ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹16.62 ಕೋಟಿ ದುರ್ಬಳಕೆ: ಜಲಸಂಪನ್ಮೂಲ ಇಲಾಖೆಯ ಐವರ ಅಮಾನತು

ಟೆಂಡರ್‌ ಕರೆಯದೆ, ಕಾಮಗಾರಿ ನಿರ್ವಹಿಸದೆ ನಕಲಿ ಬಿಲ್‌ ಸೃಷ್ಟಿ
Last Updated 24 ನವೆಂಬರ್ 2021, 19:53 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಟೆಂಡರ್‌ ಕರೆಯದೆ ಮತ್ತು ಕಾಮಗಾರಿ ನಿರ್ವಹಿಸದೆ ಎಂಟು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ₹ 16.62 ಕೋಟಿ ದುರುಪಯೋಗ ಮಾಡಿದ ಆರೋಪದಲ್ಲಿ ಜಲಸಂಪನ್ಮೂಲ ಇಲಾಖೆಯ ಐದು ಮಂದಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ಅಲ್ಲದೆ, ಇದೇ ಪ್ರಕರಣದಲ್ಲಿ ಭಾಗಿಯಾದ, ಸದ್ಯ ಬೇರೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ಇಬ್ಬರನ್ನು ಅಮಾನತು ಮಾಡುವಂತೆ ಆ ಅಧಿಕಾರಿಗಳ ಮಾತೃ ಇಲಾಖೆಗೆ (ಆರ್ಥಿಕ ಇಲಾಖೆ) ಜಲಸಂಪನ್ಮೂಲ ಇಲಾಖೆ ಸೂಚಿಸಿದೆ.

ಕೆಎನ್‌ಎನ್‌ಎಲ್‌ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವ್ಯಾಪ್ತಿಯ ಅಥಣಿಯ ಹಿಪ್ಪರಗಿ ಬ್ಯಾರೇಜ್‌ ನಾಲಾ (ಎಚ್‌ಬಿಸಿ) ವಿಭಾಗದಲ್ಲಿ ಹಣ ದುರ್ಬಳಕೆ ಪ್ರಕರಣ ನಡೆದಿದೆ.

ಕೆಎನ್‌ಎನ್‌ಎಲ್‌ ಧಾರವಾಡ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಎಸ್‌.ಎನ್‌. ವರದರಾಜು, ಅದೇ ಕಚೇರಿಯ ಲೆಕ್ಕ ಅಧೀಕ್ಷಕರಾದ ಡಿ.ಸಿ. ಶೀಲಾ ಮತ್ತು ವಿನಾಯಕ ಅರ್ಕಸಾಲಿ, ಪ್ರಥಮ ದರ್ಜೆ ಲೆಕ್ಕ ಸಹಾಯಕರಾದ ಅನಿಲ್‌ ಜಾಧವ್‌ ಮತ್ತು ಶರಣಪ್ಪ ಅಮಾನತುಗೊಂಡವರು. ಇದೇ ಅಕ್ರಮದಲ್ಲಿ ಭಾಗಿಯಾಗಿ, ಪ್ರಸ್ತುತ ಜಲಸಂಪನ್ಮೂಲ ಇಲಾಖೆಯಿಂದ ವರ್ಗಾವಣೆಗೊಂಡು ಸದ್ಯ ‌ಬೆಳಗಾವಿ ಸ್ಮಾರ್ಟ್ ಸಿಟಿ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ಎಂ.ಎಂ. ಮಿರ್ಜಾ, ಜಮಖಂಡಿಯಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (ಕಾಡಾ) ಲೆಕ್ಕಪರಿಶೋಧಕರಾಗಿರುವ ದೀಪಕ್‌ ಎ. ಮೂಡಲಗಿ ಅವರನ್ನು ಅಮಾನತು ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಈ ಏಳು ಮಂದಿ ಮತ್ತು‌ ನಿವೃತ್ತ ಲೆಕ್ಕಾಧಿಕಾರಿ ಎಸ್‌.ಆರ್‌. ಎಲಿಗಾರ್, ಗುತ್ತಿಗೆದಾರರಾದ ಬೆಳಗಾವಿಯ ಎ.ವೈ. ಮುಲ್ಲಾ ಮತ್ತು ಆರ್‌.ಬಿ. ಶೇಖ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅವರೆಲ್ಲರ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಪರಭಾರೆ ಮಾಡದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸೂಚಿಸಿರುವ ಜಲಸಂಪನ್ಮೂಲ ಇಲಾಖೆ, ಅವರು ಹೊಂದಿರುವ ಖಾತೆಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕೆಎನ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಒಟ್ಟು ಎಂಟು ಕಾಮಗಾರಿಗಳಿಗೆ ಸಂಬಂಧಿಸಿದಂತೆ 2019ರ ಫೆ. 25ರಿಂದ 2020ರ ನ.7ರ ಮಧ್ಯೆ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿತ್ತು. ಈ ಎಂಟು ಬಿಲ್‌ಗಳ ಪೈಕಿ ಐದು ಬಿಲ್‌ಗಳು ಲಭ್ಯವಾಗಿವೆ. ಉಳಿದ ಮೂರು ನಾಪತ್ತೆಯಾಗಿರುವುದು ಕೂಡಾ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT