ಮಂಗಳವಾರ, ಫೆಬ್ರವರಿ 7, 2023
27 °C
‘ಶಾಸಕರ ಅನುದಾನ’ ಜಿಲ್ಲಾವಾರು ಬಿಡುಗಡೆ

ಕ್ಷೇತ್ರ ಅಭಿವೃದ್ಧಿಗೆ ಪೈಪೋಟಿ: ಕೆಲಸ ಮಾಡಿದರೆ ತಕ್ಷಣ ನಿಧಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇನ್ನು ಮುಂದೆ ಕ್ರಿಯಾ ಯೋಜನೆಗೆ ತ್ವರಿತವಾಗಿ ಅನುಮೋದನೆ ಪಡೆದು ಅನುಷ್ಠಾನಗೊಳಿಸುವ ಶಾಸಕರಿಗೆ ‘ಶಾಸಕರ ನಿಧಿ’ಯ ₹ 2 ಕೋಟಿ ವೆಚ್ಚ ಮಾಡುವ ಅವಕಾಶ ಆದ್ಯತೆ ಮೇರೆಗೆ ಸಿಗಲಿದೆ.

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ವೆಚ್ಚದ ಪ್ರಗತಿಯನ್ನು ಕ್ಷೇತ್ರವಾರು ಪರಿಶೀಲಿಸಲು ಮತ್ತು ಈ ನಿಧಿ ಬಳಕೆಯಲ್ಲಿ ಶಾಸಕರ ಸಾಧನೆ ಅಳೆಯಲೂ ಸಾಧ್ಯವಾಗಲಿದೆ. ಇದಕ್ಕಾಗಿ, ಈ ಯೋಜನೆಯ ಅನುದಾನವನ್ನು ಇನ್ನು ಮುಂದೆ ಕ್ಷೇತ್ರವಾರು ಬದಲು ಜಿಲ್ಲಾವಾರು ಬಿಡುಗಡೆ ಮಾಡುವಂತೆ ಯೋಜನಾ ಇಲಾಖೆಗೆ ಆರ್ಥಿಕ ಇಲಾಖೆ ಸೂಚಿಸಿದೆ.

ಮೊದಲು ₹ 2 ಕೋಟಿಯ ಕಾಮಗಾರಿಗಳನ್ನು ಪೂರ್ಣಗೊಳಿಸುವ ಶಾಸಕರಿಗೆ ಆದ್ಯತೆಯಲ್ಲಿ ಪೂರ್ಣ ನಿಧಿ ಲಭ್ಯವಾಗಲಿದೆ. ಈ ವ್ಯವಸ್ಥೆ ಅನುದಾನ ಬಳಕೆ ಮತ್ತು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಶಾಸಕರ ಮಧ್ಯೆ ಪೈಪೋಟಿಗೂ ವೇದಿಕೆಯಾಗಲಿದೆ. ಆಯಾ ವರ್ಷದ ನಿಧಿಯನ್ನು ವೆಚ್ಚ ಮಾಡಲು ಜೂನ್‌ ಅಂತ್ಯದೊಳಗೆ ಕ್ರಿಯಾ ಯೋಜನೆಯನ್ನು ಶಾಸಕರು ಅಂತಿಮಗೊಳಿಸಬೇಕು. ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ವೆಚ್ಚದ ಹಣವನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಲಿದ್ದಾರೆ.

ಶಾಸಕರ ನಿಧಿ ಬಿಡುಗಡೆ ಕುರಿತಂತೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಪರಿಷತ್‌ ಸದಸ್ಯರು ಸಭೆ ಸೇರಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ, ಅನುದಾನ ಮತ್ತು ವೆಚ್ಚ ಕುರಿತು ಆರ್ಥಿಕ ಇಲಾಖೆ ನಿರ್ದೇಶನ ನೀಡಿದೆ. ಪ್ರಸಕ್ತ ಸಾಲಿನಲ್ಲಿ (2021–22) ₹ 2 ಕೋಟಿಯ ಕ್ರಿಯಾ ಯೋಜನೆ ತಯಾರಿಸಲು ಕೂಡಾ ಇಲಾಖೆ ಒಪ್ಪಿಗೆ ನೀಡಿದೆ.

ಶಾಸಕರ ಬೇಡಿಕೆಯಂತೆ, ಈ ಯೋಜನೆಯಡಿ ಹಿಂದಿನ ವರ್ಷಗಳ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಯೋಜನಾ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಉತ್ತರಿಸಿದ್ದ ಆರ್ಥಿಕ ಇಲಾಖೆ, 2020–21ನೇ ಸಾಲಿನಲ್ಲಿ ಸರ್ಕಾರ ಕೋವಿಡ್‌ ಕಾರಣ ಪ್ರತಿ ಕ್ಷೇತ್ರಕ್ಕೆ ₹2 ಕೋಟಿ ಬದಲು ₹ 1 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಆದರೆ, ಯೋಜನಾ ಇಲಾಖೆ ಪ್ರತಿ ಕ್ಷೇತ್ರಕ್ಕೆ ₹ 2 ಕೋಟಿ ಬಿಡುಗಡೆ ಮಾಡಿದೆ. ಹೀಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿರುವ ಒಟ್ಟು ಮೊತ್ತ ₹ 300 ಕೋಟಿಯನ್ನು 2019–20ನೇ ಸಾಲಿನಲ್ಲಿ ಬಿಡುಗಡೆ ಮಾಡಲು ಬಾಕಿ ಇದ್ದ ₹ 300 ಕೋಟಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಪ್ರಸಕ್ತ ಲಭ್ಯವಿರುವ ಅನುದಾನ ಪೂರ್ಣವಾಗಿ ವೆಚ್ಚವಾದ ಬಳಿಕ ಪ್ರಸ್ತಾವನೆ ಸಲ್ಲಿಸಿ
ದರೆ 2018–19ನೇ ಸಾಲಿನಲ್ಲಿ ಬಿಡುಗಡೆ ಮಾಡಲು ಬಾಕಿ ಇದ್ದ ₹ 127.69 ಕೋಟಿ ಬಿಡುಗಡೆ ಮಾಡಲು ಒಪ್ಪಿದೆ.

ನೋಡಲ್‌ ಜಿಲ್ಲೆಗೆ ಅನುದಾನ: ವಿಧಾನ ಪರಿಷತ್‌ ಸದಸ್ಯರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುವುದರಿಂದ, ಅವರು ಆಯ್ಕೆ ಮಾಡಿಕೊಂಡ ಜಿಲ್ಲೆಯ ಜಿಲ್ಲಾಧಿಕಾರಿಯ ಖಾತೆಗೆ ಶಾಸಕರ ನಿಧಿ ಬಿಡುಗಡೆ ಮಾಡಲಾಗುವುದು. ಕ್ರಿಯಾ ಯೋಜನೆಗೆ ನೋಡಲ್‌ ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಅನುಮೋದನೆ ಪಡೆಯಬೇಕು. ಕಾಮಗಾರಿ ಅನುಷ್ಠಾನಗೊಳಿಸಿದ ಏಜೆನ್ಸಿಯ ಖಾತೆಗೆ ವೆಚ್ಚದ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಯೋಜನಾ ಇಲಾಖೆ ತಿಳಿಸಿದೆ.

2 ವರ್ಷಕ್ಕೂ ಹೆಚ್ಚು ಅವಧಿಯಿಂದ  ₹ 295.30 ಕೋಟಿ ಬಾಕಿ!:

‘ಶಾಸಕರ ನಿಧಿ’ಯಡಿ ವಿಧಾನಸಭೆ ಸದಸ್ಯರಿಗೆ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ₹ 241.97 ಕೋಟಿ ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ₹ 53.33 ಕೋಟಿ ಸೇರಿ ಒಟ್ಟು 295.30 ಕೋಟಿ, ಕಾಮಗಾರಿಗಳು ಆರಂಭವಾಗದ ಕಾರಣ ಎರಡು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಉಳಿದಿದೆ.

ಆ ಹಣವನ್ನು ವಾಪಸ್ ಪಡೆಯಲು ಅಥವಾ ವೆಚ್ಚ ಮಾಡಲು ಅವಕಾಶ ಇರಲಿಲ್ಲ. ಹೀಗಾಗಿ, ಬಾಕಿ ಮೊತ್ತವನ್ನು ರಾಜ್ಯಮಟ್ಟದಲ್ಲಿ ಕೇಂದ್ರೀಕೃತ ಬ್ಯಾಂಕ್‌ ಖಾತೆ ತೆರೆದು ಜಮೆ ಮಾಡಬೇಕು ಎಂದು ಆರ್ಥಿಕ ಇಲಾಖೆ ಸಲಹೆ ನೀಡಿದೆ. ಈ ಮೊತ್ತವನ್ನು ಎಲ್ಲ ಶಾಸಕರು ಮತ್ತು ಪರಿಷತ್‌ ಸದಸ್ಯರಿಗೆ ಮರುಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಯೋಜನಾ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿಯ ನಿರ್ದೇಶಕ ಡಿ. ಚಂದ್ರಶೇಖರಯ್ಯ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು