ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 13.87 ಕೋಟಿ ವಂಚನೆ: ತುಮಕೂರಿನ ಕ್ರಷರ್‌ ಮಾಲೀಕರ ವಿರುದ್ಧ ಎಫ್‌ಐಆರ್‌

Last Updated 30 ಅಕ್ಟೋಬರ್ 2020, 18:54 IST
ಅಕ್ಷರ ಗಾತ್ರ

ಬೆಂಗಳೂರು: ಸುಳ್ಳು ಲೆಕ್ಕಪತ್ರ ಮತ್ತು ಫೋರ್ಜರಿ ದಾಖಲೆಗಳನ್ನು ಸಲ್ಲಿಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ₹ 13.87 ಕೋಟಿ ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ತುಮಕೂರಿನ ಅಪ್ಕಾನ್‌ ಕ್ರಷರ್‌ ಕಂಪನಿ ಮಾಲೀಕರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಅಪ್ಕಾನ್‌ ಕ್ರಷರ್‌ನ ಪಾಲುದಾರರಾದ ತುಮಕೂರಿನ ಬಿ.ಎನ್‌. ಪ್ರಸನ್ನಕುಮಾರ್‌, ಆಶಾ ಪ್ರಸನ್ನಕುಮಾರ್‌, ಅವರ ಮಗ ವಿಕ್ರಂ ಬಾವಿಕಟ್ಟೆ, ಕಂಪನಿಯ ಪರವಾಗಿ ಸುಳ್ಳು ಲೆಕ್ಕಪತ್ರಗಳನ್ನು ಸಿದ್ಧಪಡಿಸಿ, ಅನುಮೋದಿಸಿದ್ದ ಲೆಕ್ಕಪರಿಶೋಧಕರಾದ ಎಸ್‌.ಸಿ. ಪ್ರಶಾಂತ್‌ ಅಂಡ್‌ ಕಂಪನಿ ಹಾಗೂ ಬ್ಯಾಂಕ್‌ನ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ ಬೆಂಗಳೂರು ಘಟಕ, ತನಿಖೆ ಆರಂಭಿಸಿದೆ.

ಕೇವಲ ₹ 10 ಲಕ್ಷ ಮೌಲ್ಯದ ದಾಸ್ತಾನು ಇದ್ದರೂ, ₹ 28.68 ಕೋಟಿ ಮೌಲ್ಯದ ಜೆಲ್ಲಿ ಮತ್ತಿತರ ವಸ್ತುಗಳ ದಾಸ್ತಾನು ಇದೆ ಎಂದು ಸುಳ್ಳು ಲೆಕ್ಕಪತ್ರ ಸಲ್ಲಿಸಲಾಗಿತ್ತು. ಅದರ ಆಧಾರದಲ್ಲಿ 2016ರ ಫೆಬ್ರುವರಿ 23ರಿಂದ 2017ರ ಅಕ್ಟೋಬರ್‌ 16ರವರೆಗೆ ಅಪ್ಕಾನ್‌ ಕಂಪನಿಗೆ ₹ 26 ಕೋಟಿ ನಗದು ಸಾಲ ಮತ್ತು ₹ 1.09 ಕೋಟಿ ವಾಹನ ಸಾಲ ಮಂಜೂರು ಮಾಡಲಾಗಿತ್ತು. ₹ 13.87 ಕೋಟಿಯಷ್ಟು ಸಾಲವನ್ನು ಬಳಸಿಕೊಂಡಿರುವ ಕಂಪನಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಅಪ್ಕಾನ್‌ ಕ್ರಷರ್‌ ಕಂಪನಿಯು 2014–15ರಿಂದ 2016–17ರ ಅವಧಿಯಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಸಿದೆ ಎಂದು ಎಸ್‌.ಸಿ. ಪ್ರಶಾಂತ್‌ ಅಂಡ್‌ ಕಂಪನಿಯು ಲೆಕ್ಕಪರಿಶೋಧನಾ ವರದಿಯನ್ನು ದೃಢೀಕರಿಸಿ ನೀಡಿತ್ತು. ಅದರ ಆಧಾರದಲ್ಲೇ ಕ್ರಷರ್‌ ಪಾಲುದಾರರು ಬೃಹತ್‌ ಮೊತ್ತದ ಸಾಲವನ್ನು ಪಡೆದಿದ್ದರು. ಬ್ಯಾಂಕ್‌ನ ಅಧಿಕಾರಿಗಳು 2019ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಕ್ರಷರ್‌ ಮತ್ತು ಕ್ವಾರಿ ಗುತ್ತಿಗೆ ಪ್ರದೇಶಕ್ಕೆ ಭೇಟಿನೀಡಿ ತಪಾಸಣೆ ನಡೆಸಿದ್ದರು. ಅಲ್ಲಿ ₹ 10 ಲಕ್ಷದಷ್ಟು ದಾಸ್ತಾನು ಮಾತ್ರ ಪತ್ತೆಯಾಗಿತ್ತು’ ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬೆಂಗಳೂರು ಗಾಂಧಿನಗರ ಶಾಖೆಯ ಮುಖ್ಯ ವ್ಯವಸ್ಥಾಪಕ ಅರವಿಂದ ಯಾದವ್‌ ಅಕ್ಟೋಬರ್‌ 15ರಂದು ಸಿಬಿಐಗೆ ದೂರು ಸಲ್ಲಿಸಿದ್ದರು.

ಬ್ಯಾಂಕ್‌ಗೆ ವಂಚಿಸುವ ಉದ್ದೇಶದಿಂದಲೇ ಸುಳ್ಳು ದಾಖಲೆಗಳನ್ನು ಸಿದ್ದಪಡಿಸಲಾಗಿತ್ತು. ಈ ಪೈಕಿ ಕೆಲವು ದಾಖಲೆಗಳಲ್ಲಿನ ಸಹಿ ತಮ್ಮದೆಂದು ಲೆಕ್ಕಪರಿಶೋಧಕರು ಒಪ್ಪಿಕೊಂಡಿದ್ದು, ಕೆಲವನ್ನು ನಿರಾಕರಿಸಿದ್ದಾರೆ. ದಾಸ್ತಾನಿಗೆ ಸಂಬಂಧಿಸಿದಂತೆ ಉತ್ಪ್ರೇಕ್ಷಿತ ವರದಿಗಳನ್ನು ಸಲ್ಲಿಸಿ ಸಾಲ ಪಡೆಯಲಾಗಿದೆ. ಬಳಿಕ ಮರುಪಾವತಿ ಮಾಡದೇ ವಂಚಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಸಿಬಿಐ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿ ಥಾಮ್ಸನ್‌ ಜೋಸ್‌ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಕಮಲಪ್ಪ ಪ್ರಕಾಶ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT