ಸೋಮವಾರ, ಜನವರಿ 25, 2021
17 °C

ಕುರುಬರ ಎಸ್‌.ಟಿ ಹೋರಾಟದ ನೇತೃತ್ವಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕುರುಬರನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ಪಟ್ಟಿಗೆ ಸೇರಿಸುವಂತೆ, ಸಮುದಾಯವು ನಡೆಸುತ್ತಿರುವ ಹೋರಾಟದ ನಾಯಕತ್ವವನ್ನು ಸಿದ್ದರಾಮಯ್ಯ ಅವರೇ ವಹಿಸಿಕೊಳ್ಳುವಂತೆ ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಶುಕ್ರವಾರ ಇಲ್ಲಿ ಆಹ್ವಾನ ನೀಡಿದರು.

ಕುರುಬರ ಹೋರಾಟವನ್ನು ಯಾರೂ ಹೈಜಾಕ್ ಮಾಡುತ್ತಿಲ್ಲ. ಸಮಾಜವು ಅವರನ್ನು ಎಂದಿಗೂ ಅಗೌರವದಿಂದ ಕಂಡಿಲ್ಲ. ಟಾರ್ಗೆಟ್‌ನ ಪ್ರಶ್ನೆಯೇ ಇಲ್ಲಿಲ್ಲ ಎಂದರು.

‘ಸಮುದಾಯದ ಏಳ್ಗೆ, ಮಠ ಸ್ಥಾಪನೆ, ಕನಕ ಗೋಪುರದ ವಿಷಯದಲ್ಲಿ ಸಿದ್ದರಾಮಯ್ಯ ಈ ಹಿಂದಿನಿಂದಲೂ ಕುರುಬ ಸಮುದಾಯಕ್ಕೆ ಅಸಹಕಾರ ತೋರಿದ್ದಾರೆ. ಅವರು ಮುಖ್ಯಮಂತ್ರಿಯಿದ್ದಾಗ ಕುರುಬ ಸಮಾಜಕ್ಕೆ ಗುರುತರ ಕೊಡುಗೆ ಕೊಟ್ಟಿಲ್ಲ. ಈಗಲಾದರೂ ಸಮಾಜದ ಹಿತಕ್ಕಾಗಿ ಹೋರಾಟದ ಮುಂಚೂಣಿ ವಹಿಸಿದರೆ, ನಾವು ಅವರ ಹಿಂದೆ ನಿಲ್ಲುತ್ತೇವೆ. ನಾಯಕತ್ವ ಬಿಟ್ಟುಕೊಟ್ಟು ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಿಮ್ಮ ಬೆಳವಣಿಗೆಯಲ್ಲಿ ಸಮುದಾಯದ ತ್ಯಾಗ ದೊಡ್ಡದಿದೆ. ಬಹಳಷ್ಟು ಮಂದಿ ನಿಮಗಾಗಿ ಕುರಿ ಮಾರಿದ್ದಾರೆ. ನೀವೇ ಹೋರಾಟ ಅಲ್ಲಗಳೆದರೆ ಹೇಗೆ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

‘ನೀವೇ ಮಾಡಿಸಿದ ಸಾಮಾಜಿಕ– ಆರ್ಥಿಕ– ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯ ವರದಿಯನ್ನು ಸ್ವೀಕರಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರೆ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಿರಿ. ರಮೇಶ್‌ಕುಮಾರ್‌ ಮಾತು ಕೇಳಿ ಯಶಸ್ವಿನಿ ಯೋಜನೆ ಕೊಂದಿರಿ. ಇನ್ನಾದರೂ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ’ ಎಂದು ಸಲಹೆ ನೀಡಿದರು.

ಬೀದಿ ಹೋರಾಟ ಏಕೆ ಬೇಕು?: ಸಿದ್ದರಾಮಯ್ಯ

‘ಹೋರಾಟದ ನೇತೃತ್ವವನ್ನು ಯಾರು ವಹಿಸುವರು ಎಂಬುದು ಮುಖ್ಯವಲ್ಲ. ಈಶ್ವರಪ್ಪ, ವಿಶ್ವನಾಥ್‌ ಅಥವಾ ಸ್ವಾಮೀಜಿ ಯಾರಾದರೂ ಇರಲಿ. ಆದರೆ, ಈ ಹೋರಾಟದ ಅಗತ್ಯ ಇದೆಯೇ? ಬೀದಿ ಹೋರಾಟ ಏಕೆ ಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಪ್ರಶ್ನಿಸಿದರು.

‘ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಯಾರಾದರೂ ದೇವರನ್ನು ಬಹುವಚನದಲ್ಲಿ ಕರೆಯೋದನ್ನು ನೋಡಿದ್ದೀರಾ?’ ಎಂದು ಅವರು ವಿಶ್ವನಾಥ್‌ಗೆ ತಿರುಗೇಟು ನೀಡಿದರು.

‘ಇವನು ಏಕವಚನದಲ್ಲಿ ಎಷ್ಟು ಸಲ ಮಾತನಾಡಿದ್ದಾನೆ ಎಂಬುದನ್ನು ತೋರಿಸಲಾ? ಕೆ.ಆರ್‌.ನಗರ ಶಾಸಕರ ವಿರುದ್ಧ ಇವ ಯಾವ ಭಾಷೆಯಲ್ಲಿ ಮಾತನಾಡಿದ್ದ? ನಾನು ಉದ್ದೇಶಪೂರ್ವಕವಾಗಿ ಏಕವಚನದಲ್ಲಿ ಮಾತನಾಡುವುದಿಲ್ಲ ಎಂದರು.

ಜಿಟಿಡಿಗೆ ಕೊಟ್ಟಿದ್ದು ಎಷ್ಟು ಕೋಟಿ?

ಹುಣಸೂರು ಉಪ ಚುನಾವಣೆ ಖರ್ಚಿಗಾಗಿ ಮುಖ್ಯಮಂತ್ರಿ ನೀಡಿದ್ದ ಹಣವನ್ನು ಸಿ.ಪಿ.ಯೋಗೇಶ್ವರ್, ಎನ್.ಆರ್.ಸಂತೋಷ್ ಎತ್ತಿಕೊಂಡು ಹೋದರು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದ . ವಿಶ್ವನಾಥ್, ‘ನನ್ನ ಹೇಳಿಕೆಯಂತೆ ದೊಡ್ಡ ಮೊತ್ತ ಎಂದರೆ  ₹ 5 ಲಕ್ಷವಷ್ಟೆ’ ಎಂದರು.

‘ದೊಡ್ಡ ಮೊತ್ತ ಎಂದರೆ, ಮುಖ್ಯಮಂತ್ರಿಯಾಗಿದ್ದ ನಿಮಗೆ ಹಲವು ಕೋಟಿಗಳು. ನೀವೇ ಹೇಳಿದಂತೆ ಶಾಸಕ ಜಿ.ಟಿ.ದೇವೇಗೌಡರಿಗೆ ನೀವು ಕೊಟ್ಟ ಹಣ ಎಷ್ಟು ಕೋಟಿ? ಅದು ಬಿಳಿಯೋ? ಕಪ್ಪೋ? ಎಂಬುದನ್ನು ಬಹಿರಂಗಪಡಿಸಿ’ ಎಂದರು.

‘ಜಂಗಲ್‌ ಸಂಸ್ಕೃತಿ’ಯ ಸಿದ್ದರಾಮಯ್ಯ

ಬೆಂಗಳೂರು: ‘ಲವ್‌ ಜಿಹಾದ್‌’ ತಡೆಗೆ ಕಾಯ್ದೆ ತರಲು ಸರ್ಕಾರ ಮುಂದಾಗಿರುವ ಬಗ್ಗೆ ಸಿದ್ದರಾಮಯ್ಯ ನೀಡಿರುವ ಬೇಜವಾಬ್ದಾರಿ ಹೇಳಿಕೆಯು ಜಂಗಲ್‌ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಹಿಂದೂ ಮಹಿಳೆಯರನ್ನು ‘ಲವ್‌ ಜಿಹಾದ್‌’ ಮೂಲಕ ಮತಾಂತರಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಅನಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಕಾನೂನು ರೂಪಿಸುತ್ತಿದೆ. ‘ಕ್ರಾಸ್‌ ಬ್ರೀಡ್‌’ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು