ಪಸಂಖ್ಯಾತರು ಹಿಂದೆಯೂ ಜೆಡಿಎಸ್‌ ಪಕ್ಷವನ್ನು ನಂಬಿರಲಿಲ್ಲ, ಮುಂದೆಯೂ ನಂಬುವುದಿಲ್ಲ. ಅದೊಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT