ಬುಧವಾರ, ಅಕ್ಟೋಬರ್ 21, 2020
21 °C
ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರ: ಅಕ್ಟೋಬರ್ 16ರಂದು ಹಸ್ತಾಂತರ ಕಾರ್ಯಕ್ರಮ

ಬಿಎಸ್‌ಎಫ್‌ ತೆಕ್ಕೆಗೆ ಮುಧೋಳ ತಳಿ ನಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಈಗಾಗಲೇ ಭಾರತೀಯ ಸೇನೆ, ಸಶಸ್ತ್ರ ಸೀಮಾಬಲ (ಎಸ್‌ಎಸ್‌ಬಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್‌ (ಐಟಿಬಿಪಿ) ಪಡೆಗಳಲ್ಲಿ ತಮ್ಮ ಛಾಪು ಮೂಡಿಸಿರುವ ಮುಧೋಳ ತಳಿ ಶ್ವಾನಗಳು ಹೊಸದಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸೇವೆಗೆ ಸೇರ್ಪಡೆಯಾಗುತ್ತಿವೆ.

ಗಡಿಯಲ್ಲಿ ಪಹರೆಗೆ ಮುಧೋಳ ತಳಿ ನಾಯಿಗಳ ಬಳಕೆಗೆ ಬಿಎಸ್‌ಎಫ್ ಮುಂದಾಗಿದ್ದು,‌ ನಾಲ್ಕು ನಾಯಿ ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆಂಟ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಅಕ್ಟೋಬರ್ 16ರಂದು ಮುಧೋಳ ತಾಲ್ಲೂಕು ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರಕ್ಕೆ ನಾಯಿಗಳ ಕೊಂಡೊಯ್ಯಲು ಬರಲಿದೆ.

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ತಿಮ್ಮಾಪುರ ಶ್ವಾನ ಸಂಶೋಧನಾ ಕೇಂದ್ರದಲ್ಲಿ ಅಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ  ಬಿಎಸ್‌ಎಫ್‌ ತಂಡಕ್ಕೆ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಶಿವಪ್ರಸಾದ್ ತಲಾ ಎರಡು ಹೆಣ್ಣು ಹಾಗೂ ಗಂಡು ನಾಯಿಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಮಹೇಶ ಆಕಾಶಿ ’ಪ್ರಜಾವಾಣಿ‘ಗೆ ತಿಳಿಸಿದರು.

ಬಿಎಸ್‌ಎಫ್ ಕೊಂಡೊಯ್ಯುವ ನಾಯಿಗಳಿಗೆ‌ ಉತ್ತರಪ್ರದೇಶದ ಮೀರತ್‌ನಲ್ಲಿರುವ ಭಾರತೀಯ ಸೇನೆಯ ರಿಮೌಂಟ್‌ ಆಂಡ್ ವೆಟರ್ನರಿ ಕಾರ್ಪ್‌ ಸೆಂಟರ್‌ನಲ್ಲಿ (ಆರ್‌ವಿಸಿ) 10 ತಿಂಗಳ ತರಬೇತಿ ನೀಡಲಾಗುತ್ತದೆ. ಕರ್ನಾಟಕ ಪೊಲೀಸ್ ಇಲಾಖೆಯಿಂದಲೂ ಮುಧೋಳ ಶ್ವಾನಕ್ಕೆ ಬೇಡಿಕೆ ಬಂದಿದ್ದು, ಮೌಖಿಕವಾಗಿ ಕೇಳಿದ್ದಾರೆ. ಲಿಖಿತವಾಗಿ ಪತ್ರ ಬಂದ ನಂತರ ಅವರಿಗೂ ನಾಯಿಗಳ ಕೊಡಲಾಗುವುದು ಎಂದು ಡಾ.ಆಕಾಶಿ ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು